ಬ್ಯಾಂಕ್ ನೌಕರರ ವರ್ಗಾವಣೆಯ ಆಳ-ಅಗಲ | ದಮ್ಮಪ್ರಿಯ, ಬೆಂಗಳೂರು - Mahanayaka
8:03 AM Tuesday 24 - December 2024

ಬ್ಯಾಂಕ್ ನೌಕರರ ವರ್ಗಾವಣೆಯ ಆಳ–ಅಗಲ | ದಮ್ಮಪ್ರಿಯ, ಬೆಂಗಳೂರು

bank
19/07/2024

ದೇಶದಲ್ಲಿ ಹಲವಾರು ಸಮಸ್ಯೆಗಳು ಒಂದುಕಡೆಯಾದರೆ ಸರ್ಕಾರಿ ನೌಕರರ ಅದರಲ್ಲೂ ಬ್ಯಾಂಕ್ ನೌಕರರ ವರ್ಗಾವಣೆಯ ಹಿಂದಿರುವ ಹುನ್ನಾರಗಳು ಅದರ ಆಳ ಮತ್ತು ಅಗಲವನ್ನು ಅರ್ಥಮಾಡಿಕೊಳ್ಳುವುದೇ ಕಷ್ಟ. ಒಂದೊಂದು ಬಾರಿ ಬರುವ ಒಬ್ಬೊಬ್ಬ ಮುಖ್ಯಸ್ಥರು ಅವರದೇ ಆದ ಆಲೋಚನೆಗೆ ತಕ್ಕಂತೆ ನಿಯಮಗಳನ್ನು ಜಾರಿ ಮಾಡುವ ಮೂಲಕ ಸಂವಿಧಾನಿಕ ವ್ಯವಸ್ಥೆಯನ್ನು ವಿರೂಪಗೊಳಿಸುವವರೇ ಹೆಚ್ಚು ಎನಿಸುತ್ತಿದೆ.

ಇವರನ್ನೆಲ್ಲಾ ಗಮನಿಸಿದಾಗ ಇವರು ಸಂವಿಧಾನ ವಿರೋಧಿಗಳಿರಬೇಕು ಎನಿಸುತ್ತದೆ. ಅಷ್ಟರ ಮಟ್ಟಿಗೆ ಕಾನೂನು ಉಲ್ಲಂಘನೆ ನಡೆದು ವರ್ಗಾವಣೆಯಲ್ಲಿ ತಾರತಮ್ಯ ಮಾಡುವುದನ್ನು ಬ್ಯಾಂಕ್ ವ್ಯವಸ್ಥೆಯೊಳಗೆ ಕಾಣಬಹುದಾಗಿದೆ.

ಆದರೆ ಸರ್ಕಾರಿ ನೌಕರರಿಗೂ ಭಾವನೆಗಳಿವೆ, ಅವರಿಗೂ ಕುಟುಂಬಗಳಿವೆ, ಅವರಿಗೂ ಸಮಾಜದಲ್ಲಿ ಖುಷಿಯಾಗಿ ಬದುಕಬೇಕೆಂಬ ಆತಂಕಗಳು, ತನ್ನ ಬಂಧು ಬಳಗಗಳ ಜೊತೆಯಲ್ಲಿ ಸಂತಸದ ಜೀವನ ನಡೆಸಬೇಕೆಂಬ ಹಿತಾಸಕ್ತಿಗಳಿರುತ್ತವೆ, ವಯಸ್ಸಾದ ಅಪ್ಪ ಅಮ್ಮ ಅತ್ತೆ ಮಾವ ಬಂಧುಗಳ ನಡುವಿನ ಒಡನಾಟ, ಪುಟಾಣಿ ಮಕ್ಕಳೊಡನೆ ಕಳೆಯುವ ನಗುಮುಖದ ಚಲ್ಲಾಟ ಇವೆಲ್ಲವನ್ನೂ ಎಲ್ಲರು ಬಯಸುವುದು ಸಹಜ ಇಂತಹದ್ದೊಂದು ಸುಂದರ ಬದುಕನ್ನು ಕಳೆದುಕೊಂಡು, ದಿನನಿತ್ಯ ತನ್ನ ಬದುಕನ್ನು ಯಾಂತ್ರಿಕವಾಗಿ ಸಾಗಿಸುತ್ತ ಕೊನೆಗೆ ನಿವೃತ್ತಿ ಪಡೆದಾಗ ಪೇಚಾಡುವ ಬ್ಯಾಂಕ್ ನೌಕರರ ಸಂಖ್ಯೆಯೇ ಹೆಚ್ಚಾಗುತ್ತಿದೆ.

ಪ್ರತೀ ವರ್ಷ ಏಪ್ರಿಲ್ ತಿಂಗಳು ಬಂತೆಂದರೆ ಮಕ್ಕಳಿಗೆ ಬೇಸಿಗೆ ರಜೆ ಪ್ರಾರಂಭವಾಗಿ, ಮಕ್ಕಳು ಶಿಭಿರಗಳು, ಪ್ರವಾಸಗಳು ಎಂದು ಪೋಷಕರನ್ನು ಪೀಡಿಸುತ್ತಿದ್ದರೆ, ತಂದೆ ತಾಯಿಗಳು ಸಂಸ್ಥೆಯ ಕೆಲಸ ಆರ್ಥಿಕ ವರ್ಷದ ಮುಕ್ತಾಯದ ಲೆಕ್ಕಪರಿಶೋಧನೆ ಇದರಲ್ಲಿಯೇ ತನ್ನ ಕಾಲವನ್ನು ಮುಗಿಸಿಬಿಡುತ್ತಾರೆ. ಇನ್ನು ಶಾಲೆಗಳು ಪ್ರಾರಂಭವಾಗುವ ಹೊತ್ತಿಗೆ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು, ಅಲ್ಲಿನ ಶಾಲೆಯ ಶುಲ್ಕ, ಬಸ್ ವ್ಯವಸ್ಥೆ, ಊಟ ಉಪಚಾರಗಳ ವ್ಯವಸ್ಥೆ ಕುಟುಂಬಗಳ ಸ್ಥಳಾಂತರ, ಎಲ್ಲವನ್ನು ಗೊತ್ತು ಮಾಡುವ ಆತಂಕದಲ್ಲಿಯೇ ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿಬಿಡುತ್ತದೆ. ಇದಲ್ಲದೆ ಮನೆಯಲ್ಲಿರುವ ವಯಸ್ಸಾದ ವೃದ್ಧರ ಆರೈಕೆಯ ಕಡೆ ಗಮನ ಕೊಟ್ಟ ಬ್ಯಾಂಕ್ ನೌಕರರು ತನ್ನ ಇಡೀ ಜೀವನದ ನೆಮ್ಮದಿ ಸುಖ ಎಲ್ಲವನ್ನು ಒತ್ತೆಯಿಟ್ಟು ಮೂಕರಂತೆ ದುಡಿಯುತ್ತಿರುತ್ತಾರೆ.

ಆದರೂ ಅವರನ್ನು ಪ್ರತೀ ವರ್ಷ ಏಪ್ರಿಲ್ ಮೇ ತಿಂಗಳಲ್ಲಿ ಕಾಡುವ ದೊಡ್ಡ ಪ್ರಶ್ನೆ ಈ ಬಾರಿ ನನ್ನ ವರ್ಗಾವಣೆಯಾದರೆ ಯಾವ ಸಂಬಂಧವನನ್ನು ದೂರ ಮಾಡಬೇಕೋ ಎನ್ನುವ ಆತಂಕ ಪ್ರಾರಂಭವಾಗಿಬಿಡುತ್ತದೆ. ಅದು ವಯಸ್ಸಾದ ತಂದೆ ತಾಯಿಯ ಸಂಬಂಧವಾಗಬಹುದು, ಪುಟಾಣಿ ಮಕ್ಕಳ ನಗುವಿನಿಂದ ದೂರ ಮಾಡುವುದಾಗಬಹುದು, ನಮ್ಮನ್ನೇ ನಂಬಿ ಚಿಕಿತ್ಸೆ ಪಡೆಯುತ್ತಿರುವ ಹಾಸಿಗೆ ಹಿಡಿದಿರುವ ವೃದ್ಧರ ಭಾವನೆಗಳಾಗಬಹುದು, ಎಲ್ಲವು ಬ್ಯಾಂಕ್ ನೌಕರರ ಪಾಲಿಗೆ ಕಳಚಿದ ಕೊಂಡಿಗಳಾಗಿ ವರ್ಗಾವಣೆ ಎನ್ನುವುದು ದೊಡ್ಡ ಭೂತವಾಗಿ ನಮ್ಮ ಕಣ್ಣ ಮುಂದೆ ಬಂದು ನಿಂತುಬಿಡುತ್ತದೆ. ಇದರಷ್ಟು ಕಠೋರ ಭೂತ ಬೇರೆ ಯಾವ ಇಲಾಖೆಯನ್ನು ಕಾಡುವುದಿಲ್ಲವೇನೋ ಅನಿಸುತ್ತದೆ. ವರ್ಷ ಪೂರ್ತಿ ದುಡಿದು ಧಣಿವಾಗಿಸಿಕೊಂಡ ಬ್ಯಾಂಕ್ ನೌಕರರು ಏಪ್ರಿಲ್ ಮೇ ಮತ್ತು ಜೂನ್ ತಿಂಗಳಲ್ಲಿ ಪರದಾಡುವುದನ್ನು ಗಮನಿಸಿದರೆ ಇಂತಹ ಬದುಕು ಯಾರಿಗೂ ಬೇಡವೆನಿಸುತ್ತದೆ. ಅಷ್ಟರ ಮಟ್ಟಿಗೆ ಇವರನ್ನು ವರ್ಗಾವಣೆಯ ವಿಚಾರ ಕಾಡುತ್ತಿರುತ್ತದೆ.

ಎಲ್ಲ ಇಲಾಖೆಯ ಸರ್ಕಾರಿ ನೌಕರರು ಕೇವಲ 8 ಗಂಟೆ ಕೆಲಸ ನಿರ್ವಹಿಸಿ ನಂತರ ಸ್ವಲ್ಪ ನಿರಾಳತೆಯಿಂದ ಮನೆಗೆ ಬರಬಹುದು, ಆದರೆ ಬ್ಯಾಂಕ್ ನೌಕರರು ಕೆಲವೊಮ್ಮೆ ರಜೆ ದಿನವನ್ನು ಒಳಗೊಂಡಂತೆ 12 ಗಂಟೆಗೂ ಹೆಚ್ಚು ಕಾಲ ದುಡಿದರು ಪ್ರತೀ ವರ್ಷ ಈ ವರ್ಗಾವಣೆ ಎನ್ನುವ ಭೂತ ಮಾತ್ರ ಅವರ ಬೆನ್ನತ್ತಿಬಿಡುತ್ತದೆ. ಇಡೀ ವರ್ಷ ಸರ್ಕಾರಿ ನಿಯಮಗಳೊಂದಿಗೆ ಗ್ರಾಹಕರನ್ನು ನಿಭಾಯಿಸುವ ಬ್ಯಾಂಕ್ ನೌಕರರು ಏಕಕಾಲಕ್ಕೆ ಒಂದೆರಡು ದಿನ ರಜೆ ಹಾಕುವುದು ಬಹಳ ಅಪರೂಪ. ಎಲ್ಲ ಟಾರ್ಗೆಟ್ ಮುಗಿಸಬೇಕು, ಸಾಲ ವಸೂಲಾತಿ ಸರಿಯಾದ ಸಮಯಕ್ಕೆ ನಡೆಯಬೇಕು, ಸಾಲ ಪಡೆದವರು ಕಟ್ಟದಿದ್ದಲ್ಲಿ ಅದನ್ನು ಕಾನೂನು ರೀತಿಯಲ್ಲಿ ಕ್ರಮ ಜರುಗಿಸುವುದೇ ಒಂದು ಹರಸಾಹಸವಾಗಿರುತ್ತದೆ. ಅಂತದ್ದರಲ್ಲಿ ಮನೆ ಮಠ ಹೆಂಡತಿ ಪುಟಾಣಿ ಮಕ್ಕಳು, ವಯಸ್ಸಾದ ತಂದೆ ತಾಯಿ ಅಜ್ಜ ಅಜ್ಜಿಯನ್ನು ಬಿಟ್ಟು ಕಾಣದ ಊರಿಗೆ ತಕ್ಷಣ ಹೊರಡಬೇಕು ಎನ್ನುವ ಭೂತ ಪ್ರತೀ ವರ್ಷ ಸುಮಾರು ಶೇಕಡ 60% ರಷ್ಟು ನೌಕರರನ್ನು ಕಾಡುತ್ತಿರುತ್ತದೆ.

ಈ ವರ್ಗಾವಣೆ ಎನ್ನುವ ಭೂತ ಕಾಡುವುದು ಕೇವಲ ಅಮಾಯಕ ಬ್ಯಾಂಕ್ ನೌಕರರನ್ನೇ ಹೊರತು ಎಲ್ಲಾ ನೌಕರರಿಗೆ ಇದು ಅನ್ವಯ ಆಗುವುದಿಲ್ಲ. ಇಂತಹ ಒಂದು ದುರಂತ ವ್ಯವಸ್ಥೆ ಬ್ಯಾಂಕ್ ವರ್ಗಾವಣೆಯಲ್ಲಿ ಇದೆ. ತುಂಬಾ ಪ್ರಭಾವಿಯಾಗಿ ಒಂದೇ ಕುರ್ಚಿ, ಒಂದೇ ಕಟ್ಟಡ, ಅಥವಾ ಒಂದೇ ನಗರದಲ್ಲಿ ಕುಳಿತು ರಾಜರಂತೆ ಮೆರೆಯುತ್ತಿರುವ ವ್ಯಕ್ತಿಗಳಿಗೆ ಯಾವ ವರ್ಗಾವಣೆಯ ಬಿಸಿ ತಟ್ಟಲಾರದು. ಇವರಿಗೆ ಯಾವುದೇ ಕಾನೂನು ರೀತಿಯ ನಿಯಮಗಳು ಅನ್ವಯ ಆಗುವುದಿಲ್ಲ, ಇಂತಹವರುಗಳು ಕೇವಲ ತಮ್ಮ ಹಿತವನ್ನುಕಾಯ್ದುಕೊಳ್ಳುವರೇ ಹೊರತು ಸಾಮಾನ್ಯ ಬ್ಯಾಂಕ್ ನೌಕರರ ಹಿತವನ್ನು ಬಯಸುವ ಸಾಹಸಕ್ಕೆ ಕೈ ಹಾಕುತ್ತಾರೆ ಎನ್ನುವ ನಂಬಿಕೆಗೆ ಬಹಳ ದೂರವೆನಿಸುತ್ತದೆ.

ಅಮಾಯಕ ನೌಕರರು, ಅಸಹಾಯಕ ಹೆಣ್ಣುಮಕ್ಕಳು, ಜಾತಿಯಲ್ಲಿ ಶೋಷಣೆಗೊಳಗಾದ ನೌಕರರು ಮತ್ತೆ ಮತ್ತೆ ಇಂತಹ ವರ್ಗಾವಣೆಗೆ ಬಲಿಪಶುಗಳಾಗುತ್ತಾರೆಯೇ ಹೊರತು, ಎಲ್ಲರಿಗು ಸಂಬಂಧಪಟ್ಟಿರುವುದಿಲ್ಲ, ವರ್ಗಾವಣೆಯಾದವರು ನನಗೆ ಪುಟ್ಟ ಮಗು, ಅಪ್ಪನಿಗೆ ಕಾಯಿಲೆ, ಅಮ್ಮ ಅಸಹಾಯಕರು, ಹೆಂಡತಿಯ ಕಾಯಿಲೆ, ಪುಟಾಣಿ ಮಕ್ಕಳ ಪಾಲನೆ ಪೋಷಣೆ ತುಂಬಾನೇ ಕಷ್ಟಕರ ಎಂದು ನಂಬಿದ ನಾಯಕರ ಬಳಿ ನಿಂತಾಗ , ಅದಕ್ಕೆ ನ್ಯಾಯ ಸಿಗುತ್ತದೆ ಎನ್ನುವ ನಂಬಿಕೆಯೇ ದೂರವಾಗಿಬಿಟ್ಟಿದೆ.

ಇನ್ನು ವರ್ಗಾವಣೆ ಮಾಡುವ ಅಧಿಕಾರದಲ್ಲಿರುವವರ ಮುಂದೆ ನಮ್ಮ ಎಲ್ಲ ಗೋಳನ್ನು ಹೇಳಿಕೊಂಡರು ತಾವು ಬದುಕಿರುವವರೆಗೂ ಅದೇ ಕುರ್ಚಿಯಲ್ಲಿ ಕುಳಿತುಕೊಂಡು ಬ್ರಹ್ಮ ವಿಷ್ಣು ಮಹೇಶ್ವರರಂತೆ ಶಾಶ್ವತ ಎನ್ನುವ ಹಾಗೆ ಬೀಗುತ್ತಿರುತ್ತಾರೆಯೇ ಹೊರತು ನಮ್ಮ ಅಳು ಅವರ ಹೃದಯವನ್ನು ತಟ್ಟುವುದಿಲ್ಲ, ಅಂತಹವರ ಮನಸ್ಸು ಕರಗಲು ಸಾಧ್ಯವೇ ಇಲ್ಲ. ಸುಮ್ಮನೆ ಕುಳಿತು ಏನೂ ಅರ್ಥವಾಗದ ರೀತಿಯಲ್ಲಿ ಕಾನೂನನ್ನು ಮಾತನಾಡಿ ಪ್ರಶ್ನಿಸುವವರ ಬಾಯಿಯನ್ನು ಮುಚ್ಚಿಸಿಬಿಡುತ್ತಾರೆ.

ಇಡೀ ವರ್ಷ ಪೂರ್ತಿ ದುಡಿದು ಬೇಸತ್ತ ಬ್ಯಾಂಕ್ ಉದ್ಯೋಗಿ ನೌಕರಿ ಎನ್ನುವ ಪಾಶಕ್ಕೆ ಗುರಿಯಾಗಿ ವರ್ಗಾವಣೆಯ ಭಯದಲ್ಲಿ ಬದುಕಬೇಕಾಗುತ್ತದೆ. ಈ ವರ್ಗಾವಣೆ ಎನ್ನುವುದು ಕೆಲವರ ಪಾಲಿಗೆ ವರವೆನಿಸಿದರು, ಸಾಮಾನ್ಯ ನೌಕರರ ಬದುಕಿನೊಡನೆ ಬಲಿಷ್ಠ ಸ್ಥಾನದಲ್ಲಿರುವ ಅಧಿಕಾರಿಗಳ ಚೆಲ್ಲಾಟ ಎನಿಸುತ್ತಿರುತ್ತದೆ. ವರ್ಗಾವಣೆಯೇ ಬೇಡ ಎನ್ನುವವರು ಉನ್ನತ ಅಧಿಕಾರಿಗಳಿಗೆ ಪರಿಚಯವಾಗಿದ್ದರೆ ಸಾಕು, ಅಂತಹವರುಗಳಿಗೆ ಯಾವ ನಿಯಮವು ಅನ್ವಯವಾಗಲಾರದು. ಯಾವ ಅಧಿಕಾರಿಯೊಡನೆಯೂ ಕೆಲಸದ ವಿಚಾರದಲ್ಲಿ ಎಲ್ಲಿಯೂ ರಾಜಿ ಮಾಡಿಕೊಳ್ಳದೆ ನಿಷ್ಠಾವಂತನಾಗಿ ದುಡಿಯುತ್ತಿದ್ದರೆ ಅಂತಹ ಅಮಾಯಕರಿಗೆ ಅನಾವಶ್ಯಕವಾದ ವರ್ಗಾವಣೆಗಳು ಕಟ್ಟಿಟ್ಟ ಬುತ್ತಿಯಾಗಿಬಿಡುತ್ತದೆ .

ಕಾನೂನನ್ನು ಕೇಳಿದ್ದೇ ಆದರೆ ಅಥವಾ ನಿಯಮ ಬಾಹಿರ ಎಂದು ಪ್ರಶ್ನಿಸಿದ್ದೇ ಆದರೆ ಇನ್ನಿಲ್ಲದ ಸಮಸ್ಯೆಗಳನ್ನು ಅವರ ತಲೆಗೆ ಕಟ್ಟಿ ಶಿಕ್ಷೆಗೆ ಒಳಪಡಿಸುವ, ಅಥವಾ ಬ್ಲಾಕ್ ಮೇಲ್ ಮಾಡುವ ಮ್ಯಾನೆಜ್ಮೆಂಟ್ ಗೇನು ಕಡಿಮೆಯಿಲ್ಲ, ಉನ್ನತ ಅಧಿಕಾರಿಯಿಂದ ಹಿಡಿದು ಜವಾನನವರೆಗೂ ಇಂತಹ ಬ್ಲಾಕ್ ಮೇಲ್ ಪದ್ಧತಿಯ ಪರಿಣಾಮಗಳಿಗೆ ಬಲಿಯಾದವರೇ ಹೆಚ್ಚು, ಹಾಗಾಗಿ ಇಡೀ ಬ್ಯಾಂಕ್ ವ್ಯವಸ್ಥೆಯ ವರ್ಗಾವಣೆಯಲ್ಲಿ ಉನ್ನತ ಅಧಿಕಾರಿಗಳ ಸಹಪಾಠಿಗಳಿಗೊಂದು ನ್ಯಾಯ, ನೌಕರ ಬಳಗದ ನಾಯಕರಿಗೊಂದು ನ್ಯಾಯ, ಸಾಮಾನ್ಯವಾಗಿ ದುಡಿಯುವ ನೌಕರ ಬಂಧುಗಳಿಗೆ ಪ್ರತೀ ವರ್ಷವೂ ನಡೆಯುವುದು ಅನ್ಯಾಯ ಅನ್ಯಾಯ ಅನ್ಯಾಯ. ಇದು ಈ ದೇಶದ ಬ್ಯಾಂಕಿಂಗ್ ವ್ಯವಸ್ಥೆಯ ವರ್ಗಾವಣೆಯ ಭೂತದ ಹಿಂದಿರುವ ಹುನ್ನಾರಗಳು.

ಪಾಲಿಸಿಗಳು, ನಿಯಮಗಳು ಎಂದಾಗ ಎಲ್ಲರಿಗೂ ಒಂದೇ ಎಂದಾಗಬೇಕು, ನಮ್ಮ ದುಡಿಮೆ ನಮ್ಮಬದುಕು. ನಮ್ಮ ಬಂಧು ಬಳಗವನ್ನು ಬೆರೆತು ಬದುಕುವಂತಿರಬೇಕು, ಮಕ್ಕಳೊಡನೆ ಭಾವನೆಯ ಸಂಬಂಧಗಳು ಬೆಸೆಯಬೇಕು. ಹಸುಗೂಸಿನ ಕಂದಮ್ಮಗಳನ್ನು ಅಪ್ಪ ಅಮ್ಮನಿಂದ ದೂರ ಮಾಡುವುದು ,ಬ್ಯಾಂಕ್ ಉದ್ಯೋಗವಾಗಬಾರದು. ಮಕ್ಕಳ ನಗುವಿನ ಕ್ಷಣವನ್ನು ನೆನೆದು ಕಣ್ಣೀರು ಹಾಕಬಾರದು, ವಯಸ್ಸಾದ ತಂದೆ ತಾಯಿಯನ್ನು ಕಾಣದೂರಿಗೆ ಕರೆದೊಯ್ದು ಕೊನೆಯುಸಿರು ಎಳೆದು ಪ್ರಾಣ ಬಿಡುವ ಸಮಯ ಬ್ಯಾಂಕ್ ನೌಕರರ ಬದುಕಲ್ಲಿ ಮರುಕಳಿಸುವಂತಾಗಬಾರದು. ಇವೆಲ್ಲವನ್ನೂ ಮಾಡುವ ನಮ್ಮ ಬ್ಯಾಂಕುಗಳು ಒಲ್ಲದ ಮನಸ್ಸಿನ ನೌಕರರಿಂದ ಹೇಗೆ ಲಾಭವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಯಾರದೋ ಒಬ್ಬರ ಇಬ್ಬರ ಹಿತಾಶಕ್ತಿಗಾಗಿ ಬ್ಯಾಂಕ್ ನೌಕರರ ಎಷ್ಟೋ ಕುಟುಂಬಗಳ ಬದುಕಿನ ಕಳಚಿದ ಕೊಂಡಿಗಳಾಗಿ ಪರಿಣಮಿಸಬಾರದು.

ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಪ್ರತೀ ಬ್ಯಾಂಕ್ ಶಾಖೆಯಲ್ಲೂ ಕನ್ನಡೇತರರೇ ಹೆಚ್ಚಾಗಿದ್ದಾರೆ. ಕೇವಲ ಬೆರಳೆಣಿಕೆಯಷ್ಟಿರುವ ಕನ್ನಡಿಗರನ್ನು ಬೇರೆ ರಾಜ್ಯಗಳಿಗೆ ಓಡಿಸಿ ಇಲ್ಲಿನ ಗ್ರಾಹಕರು ಕನ್ನಡ ಬಾರದವರೊಡನೆ ವ್ಯವಹರಿಸಲು ಸಾಧ್ಯವಾಗದೆ ಬೇಸತ್ತು, ಖಾಸಗೀ ಬ್ಯಾಂಕುಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ರಾಷ್ಟ್ರೀಕೃತ ಬ್ಯಾಂಕುಗಳು ನಷ್ಟವನ್ನು ಅನುಭವಿಸುವಂತೆ ಮಾಡಿ ಇವುಗಳನ್ನು ಖಾಸಗಿಯವರ ಕೈಗೊಪ್ಪಿಸುವ ಮತ್ತೊಂದು ಹುನ್ನಾರವೆಂದರು ತಪ್ಪಾಗಲಾರದೇನೋ. ಅಲ್ಲದೆ ಪ್ರಾದೇಶಿಕ ಕಛೇರಿ ವೃತ್ತ ಕಛೇರಿಗಳಲ್ಲಿ ಬೇರೆ ರಾಜ್ಯದಿಂದ ಬಂದಿರುವ ಹಿಂದಿ ಅಧಿಕಾರಿಗಳು ಇಡೀ ಕರ್ನಾಟಕವನ್ನೇ ತನ್ನ ಅಧೀನಕ್ಕೆ ತೆಗೆದುಕೊಂಡಂತೆ ಹಿಂದಿ ಗೀತೆಯನ್ನು ಒತ್ತಾಯ ಪೂರ್ವಕವಾಗಿ ಪ್ರಾರ್ಥನೆಯಾಗಿ ಹಾಡಿಸುತ್ತಾ, ಜಯಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಗೀತೆಯನ್ನು ಮರೆಸುತ್ತಿದ್ದಾರೆ. ಅಲ್ಲದೆ ಬೇರೆ ರಾಜ್ಯದಿಂದ ಬಂದಿರುವ ಅಧಿಕಾರಿಗಳಿಗೆ ನವೆಂಬರ್ ಒಂದರಂದು ಕನ್ನಡ ರಾಜ್ಯಾತ್ಸವ ಎನ್ನುವುದನ್ನೇ ಮರೆಮಾಚಿ ಅಂದು ಯಾವುದಾದರು ಒಂದು ಬ್ಯಾಂಕಿಂಗ್ ತರಬೇತಿ ಕಾರ್ಯಾಗಾರವನ್ನಿಟ್ಟು ಒತ್ತಾಯ ಪೂರ್ವಕವಾಗಿ ಕನ್ನಡ ನಾಡಿನ ವೈಭವವನ್ನೇ ಪರಿಚಯಿಸದೆ ಮರೆಮಾಚುತ್ತಿದ್ದಾರೆ. ಇವೆಲ್ಲವನ್ನೂ ಮರೆಮಾಚಿ ಇನ್ನು ಮುಂದೆ ಕನ್ನಡ ನಾಡಿನಲ್ಲಿ ಕನ್ನಡೇತರರದೇ ದರ್ಬಾರು ಎನ್ನುವಂತಾಗುತ್ತದೆ. ಈಗಾಗಲೇ ಬ್ಯಾಂಕಿನ ಉದ್ಯೋಗ ಸೃಷ್ಠಿಯಲ್ಲಿ ಹಿಂದಿ ಮತ್ತು ಇಂಗ್ಲೀಷ್ ಮಾಧ್ಯಮದ ಪರೀಕ್ಷೆಯನ್ನು ಪರಿಚಯಿಸಿ ಇಂಗ್ಲೀಷ್ ಮಾತನಾಡದಿದ್ದರೂ ಮಾತೃ ಭಾಷೆಯಾದ ಹಿಂದಿಯಲ್ಲಿ ಪರೀಕ್ಷೆ ಬರೆದವರೇ ಹೆಚ್ಚು ಬ್ಯಾಂಕ್ ಉದ್ಯೋಗ ಗಿಟ್ಟಿಸಿಕೊಂಡು ನಮ್ಮ ನಾಡಿಗೆ ನುಸುಳುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ.

ಎಲ್ಲರು ಒಂದೇ ಭಾಷೆ ಇಂಗ್ಲೀಷ್ ನಲ್ಲಿ ಪರೀಕ್ಷೆ ಬರೆಯುವಂತಾಗಲಿ ಇಲ್ಲವೇ ರಾಜ್ಯವಾರು ಸೀಟು ಹಂಚಿಕೆಯಾಗಿ ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಮುಂದುವರೆಯಲಿ ಆಗ ಮಾತ್ರ ಕನ್ನಡಿಗರಿಗೂ ಸಮಾನ ಅವಕಾಶ ಸಿಕ್ಕಂತಾಗುತ್ತದೆ. ಪ್ರಸ್ತುತವಾಗಿ ಕನ್ನಡಿಗರು ಬಂಧುಗಳೊಡನೆ ಭಾವನೆಯ ಸಂಬಂಧ ಕಳೆದುಕೊಳ್ಳುವ ಜೊತೆಗೆ ,ಭಾಷೆಯ ತಾರತಮ್ಯದಲ್ಲೂ ನಾಡಿನ ಸಾಂಸ್ಕೃತಿಕ ಬದುಕಲ್ಲೂ ಅವಮಾನವನ್ನು ಅನುಭವಿಸಬೇಕಿದೆ. ಸಮಸ್ತ ನಾಡಿನ ಬಂಧುಗಳೇ ಈಗ ನಾವು ಎಚ್ಚೆತ್ತುಕೊಳ್ಳಬೇಕಿದೆ ನಮ್ಮ ನಾಡಿನ ಸಿಂಡಿಕೇಟ್ ಬ್ಯಾಂಕ್, ಮ್ಯಸೂರು ಮಹಾರಾಜರು ನಿರ್ಮಿಸಿದ ಐತಿಹಾಸಿಕ ಮೈಸೂರು ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಎಲ್ಲವು ಈಗಾಗಲೇ ಮಾಯವಾಗಿವೆ, ಇನ್ನು ನಮ್ಮ ಮುಂದೆ ಇರುವುದು ಕೇವಲ ಬೆರಳೆಣಿಕೆಯಷ್ಟೇ. ಇವುಗಳು ಮಾಯವಾದರೆ ಬ್ಯಾಂಕ್ ರಂಗದಲ್ಲಿ ಕನ್ನಡಿಗರಾಗಲಿ, ಕನ್ನಡ ನಾಡಿನ ಬ್ಯಾಂಕ್ ಇತಿಹಾಸವಾಗಲಿ ಇಲ್ಲವಾಗುತ್ತದೆ.

ನಮಗಾಗಿ, ನಮ್ಮೊಡಲಿನ ಸಂಬಂಧಗಳಿಗಾಗಿ, ಬ್ಯಾಂಕ್ ಉದ್ಯೋಗಗಳಲ್ಲಿ ಕನ್ನಡಿಗರ ಬದುಕಿಗಾಗಿ, ಕನ್ನಡ ಉಳಿವು, ಕರ್ನಾಟಕದ ಘನತೆಗಾಗಿ ನಮ್ಮ ಹೋರಾಟ ಎನ್ನುವ ಮನಸ್ಸು ನಮ್ಮದಾಗಲಿ.ಅದಕ್ಕಾಗಿ ಎಲ್ಲರು ಒಂದೇ ಎನ್ನುವ ಭಾವನೆಯಲ್ಲಿ ನಮ್ಮ ಬ್ಯಾಂಕ್ ನಮ್ಮ ಹೆಮ್ಮೆ ಎಂದು ಹೇಳಬೇಕಾದ ಅನಿವಾರ್ಯತೆ ನಮ್ಮ ಮುಂದೆ ಇದೆ.

“ಎಚ್ಚೆತ್ತ ಕನ್ನಡಿಗರ ನಿರ್ಭಯದ ಆರ್ಭಟ ಶೋಷಕನ ಗರ್ಭವನ್ನು ಕೆಣಕುವಂತಿರಬೇಕು”


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ