ಬ್ಯಾಂಕ್ ಮುಷ್ಕರ- ಸಾಂಕೇತಿಕ ಹೋರಾಟದ ಪರ್ವ ಮುಗಿದಿದೆ | ನಾ ದಿವಾಕರ
ಬ್ಯಾಂಕ್ ನೌಕರರು ಮತ್ತೊಂದು ಮುಷ್ಕರದ ಕರೆ ನೀಡಿದ್ದಾರೆ. ಸಾರ್ವಜನಿಕ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ಮುಷ್ಕರ ಹೂಡಲಾಗಿದೆ. ಸಾರ್ವಜನಿಕ ವಲಯದಲ್ಲಿ ಬ್ಯಾಂಕ್ ನೌಕರರ ಮುಷ್ಕರ ಎಂದ ಕೂಡಲೇ ಸಿಬ್ಬಂದಿಯ ವೇತನ ಪರಿಷ್ಕರಣೆ, ಭತ್ಯೆ, ಸೇವಾ ನಿಯಮಗಳು ಮಾತ್ರವೇ ಮುನ್ನೆಲೆಗೆ ಬರುತ್ತವೆ. ಆದರೆ ಈ ಬಾರಿ ಬ್ಯಾಂಕ್ ನೌಕರ ಸಂಘಟನೆಗಳು ಖಾಸಗೀಕರಣದ ವಿರುದ್ಧವೇ ದನಿ ಎತ್ತಿ ಮುಷ್ಕರ ಹೂಡಿವೆ. ಇದು ಮೊದಲನೆಯದೂ ಅಲ್ಲ ಕೊನೆಯದೂ ಅಲ್ಲ. 1991ರಿಂದ ಇಲ್ಲಿಯವರೆಗೆ ಬ್ಯಾಂಕ್ ನೌಕರರ ಪ್ರತಿಯೊಂದು ಮುಷ್ಕರದಲ್ಲೂ , ಖಾಸಗೀಕರಣ ವಿರೋಧಿಸುವ ಒಂದು ಘೋಷಣೆ ಕಾಣುತ್ತಲೇ ಇದೆ.
ರಾಷ್ಟ್ರೀಕೃತ ಬ್ಯಾಂಕುಗಳನ್ನು ಹಂತಹಂತವಾಗಿ ಖಾಸಗೀಕರಣಗೊಳಿಸುವ ಪ್ರಕ್ರಿಯೆ 1991ರಿಂದಲೇ ಆರಂಭವಾಗಿದೆ. ಭಾರತ ಐಎಂಎಫ್ ಷರತ್ತುಗಳಿಗೆ ಬದ್ಧವಾಗಿ, ಆರ್ಥಿಕ ರಚನಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಲು ಆರಂಭಿಸಿ, ಜಾಗತೀಕರಣದ ನೀತಿಯನ್ನು ಜಾರಿಗೊಳಿಸಿದ ಸಂದರ್ಭದಿಂದಲೇ ಬ್ಯಾಂಕ್ ಮತ್ತು ವಿಮಾ ಕ್ಷೇತ್ರದಲ್ಲಿ ಉದಾರವಾದಿ ಆರ್ಥಿಕ ನೀತಿಗಳ ಪ್ರಭಾವವನ್ನು ಗುರುತಿಸಬಹುದು. 1991ರಲ್ಲಿ ನರಸಿಂಹರಾವ್ ಸರ್ಕಾರ ನೇಮಿಸಿದ ನರಸಿಂಹನ್ ಸಮಿತಿ ಮಾಡಿದ್ದ ಶಿಫಾರಸುಗಳ ಪೈಕಿ ಪ್ರಮುಖವಾಗಿ ಗುರುತಿಸಬಹುದಾದ ಅಂಶಗಳೆಂದರೆ ನಾಲ್ಕು ಹಂತದ ಶ್ರೇಣೀಕೃತ ಬ್ಯಾಂಕಿಂಗ್ ವ್ಯವಸ್ಥೆಯ ಸ್ಥಾಪನೆ. ಇದರಲ್ಲಿ ಮೊದಲ ಹಂತದಲ್ಲಿ ನಾಲ್ಕು ಬೃಹತ್ ಬ್ಯಾಂಕುಗಳನ್ನು ಸ್ಥಾಪಿಸುವುದು ಮತ್ತು ತಳಮಟ್ಟದಲ್ಲಿ ಕೃಷಿ ಚಟುವಟಿಕೆಗಳಿಗೆ ಸೀಮಿತವಾದ ಬ್ಯಾಂಕುಗಳನ್ನು ಹೊಂದಿರುವುದು ಪ್ರಮುಖವಾಗಿತ್ತು. ಇಂದು ಇದು ಸಾಕಾರಗೊಳ್ಳುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರವನ್ನು ಖಾಸಗಿ ಬ್ಯಾಂಕುಗಳಿಗೆ ಮುಕ್ತಗೊಳಿಸುವುದು, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರದ ಪಾಲುದಾರಿಕೆಯನ್ನು ಶೇ 51ಕ್ಕೆ ಸೀಮಿತಗೊಳಿಸಿ ಷೇರು ಮಾರುಕಟ್ಟೆಯ ಮೂಲಕ ಬಂಡವಾಳ ಶೇಖರಿಸಲು ಅವಕಾಶ ನೀಡುವುದು, ಬಲಿಷ್ಟವಾಗಿರುವ ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಬೃಹತ್ ಬ್ಯಾಂಕುಗಳನ್ನು ಸ್ಥಾಪಿಸುವುದು, ಬ್ಯಾಂಕುಗಳ ಸರ್ಕಾರಿ ಒಡೆತನ ಮತ್ತು ಬ್ಯಾಂಕುಗಳ ಸ್ವಾಯತ್ತತೆಯ ಬದಲು ವೃತ್ತಿಪರ ಕಾರ್ಪೋರೇಟ್ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವುದು ಇವೆಲ್ಲವೂ ನರಸಿಂಹನ್ ಸಮಿತಿಯ ಮುಖ್ಯ ಶಿಫಾರಸುಗಳಾಗಿದ್ದವು. ಇದಾದ ನಂತರ ನೇಮಿಸಲಾದ ಪಿ ಜೆ ನಾಯಕ್ ಸಮಿತಿಯೂ ಸಹ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸರ್ಕಾರಿ ಸಾಮ್ಯವನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು.
ಈ ಹಿನ್ನೆಲೆಯಲ್ಲೇ 1998ರ ನಂತರದಲ್ಲಿ , ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬ್ಯಾಂಕಿಂಗ್ ಕ್ಷೇತ್ರದ ಸುಧಾರಣೆಗಳು ಕ್ಷಿಪ್ರಗತಿಯಲ್ಲಿ ಸಾಗಿದ್ದವು. ರಾಷ್ಟ್ರೀಕೃತ ಬ್ಯಾಂಕುಗಳ ಷೇರುಗಳು ಮಾರುಕಟ್ಟೆಗೆ ಬಂದವು. ಖಾಸಗಿ ಬ್ಯಾಂಕುಗಳ ಸಂಖ್ಯೆ ಹೆಚ್ಚಾಗತೊಡಗಿತ್ತು. ಕುಗ್ರಾಮಗಳಲ್ಲಿ ಸ್ಥಾಪಿಸಲಾಗಿದ್ದ ಮತ್ತು ಗ್ರಾಮೀಣ ಬ್ಯಾಂಕಿಂಗ್ ವೃದ್ಧಿಯ ದೃಷ್ಟಿಯಿಂದಲೇ ಸ್ಥಾಪಿಸಲಾಗಿದ್ದ ಗ್ರಾಮೀಣ ಬ್ಯಾಂಕುಗಳು ಕ್ರಮೇಣ ನಗರ ಪ್ರದೇಶಗಳಲ್ಲಿ ಶಾಖೆಗಳನ್ನು ಆರಂಭಿಸಿದವು. ಪಟ್ಟಣ ಪ್ರದೇಶಗಳಿಗೆ ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಗ್ರಾಮೀಣ ಬ್ಯಾಂಕುಗಳು ಹಳ್ಳಿಗಾಡುಗಳಿಂದ ಪಟ್ಟಣ ಪ್ರದೇಶಗಳಿಗೆ ವರ್ಗಾಯಿಸಲ್ಪಟ್ಟವು.
ಸಾರ್ವಜನಿಕ ಉದ್ದಿಮೆಗಳಿಂದ ಬಂಡವಾಳ ಹಿಂತೆಗೆತಕ್ಕಾಗಿ ಒಂದು ಸಚಿವಾಲಯವನ್ನೇ ಸ್ಥಾಪಿಸಿದ್ದ ವಾಜಪೇಯಿ ಆಡಳಿತದಲ್ಲಿ, ಬ್ಯಾಂಕಿಂಗ್ ಕ್ಷೇತ್ರವನ್ನೂ ಸೇರಿದಂತೆ ಎಲ್ಲ ಸಾರ್ವಜನಿಕ ಉದ್ದಿಮೆಗಳೂ ಖಾಸಗಿ ಕ್ಷೇತ್ರಕ್ಕೆ ತೆರೆದುಕೊಳ್ಳಲಾರಂಭಿಸಿದ್ದವು. ಇದೇ ಅವಧಿಯಲ್ಲಿ ನರಸಿಂಹನ್ ಸಮಿತಿ ಮತ್ತು ಪಿ ಜೆ ನಾಯಕ್ ಸಮಿತಿಯ ವರದಿಗಳನ್ನು ಆಧರಿಸಿ ಬ್ಯಾಂಕಿಂಗ್ ಕ್ಷೇತ್ರದ ಸಾಲ ನಿರ್ವಹಣೆಯ ಪದ್ಧತಿಯಲ್ಲೂ ಅಮೂಲಾಗ್ರ ಬದಲಾವಣೆಗಳನ್ನು ಜಾರಿಗೊಳಿಸಲಾಯಿತು. ಒಂದೆಡೆ ಬ್ಯಾಂಕಿಂಗ್ ವಹಿವಾಟುಗಳನ್ನು ಖಾಸಗಿಯವರಿಗೆ ಮುಕ್ತಗೊಳಿಸುತ್ತಲೇ ಮತ್ತೊಂದೆಡೆ ಸಾರ್ವಜನಿಕ ಬ್ಯಾಂಕುಗಳ ಮೂಲಕ ಕೃಷಿ ಸಾಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಪ್ರಕ್ರಿಯೆಗೂ ಚಾಲನೆ ನೀಡಲಾಗಿತ್ತು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಜಾರಿಗೊಳಿಸಲು ಉದ್ದೇಶಿಸಲಾಗಿದ್ದ ಬಹುಪಾಲು ಸುಧಾರಣಾ ಕ್ರಮಗಳನ್ನು ವಾಜಪೇಯಿ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗಿತ್ತು. ವಿದೇಶಿ ಬ್ಯಾಂಕುಗಳ ಸ್ಥಾಪನೆಗೂ ಅನುಮತಿ ನೀಡಲು ತಾತ್ವಿಕವಾಗಿ ನಿರ್ಧರಿಸಲಾಗಿತ್ತು.ಈ ಎಲ್ಲ ಸುಧಾರಣಾ ಕ್ರಮಗಳಿಗೂ ನರಸಿಂಹನ್ ಸಮಿತಿಯ ವರದಿಯೇ ಆಧಾರವಾಗಿತ್ತು ಎನ್ನುವುದು ಸ್ಪಷ್ಟ. ನರಸಿಂಹನ್ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವುದರ ವಿರುದ್ಧವೇ ಬ್ಯಾಂಕ್ ನೌಕರ ಸಂಘಟನೆಗಳು, ಎಐಬಿಇಎ ಮುಂದಾಳತ್ವದಲ್ಲಿ ಮುಷ್ಕರಗಳನ್ನು ನಡೆಸಿದ್ದುದೂ ಹೌದು. ಪಿ ಜೆ ನಾಯಕ್ ಸಮಿತಿ ವರದಿಯ ವಿರುದ್ಧವೂ ಹಲವು ಮುಷ್ಕರಗಳನ್ನು ನಡೆಸಲಾಗಿದೆ.
ಆದರೆ 1991ರ ನಂತರದ ನವ ಉದಾರವಾದ ಹಾಗೂ ಜಾಗತೀಕರಣ ನೀತಿಗಳ ಹಿನ್ನೆಲೆಯಲ್ಲಿ ಬ್ಯಾಂಕ್ ನೌಕರ ಸಂಘಟನೆಗಳು ಹೋರಾಟಗಳನ್ನು ರೂಪಿಸಬೇಕಿತ್ತು. ಆದರೆ ಬ್ಯಾಂಕ್ ನೌಕರ ಸಂಘಟನೆಗಳು ಹೋರಾಟದ ಮಾರ್ಗಗಳನ್ನು ಅನುಸರಿಸಲಿಲ್ಲ. ಮುಷ್ಕರಗಳಿಗೆ ಸೀಮಿತವಾದವು. ಜಂಟಿ ಹೋರಾಟ, ಜನಾಂದೋಲನ, ಸಾಮಾಜಿಕ ಜಾಗೃತಿ, ಜನ ಜಾಗೃತಿ ಮತ್ತು ಮಾಹಿತಿ ಪ್ರಸರಣ ಮುಂತಾದ ಹೋರಾಟದ ಅಸ್ತ್ರಗಳು ಬಳಕೆಯಾಗಲೇ ಇಲ್ಲ. ಅಂದಿನಿಂದ ಇಂದಿನವರೆಗೂ ಮುಷ್ಕರಗಳನ್ನೇ ಹೋರಾಟಗಳೆಂದು ಬಿಂಬಿಸಲಾಗುತ್ತಿದೆ. ತಮ್ಮ ವೇತನ, ಭತ್ಯೆ, ಪಿಂಚಣಿ, ವೇತನ ಪರಿಷ್ಕರಣೆ ಮತ್ತು ಸೇವಾ ಸೌಲಭ್ಯಗಳ ಬಗ್ಗೆ ನಡೆಸಿದ ಪ್ರತಿಯೊಂದು ಮುಷ್ಕರದಲ್ಲೂ ಖಾಸಗೀಕರಣ ವಿರೋಧಿ ಘೋಷಣೆಗಳಿರುತ್ತಿದ್ದವು. 2000ದವರೆಗೂ ನರಸಿಂಹನ್-ನಾಯಕ್ ಸಮಿತಿ ವಿರೋಧಿ ದನಿಯೂ ಇರುತ್ತಿತ್ತು.
2000ದ ನಂತರ, ವಾಜಪೇಯಿ ಸರ್ಕಾರ ನವ ಉದಾರವಾದಿ ಅರ್ಥಿಕ ನೀತಿಯನ್ನು ಜಾರಿಗೊಳಿಸಲು ಸಜ್ಜಾದ ಸಂದರ್ಭದಲ್ಲೇ ಬ್ಯಾಂಕ್ ನೌಕರ ಸಂಘಟನೆಗಳು ತಮ್ಮ ಹೋರಾಟದ ಆಯಾಮಗಳನ್ನು ವಿಸ್ತರಿಸಬೇಕಿತ್ತು. ವರ್ಷದಲ್ಲಿ ಒಮ್ಮೆಯೋ ಅಥವಾ ಎರಡು ಬಾರಿಯೋ ಒಂದೆರಡು ದಿನಗಳ ಮುಷ್ಕರ ಹೂಡುವುದು ಅಲ್ಪಕಾಲಿಕ ಫಲಿತಾಂಶವನ್ನು ನೀಡುವ ಪ್ರಯತ್ನಗಳಷ್ಟೇ ಆಗುತ್ತವೆ. ಖಾಸಗೀಕರಣದಂತಹ ದೀರ್ಘಕಾಲಿಕ ಅಪಾಯಗಳನ್ನು ಎದುರಿಸಲು ವಿಶಾಲ ತಳಹದಿಯ, ವ್ಯಾಪಕ ಭೂಮಿಕೆಯ ಜನಾಂದೋಲನಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಹಾಗೆಯೇ ಸರ್ಕಾರಗಳು ಜಾರಿಗೊಳಿಸಲಾಗುತ್ತಿರುವ ಖಾಸಗೀಕರಣ ನೀತಿಗಳು ಮೂಲತಃ ಪ್ರಭುತ್ವದ ಬದಲಾಗುತ್ತಿರುವ ಧೋರಣೆಯ ಸಂಕೇತ ಎನ್ನುವ ರಾಜಕೀಯ ಪ್ರಜ್ಞೆ ಮತ್ತು ಜಾಗೃತಿ ಬ್ಯಾಂಕ್ ನೌಕರರಲ್ಲಿ ಮೂಡಿಸುವಂತಾಗಬೇಕಿತ್ತು.
ಇಂದು ನರೇಂದ್ರ ಮೋದಿ ಸರ್ಕಾರ ದೇಶದ ಪ್ರತಿಷ್ಠಿತ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುತ್ತಿದೆ ಎನ್ನುವುದು ವಾಸ್ತವವೇ ಆದರೂ ಈ ಪ್ರಕ್ರಿಯೆಗೆ ಭೂಮಿ ಪೂಜೆ ಮಾಡಿದ್ದು ನರಸಿಂಹರಾವ್ ಸರ್ಕಾರ, ಶಿಲಾನ್ಯಾಸ ಮಾಡಿದ್ದು ವಾಜಪೇಯಿ ಸರ್ಕಾರ ಮತ್ತು ಚಾಲನೆ ನೀಡಿದ್ದು ಮನಮೋಹನ್ ಸಿಂಗ್ ಸರ್ಕಾರ ಎನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆರಂಭದಿಂದಲೂ ರಾಜಕೀಯ ಪ್ರಜ್ಞೆ ಮತ್ತು ಸಾಮಾಜಿಕ ಜಾಗೃತಿಯ ಚೌಕಟ್ಟಿನಿಂದ ಹೊರಗೇ ಉಳಿದಿದ್ದ ಬ್ಯಾಂಕ್ ಸಿಬ್ಬಂದಿಯನ್ನು ಪ್ರಭುತ್ವದ ಈ ಮಾರಕ ನೀತಿಗಳ ವಿರುದ್ಧ ಸೆಟೆದು ನಿಲ್ಲುವಂತೆ ಮಾಡುವ ಯಾವುದೇ ಪ್ರಯತ್ನಗಳು ಬ್ಯಾಂಕ್ ನೌಕರರ ಸಂಘಟನೆಗಳಿಂದ ಆಗಲಿಲ್ಲ ಎನ್ನುವುದು ವಾಸ್ತವ.
ನರಸಿಂಹನ್ ಸಮಿತಿ 1 ಮತ್ತು 2 ಹಾಗೂ ಪಿ ಜೆ ನಾಯಕ್ ಸಮಿತಿಯ ಶಿಫಾರಸುಗಳ ವಿರುದ್ಧ ಮುಷ್ಕರದ ಸಂದರ್ಭಗಳಲ್ಲಿ ಘೋಷಣೆ ಕೂಗಿದ್ದು ಗಾಳಿಯೊಡಗೆ ಗುದ್ದಾಡುವುದಕ್ಕೆ ಸಮನಾಯಿತಷ್ಟೇ. ಆ ಸಂದರ್ಭದಲ್ಲೇ ಬ್ಯಾಂಕ್ ನೌಕರರ ಸಂಘಟನೆಗಳು ಒಂದು ಐಕ್ಯ ವೇದಿಕೆಯನ್ನು ರೂಪಿಸಿ, ಪ್ರತಿಯೊಂದು ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ ಜನಸಾಮಾನ್ಯರ ನಡುವೆ ಚರ್ಚೆ ನಡೆಸಲು ಅನುಕೂಲವಾಗುವಂತೆ ವಿಚಾರ ಸಂಕಿರಣಗಳನ್ನು ನಡೆಸಬೇಕಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ಕೃಷಿ ಕಾರ್ಮಿಕರಿಗೆ, ಭೂ ಹೀನರಿಗೆ, ಗುಡಿ ಕೈಗಾರಿಕೆಗಳಿಗೆ, ಪಟ್ಟಣ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ, ಬೀದಿಬದಿ ವ್ಯಾಪಾರಿಗಳಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೆ ಮತ್ತು ಕೆಳಮಧ್ಯಮ ವರ್ಗದ ಜನತೆಗೆ ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದಲ್ಲಿರುವುದು ಎಷ್ಟು ಮುಖ್ಯ ಎನ್ನುವುದನ್ನು ಮನದಟ್ಟು ಮಾಡುವ ಕೈಂಕರ್ಯದಲ್ಲಿ ಬ್ಯಾಂಕ್ ಸಂಘಟನೆಗಳು ತೊಡಗಬೇಕಿತ್ತು.
ಹಣಕಾಸು ಮತ್ತು ಮಾನವ ಸಂಪನ್ಮೂಲಗಳ ಕೊರತೆಯೇ ಇಲ್ಲದ, ಮಧ್ಯಮ ವರ್ಗಗಳನ್ನೇ ಒಳಗೊಂಡ, ಹಿತವಲಯದ ಜನತೆಯನ್ನೇ ಪ್ರತಿನಿಧಿಸುವ ಬ್ಯಾಂಕ್ ನೌಕರ ಸಂಘಟನೆಗಳು ಕಳೆದ ಮೂರು ದಶಕಗಳಲ್ಲಿ ಈ ರೀತಿಯ ಎಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ ಎಂಬ ಪ್ರಶ್ನೆ ಎದುರಾದಾಗ ನಿರುತ್ತರರಾಗುತ್ತೇವೆ. ಕೆಲವು ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಕೆಲವೇ ಸದಸ್ಯರ, ನಾಯಕರ ಆಸಕ್ತಿಯಿಂದ ಇಂತಹ ಕೆಲವು ಪ್ರಯತ್ನಗಳು ನಡೆದಿರಬಹುದಾದರೂ, ರಾಜ್ಯ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಬ್ಯಾಂಕಿಂಗ್ ಸುಧಾರಣೆಗಳನ್ನು ಕುರಿತ ಒಂದು ವಿಚಾರ ಸಂಕಿರಣ ನಡೆದಿರುವುದೂ ಅನುಮಾನವೇ ಎನ್ನಬಹುದು. ಒಂದು ವೇಳೆ ಬ್ಯಾಂಕ್ ನೌಕರ ಸಂಘಟನೆಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲತೆಯನ್ನು ತೋರಿದ್ದಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರೂ ಹೆಗಲು ನೀಡುವ ಸಾಧ್ಯತೆಗಳಿದ್ದವು. ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೂ ಭರವಸೆಯ ಕಿರಣಗಳು ತೆರೆದುಕೊಳ್ಳುತ್ತಿದ್ದವು.
1960ರ ದಶಕದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣವಾದದ್ದು ಕೇವಲ ಒಂದು ಸರ್ಕಾರದ ನಿರ್ಧಾರವಲ್ಲ. ಈ ಪ್ರಕ್ರಿಯೆಯ ಹಿಂದೆ ಅಂದಿನ ಬ್ಯಾಂಕ್ ನೌಕರ ಸಂಘಟನೆಯ ದೀರ್ಘಕಾಲದ ಬೇಡಿಕೆ, ಒತ್ತಾಯ ಮತ್ತು ಒತ್ತಡಗಳೂ ಇದ್ದವು. ಈ ಬೇಡಿಕೆಗಳಿಗೆ ಸ್ಪಂದಿಸುವಂತಹ ಸೂಕ್ಷ್ಮ ಸಂವೇದನೆಯ, ಸಮಾಜಮುಖಿ ಸಂಸದರು ನಮ್ಮ ನಡುವೆ ಇದ್ದರು. ತಳಮಟ್ಟದ ಆರ್ಥಿಕ ಸ್ಥಿರತೆಗಾಗಿ ಮೇಲ್ಮಟ್ಟದ ಆರ್ಥಿಕತೆಯನ್ನು ಸಮರ್ಥವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಬ್ಯಾಂಕ್ ರಾಷ್ಟ್ರೀಕರಣ ಒಂದು ಪ್ರಬಲ ಅಸ್ತ್ರವಾಗಿ ಪರಿಣಮಿಸಿತ್ತು. ಬ್ಯಾಂಕುಗಳು ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಮಾತ್ರವೇ ತಮ್ಮ ವ್ಯಾಪಾರ ವಹಿವಾಟುಗಳಿಗೆ, ಕೃಷಿ ಚಟುವಟಿಕೆಗಳಿಗೆ, ಹೈನುಗಾರಿಕೆಗೆ, ಜಾನುವಾರು ಸಾಕಾಣಿಕೆಗೆ ಮತ್ತು ಜೀವನೋಪಾಯ ಸುಧಾರಣೆಗೆ ನೆರವಾಗುತ್ತವೆ ಎನ್ನುವ ಅಂಶವನ್ನು ಈ ಎಲ್ಲ ಕ್ಷೇತ್ರಗಳ ಜನತೆಗೆ ಮನದಟ್ಟು ಮಾಡುವುದು ಬ್ಯಾಂಕ್ ನೌಕರ ಸಂಘಟನೆಗಳ ಆದ್ಯತೆಯಾಗಬೇಕಿತ್ತು. ಆದರೆ ಆಗಲಿಲ್ಲ.
ವರುಷಕ್ಕೊಮ್ಮೆ ನಡೆಯುವ ರಾಷ್ಟ್ರವ್ಯಾಪಿ ಮುಷ್ಕರದ ಮೂಲ ಧ್ಯೇಯ ಖಾಸಗೀಕರಣ ಮತ್ತು ನವ ಉದಾರವಾದವನ್ನು ವಿರೋಧಿಸುವುದೇ ಆಗಿದ್ದರೂ ಇದು ಜನಾಂದೋಲನದ ಸ್ವರೂಪ ಪಡೆಯಲಿಲ್ಲ ಎನ್ನುವುದನ್ನೂ ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ಪ್ರಭುತ್ವ ಅಥವಾ ಆಡಳಿತಾರೂಢ ಸರ್ಕಾರಗಳು ಏಕೆ ಎಲ್ಲ ಸಾರ್ವಜನಿಕ ಸಂಪತ್ತು, ಸಂಪನ್ಮೂಲ ಮತ್ತು ಉದ್ದಿಮೆಗಳನ್ನು ಖಾಸಗಿಯವರ ಪಾಲು ಮಾಡುತ್ತಿದೆ ಎನ್ನುವುದನ್ನು ಬಾಧಿತ ಜನತೆಗೆ ಅರ್ಥಮಾಡಿಸುವುದರಲ್ಲಿ ನಾವು, ಅಂದರೆ ಬ್ಯಾಂಕ್ ಸಂಘಟನೆಗಳನ್ನೂ ಸೇರಿದಂತೆ, ಕಾರ್ಮಿಕ ಹೋರಾಟದ ವಾರಸುದಾರರು ವಿಫಲವಾಗಿರುವುದನ್ನು ಒಪ್ಪಿಕೊಳ್ಳಲೇಬೇಕಿದೆ. ಹಾಗಾಗಿಯೇ ಇಂದು ಪ್ರತಿಯೊಂದು ಸಾರ್ವಜನಿಕ ಉದ್ದಿಮೆಯೂ ಖಾಸಗಿ ಕಾರ್ಪೋರೇಟ್ ಉದ್ಯಮಿಗಳ ವಶವಾಗುತ್ತಿದ್ದರೂ, ಇದರ ವಿರುದ್ಧ ಏಕಾಂಗಿ ಹೋರಾಟಗಳೇ ಅಂತಿಮ ಅಸ್ತ್ರಗಳಾಗಿ ಕಾಣುತ್ತಿವೆ.
2015-16ರಲ್ಲಿ ಸಾರ್ವಜನಿಕ ಬ್ಯಾಂಕುಗಳು 5139 ನೂತನ ಶಾಖೆಗಳನ್ನು ತೆರೆದಿದ್ದವು. 2018-19ರಲ್ಲಿ ಹೊಸ ಶಾಖೆಗಳ ಸಂಖ್ಯೆ 1889ಕ್ಕೆ ಕುಸಿದಿತ್ತು. 2012ರಲ್ಲಿ 11,75,149 ರಷ್ಟಿದ್ದ ಬ್ಯಾಂಕ್ ಸಿಬ್ಬಂದಿಯ ಸಂಖ್ಯೆ 2017ರಲ್ಲಿ 8,47,398ಕ್ಕೆ ಕುಸಿದಿದೆ. ಇಂದು ಇನ್ನೂ ಗಣನೀಯವಾಗಿ ಕಡಿಮೆಯಾಗಿದೆ. ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದ ಶಾಖೆಗಳೂ ವಿಲೀನವಾಗುತ್ತಿದ್ದು ಅನೇಕ ಶಾಖೆಗಳು ಮುಚ್ಚಿಹೋಗಿವೆ. ಸಿಬ್ಬಂದಿಯ ಸಂಖ್ಯೆಯೂ ಸತತವಾಗಿ ಕ್ಷೀಣಿಸುತ್ತಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವುದು ಬ್ಯಾಂಕ್ ರಾಷ್ಟ್ರೀಕರಣದ ಮೂಲ ಉದ್ದೇಶವಾಗಿತ್ತು. ಆದರೆ 2015-16ರಲ್ಲಿ 5000ಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಗ್ರಾಮಗಳಲ್ಲಿ 2223 ಶಾಖೆಗಳನ್ನು ತೆರೆಯಲಾಗಿತ್ತು. 2018-19ರಲ್ಲಿ ಇದು 451ಕ್ಕೆ ಕುಸಿದಿದೆ. ಇದು ಬ್ಯಾಂಕಿಂಗ್ ವ್ಯವಸ್ಥೆಯನ್ನು ಬಡ ಜನತೆಯಿಂದ ದೂರ ಕೊಂಡೊಯ್ಯುವ ಪ್ರಕ್ರಿಯೆಯ ಒಂದು ಸೂಚನೆ ಎನ್ನಬಹುದು.
ಎಡಪಕ್ಷಗಳೊಡನೆ ಗುರುತಿಸಿಕೊಂಡಿರುವ ಬ್ಯಾಂಕ್ ನೌಕರ ಸಂಘಟನೆಗಳ ಬಹುಪಾಲು ಸದಸ್ಯರಿಗೆ ಕೆಂಬಾವುಟ ತಮ್ಮ ಸೇವಾ ನಿಯಮ, ವೇತನ, ಭತ್ಯೆ ಮತ್ತು ಸವಲತ್ತುಗಳನ್ನು ಒದಗಿಸುವ ಒಂದು ವಸ್ತ್ರವಾಗಿ ಮಾತ್ರವೇ ಕಾಣುತ್ತಿದೆ. ಸಂಘಟನೆಗಳ ನಾಯಕತ್ವವೂ ಸಹ ಪಟ್ಟಭದ್ರ ಹಿತಾಸಕ್ತಿಗಳ ಕೈವಶವಾಗಿದ್ದು ರಾಜಕೀಯ ಪ್ರಜ್ಞೆ ಬೆಳೆಸುವ ಎಲ್ಲ ಪ್ರಯತ್ನಗಳನ್ನೂ ಹೊಸಕಿ ಹಾಕುವ ಪರಂಪರೆಯೂ ಆಳವಾಗಿ ಬೇರೂರಿದೆ. ಎರಡನೆಯ ಪೀಳಿಗೆಯ ನಾಯಕತ್ವವನ್ನು ಸಿದ್ಧಪಡಿಸುವುದು, ಯುವ ಪೀಳಿಗೆಗೆ ಸೈದ್ಧಾಂತಿಕ ಪ್ರೇರಣೆ ನೀಡುವುದು, ಸಮಾಜವಾದ ಮತ್ತು ಸಮ ಸಮಾಜದ ನಿರ್ಮಾಣದಲ್ಲಿ ಸುಶಿಕ್ಷಿತ ಮೇಲ್ವರ್ಗದ ಕಾರ್ಮಿಕರು ವಹಿಸಬೇಕಾದ ಮಹತ್ವದ ಪಾತ್ರದ ಬಗ್ಗೆ ತಿಳುವಳಿಕೆ ಮೂಡಿಸುವುದು, ಸಂಘಟನಾತ್ಮಕವಾಗಿ ಜನಾಂದೋಲನಗಳೊಡನೆ ಗುರುತಿಸಿಕೊಂಡು ಬ್ಯಾಂಕ್ ನೌಕರರಲ್ಲಿ ರಾಜಕೀಯ ಮತ್ತು ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದು ಈ ಯಾವುದೇ ಪ್ರಯತ್ನಗಳು ನಡೆಯದೆ ಇರುವುದರಿಂದಲೇ ಇಂದು ಬಹುಪಾಲು ಬ್ಯಾಂಕ್ ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರು ತಮ್ಮ ಸ್ವಹಿತಾಸಕ್ತಿಗಾಗಿ ಕೆಂಬಾವುಟ ಆಶ್ರಯಿಸುತ್ತಲೇ, ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ಈ ಸಂದಿಗ್ಧತೆಗಳ ನಡುವೆಯೇ ದೇಶದ 9 ಲಕ್ಷ ಬ್ಯಾಂಕ್ ನೌಕರರು ಖಾಸಗೀಕರಣದ ವಿರುದ್ಧ ಮುಷ್ಕರ ಹೂಡಿದ್ದಾರೆ. ಈಗಲೂ ಸಹ ಇದು ಮುಷ್ಕರದಲ್ಲೇ ಪರ್ಯವಸಾನ ಹೊಂದುತ್ತದೆಯೇ ಹೊರತು ಹೋರಾಟದ ಸ್ವರೂಪ ಪಡೆಯುವ ಲಕ್ಷಣಗಳು ಕಾಣುತ್ತಿಲ್ಲ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಸಾಂಸ್ಥಿಕವಾಗಿ ಬ್ಯಾಂಕುಗಳು ಸರ್ಕಾರದ ಸ್ವಾಮ್ಯದಲ್ಲಿವೆ. ಬ್ಯಾಂಕಿನ ಹಲವಾರು ವಹಿವಾಟುಗಳು, ಡಿಜಿಟಲ್ ವ್ಯವಹಾರಗಳು, ಗಣಕೀಕರಣದ ಪ್ರಕ್ರಿಯೆ ಮತ್ತು ಕೋರ್ ಬ್ಯಾಂಕಿಂಗ್ ತಂತ್ರಜ್ಞಾನ, ಎಟಿಎಂ ನಿರ್ವಹಣೆ ಇವೆಲ್ಲವೂ ಹೊರಗುತ್ತಿಗೆಯ ಪಾಲಾಗಿದೆ. ಎರಡು ದಿನಗಳ ಮುಷ್ಕರದಿಂದ ಬ್ಯಾಂಕಿಂಗ್ ವಹಿವಾಟು ಹೆಚ್ಚು ಬಾಧಿತವಾಗುವುದೂ ಇಲ್ಲ. ಡಿಜಿಟಲ್ ವೇದಿಕೆಗಳ ಮೂಲಕ ಬ್ಯಾಂಕಿಂಗ್ ವ್ಯವಹಾರಗಳು ಎಂದಿನಂತೆಯೇ ನಡೆಯುತ್ತಿರುತ್ತವೆ. ನೂರು ದಿನಗಳ ರೈತ ಮುಷ್ಕರಕ್ಕೇ ಸ್ಪಂದಿಸದಷ್ಟು ಕ್ರೌರ್ಯ, ನಿರ್ದಯಿ ಧೋರಣೆ, ನಿರ್ಲಜ್ಜತೆಯನ್ನು ತೋರಿರುವ ಆಡಳಿತ ವ್ಯವಸ್ಥೆ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂದು ನಿರೀಕ್ಷಿಸುವುದೂ ಸಲ್ಲದು.
ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ತನ್ನ ಕೊನೆಯ ಹಂತದಲ್ಲಿದೆ. ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಚಾಲನೆ ಪಡೆದ ಸಂದರ್ಭದಲ್ಲೇ ಬ್ಯಾಂಕ್ ನೌಕರ ಸಂಘಟನೆಗಳು, ಮುಷ್ಕರದ ಮಾರ್ಗವನ್ನು ಬದಿಗಿಟ್ಟು, ಹೋರಾಟದ ಮಾರ್ಗವನ್ನು ಅನುಸರಿಸಿದ್ದರೆ ಇಂದು ಹಲವು ಬ್ಯಾಂಕುಗಳು ಶಾಶ್ವತವಾಗಿ ಮರೆಯಾಗುತ್ತಿರಲಿಲ್ಲವೇನೋ ? ಇದು ಇಂದು ನೆನ್ನೆಯ ಪ್ರಶ್ನೆಯಲ್ಲ. ಬ್ಯಾಂಕ್ ನೌಕರ ಸಂಘಟನೆಗಳು ನಡೆದು ಬಂದ ಹಾದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಹಲವು ದಶಕಗಳ ಪ್ರಶ್ನೆ. ಎಲ್ಲ ಮಾರ್ಗಗಳೂ ಮುಚ್ಚಲಾಗಿರುವ ಈ ಸಂದರ್ಭದಲ್ಲಿ ನಡೆಯುತ್ತಿರುವ ಈ ಮುಷ್ಕರ ಸಾಂಕೇತಿಕವಾಗಿ ಯಶಸ್ವಿಯಾಗಿದೆ ಎನಿಸಬಹುದು. ಆದರೆ ಇದು ಆಡಳಿತ ನೀತಿಯನ್ನು ಬದಲಿಸುವ ನಿಟ್ಟಿನಲ್ಲಿ ಫಲಕಾರಿಯಾಗುವುದಿಲ್ಲ. ಈ ಅವಕಾಶವನ್ನು ಬ್ಯಾಂಕ್ ನೌಕರ ಸಂಘಟನೆಗಳು ಎಂದೋ ಕೈಚೆಲ್ಲಿ ಕೂತಿರುವುದು ದುರಂತ ಆದರೂ ವಾಸ್ತವ.