ಬ್ಯಾಂಕುಗಳೋ ಅಥವಾ ಇನ್ಶೂರೆನ್ಸ್ ಕಂಪೆನಿಗಳೋ?
- ಮಲ್ಲತ್ತಹಳ್ಳಿ ಡಾ.ಎಚ್.ತುಕಾರಾಂ
ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗಿಗಳನ್ನ ಮಾತನಾಡಿಸುವುದೇ ಕಷ್ಟಕರವಾದ ಸಂಗತಿಯಾಗಿದೆ.ಅವರಿಂದ ತಪ್ಪಿಸಿಕೊಂಡು ಹೋದರೆ ಸಾಕಪ್ಪ ಅನಿಸುತ್ತದೆ. ಯಾವ ಅಧಿಕಾರಿಯನ್ನು ಹೇಗಿದ್ದೀರಾ ಸರ್, ಮೇಡಂ ಅಂದ್ರೆ ನಮ್ಮ ಕೆಲಸ ಯಾರಿಗೂ ಬೇಡ ಸಾರ್ ಎನ್ನುತ್ತಾರೆ. ನಾವು ನಮ್ಮ ಮಕ್ಕಳಿಗೆ ನೀವು ಯಾವ ಕೆಲಸಕ್ಕಾದರೂ ಸೇರಿ ಆದರೆ ಬ್ಯಾಂಕ್ ಕೆಲಸಕ್ಕೆ ಮಾತ್ರ ಸೇರಬೇಡಿ ಅಂದಿದ್ದೇನೆ ಎನ್ನುತ್ತಾರೆ. ಏನಿದು ಈ ಬ್ಯಾಂಕ್ ಉದ್ಯೋಗಿಗಳ ಇಂತಹ ಅಸಹಾಯಕ ವೇದನೆಯ ಪರಿಸ್ಥಿತಿ ಎನ್ನುವುದೇ ಬಹಳ ಆಶ್ಚರ್ಯಕರವಾಗಿದೆ .
ಹಿಂದಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗವೆಂದರೆ, ಅದೊಂದು ವೈಟ್ ಕಾಲರ್ ಜಾಬ್ ಎಂದು ಕರೆಯುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಬ್ಯಾಂಕ್ ಉದ್ಯೋಗ ಬೇಡವೆನ್ನುವಷ್ಟರ ಮಟ್ಟಿಗೆ ಬೇಸರ ತಂದಿದೆ ಎಂದರೆ ಏನು ಇರಬಹುದು ಇವರ ಸಮಸ್ಯೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಸರ್ಕಾರಿ ನೌಕರರು ಮತ್ತು ಈ ಲೇಖನ ಓದುವವರಿಗೆ ಅನಿಸಬಹುದು ಎಲ್ಲಾ ಇಲಾಖೆಗಳಲ್ಲೂ ಇಂತಹ ಒತ್ತಡಗಳಿವೆ ಎಂದು. ಆದರೆ ಎಲ್ಲ ಇಲಾಖೆಯಲ್ಲಿಯೂ ಅವರ ಕೆಲಸಕ್ಕೆ ತಕ್ಕಮಟ್ಟಿನ ಒತ್ತಡವಿದ್ದರು ಸಾರ್ವಜನಿಕರನ್ನು ನಿಭಾಯಿಸಲು ಅವರಿಗೆಲ್ಲ ಬಹಳಷ್ಟು ಮಾರ್ಗಗಳಿವೆ. ಹಾಗಾಗಿ ಪ್ರತಿಯೊಬ್ಬ ಸಾರ್ವಜನಿಕನು ಬೇರೆ ಬೇರೆ ಇಲಾಖೆಗಳಿಗೆ ಹೋದಾಗ ಧೈನ್ಯ ಭಾವದಿಂದಲೇ ತನ್ನ ಕೆಲಸವನ್ನು ಮಾಡಿಕೊಳ್ಳಲು ಬಯಸುತ್ತಾನೆ. ಆದರೆ ಗ್ರಾಹಕರು ಬ್ಯಾಂಕ್ ಒಳಗಡೆ ಪ್ರವೇಶ ಮಾಡುತ್ತಿದ್ದಂತೆ ಅವರೇ ರಾಜರಂತೆ ವರ್ತಿಸುತ್ತಾರೆ. ಇದು ಏಕೆ ಮತ್ತು ಹೇಗೆ ಎನ್ನುವುದು ಒಂದು ಯಕ್ಷಪ್ರಶ್ನೆಯಾದರೆ ಬ್ಯಾಂಕ್ ಅಧಿಕಾರಿಗಳ ಇಂತಹ ಅಸಹಾಯಕ ಮನಸ್ಥಿತಿಗೆ ಬ್ಯಾಂಕಿನ ಒಳಗಿನ ಒತ್ತಡಗಳು ಹೆಚ್ಚು ಇರಬಹುದೇನೋ ಎಂದರೆ ತಪ್ಪಾಗಲಾರದೇನೋ …!
ಅಂತದ್ದು ಏನಿದೆ ಸಂಸ್ಥೆಯ ಒಳಗಿರುವ ಒತ್ತಡಗಳು ಎನ್ನಬಹುದು . ಪ್ರತಿಯೊಂದು ಇಲಾಖೆಗೆ ತನ್ನ ಇಲಾಖೆಯ ವ್ಯಾಪ್ತಿಗೆ ಬರುವ ಕೆಲಸಗಳು ಅಷ್ಟೇ ಸೀಮಿತವಾಗಿರುತ್ತವೆ. ಅದರಲ್ಲೂ ಕೆಲವು ವಿಭಾಗಗಳಿದ್ದು, ಎಲ್ಲರೂ ನೆಮ್ಮದಿಯಾಗಿ ತನ್ನ ವಿಭಾಗದ ಕೆಲಸವನ್ನು ಮುಗಿಸಿ ಮನೆ ಕಡೆಗೆ ಸರಿಯಾದ ಸಮಯಕ್ಕೆ ಮುಖ ಮಾಡುತ್ತಾರೆ, ಕುಟುಂಬದವರೊಡನೆ ಒಂದಷ್ಟು ಸಮಯವನ್ನು ಕಳೆಯುತ್ತಾ ನೆಮ್ಮದಿಯಾಗಿ ಬದುಕುತ್ತಾರೆ. ಅದರಲ್ಲೂ ಕೆಲವು ಇಲಾಖೆಗಳಲ್ಲಿ ಸಂಬಳದ ಜೊತೆಗೆ ಇತರೆ ಆದಾಯವನ್ನು ಗಳಿಸುವ ಇಲಾಖೆಗಳಿಗೇನು ಈ ದೇಶದಲ್ಲಿ ಕಡಿಮೆ ಇಲ್ಲ ಎನ್ನುವುದು ಜನಸಾಮಾನ್ಯರ ಮಾತಾಗಿಬಿಟ್ಟಿದೆ .
ಆದರೆ ಬ್ಯಾಂಕ್ ವಿಚಾರ ಬಂದಾಗ ಎಲ್ಲ ಇಲಾಖೆಯ ಆದಾಯ ವೆಚ್ಚಗಳ ವಿವರ, ತೆರಿಗೆಯ ನೀತಿಗಳು, ಖಾತೆಗಳ ಲೆಕ್ಕಾಚಾರಗಳು, ಬಡ್ಡಿಯ ಏರಿಳಿತಗಳು, ನೌಕರರ ಸಂಬಳಗಳು, ಮಕ್ಕಳ ವಿದ್ಯಾಭ್ಯಾಸದ ಸಾಲಗಳು, ಗೃಹ ಸಾಲಗಳು ತಾವು ಪಡೆಯುವ ಸಂಬಳದ ಮೇಲಿನ ಸಾಲಗಳು, ವ್ಯಾಪಾರಿಗಳ ಉದ್ದಿಮೆದಾರರ ಸಾಲ ಸೌಲಭ್ಯಗಳು, ಒಡವೆ ಸಾಲ ಸೌಲಭ್ಯಗಳು, ನಿವೃತ್ತಿ ಪಡೆದ ನೌಕರರ ಠೇವಣಿಗಳು, ಅದರ ಮೇಲಿನ ಬಡ್ಡಿ, ಪೆನ್ಷನ್ ಅದರ ಮೇಲಿನ ಸಾಲ ಸೌಲಭ್ಯ, ವರ್ಷಕ್ಕೊಮ್ಮೆ ಪಡೆಯುವ ಲೈಫ್ ಸರ್ಟಿಫಿಕೇಟ್, ವಾಹನ ಸಾಲ ಸೌಲಭ್ಯ, ಮತ್ತು ವಿಮೆಗಳು ಸಾಲ ಸೌಲಭ್ಯ ನೀಡಿದ ನಂತರ ಇರುವ ಮುಂದಿರುವ ಬಹುದೊಡ್ಡ ಸವಾಲು ಸಾಲ ವಸೂಲಾತಿ. ಅದಕ್ಕಾಗಿ ಅವರು ಕೊಡುವ ಅರಸಾಹಸ, ಅದಕ್ಕೆ ಸಂಬಂಧಿಸಿದ ಕಾನೂನು ರೀತಿಯ ಕ್ರಮಗಳು, ಎಷ್ಟೆಲ್ಲ ಇದ್ದರೂ ಅದನ್ನು ಸರಿಯಾದ ಸಮಯಕ್ಕೆ ಕ್ರಮ ಬದ್ಧವಾಗಿ ನಿರ್ವಹಣೆ ಮಾಡಿದ್ದೇನೆ. ಇಂದು ನನ್ನ ಕೆಲಸ ನನಗೆ ಖುಷಿ ನೀಡಿದೆ ಎಂದು ಸಂತೋಷದಿಂದ ಮನೆಗೆ ತೆರಳುವ ಯಾವ ಬ್ಯಾಂಕ್ ಅಧಿಕಾರಿಯನ್ನು ನೀವು ಕಾಣಲು ಸಾಧ್ಯವಿಲ್ಲವೇನೋ ಎನ್ನುವುದು ನನ್ನ ಅಭಿಪ್ರಾಯವಷ್ಟೇ .
ಆದರೆ ಇತ್ತೀಚಿಗೆ ಗ್ರಾಹಕರಿಗೆ ಸರಿಯಾದ ಸೇವೆಗಳನ್ನು ಕೊಡುವುದಿರಲಿ ಬ್ಯಾಂಕ್ ಉದ್ಯೋಗಿಗಳೇ ಮನೆ ಬಾಗಿಲಿಗೆ ಬಂದು ಸೇವೆ ಮಾಡಲು ಸಿದ್ಧವಿದ್ದರೂ ಬ್ಯಾಂಕ್ ನೌಕರರಿಗೆ ಮನಶಾಂತಿ ಇಲ್ಲವಾಗಿದೆ . ಸಾಮಾನ್ಯ ಗ್ರಾಹಕರನ್ನು ತೃಪ್ತಿಪಡಿಸಲು ಸಾಧ್ಯವಾಗುತ್ತಿಲ್ಲವೇನೋ ಅನಿಸಿದೆ. ಇದು ಇಂದಿನ ಬ್ಯಾಂಕುಗಳ ಮತ್ತು ಬ್ಯಾಂಕ್ ಉದ್ಯೋಗಿಗಳ ಪರಿಸ್ಥಿತಿ ಎನ್ನಬಹುದು . ಕಳೆದ 5–6 ವರ್ಷಗಳಿಂದೀಚೆಗೆ ಬ್ಯಾಂಕ್ ವ್ಯವಸ್ಥಾಪಕರು ತಮ್ಮ ಕುರ್ಚಿಯಲ್ಲಿ ಕೂರುವುದೇ ಅಪರೂಪವಾಗಿದೆ. ಕರೆ ಮಾಡಿ ಕೇಳಿದರೆ ಹೊರಗಡೆ ಬಂದಿದ್ದೇನೆ ದಯಮಾಡಿ ಕಾಯಬೇಕಾಗಿ ವಿನಂತಿ ಎನ್ನುತ್ತಾರೆ. ಕುರ್ಚಿಗೆ ಬಂದ ತಕ್ಷಣ ಇವರುಗಳು ಏನಾಗಬೇಕಿತ್ತು ಎಂದು ಗ್ರಾಹಕರನ್ನು ಕೇಳುವ ಬದಲು ಸರ್ ನಿಮ್ಮ ಹೆಸರಲ್ಲಿ PMJJBY, PMSBY, APY ಆಗಿದೆಯಾ? ಕ್ರೆಡಿಟ್ ಕಾರ್ಡ್ ಬೇಕಾ ? Rupay ಕಾರ್ಡ್ ತೆಗೆದುಕೊಂಡಿದ್ದೀರಾ? ಎಲ್ ಐಸಿ ಮಾಡಿಸಿದ್ದೀರಾ ? ಇತರೆ ಬೇರೆ ಬೇರೆ ಇನ್ಶೂರೆನ್ಸ್ ಯಾವುದಿದೆ ? ನಮ್ಮಲ್ಲೂ ಒಂದು ಮಾಡಿಸಿ ಸರ್ ತುಂಬಾನೇ ಒತ್ತಡವಿದೆ ನಮಗೆ ಟಾರ್ಗೆಟ್ ಇದೆ ಹೀಗೆ ಗೋಗರೆದು ಕೇಳುವ ದೈನ್ಯ ಸ್ಥಿತಿಯನ್ನು ನಾವು ನೋಡುತ್ತಿದ್ದೇವೆ.
ಆದರೆ ಇತ್ತೀಚಿಗೆ ಬ್ಯಾಂಕ್ ಅಧಿಕಾರಿಗಳು, ಹೆಣ್ಣು ಮಕ್ಕಳು, ನಿವೃತ್ತಿಯ ಅಂಚಿನಲ್ಲಿ ಇರುವವರು ಶಾಲೆ, ಕಾಲೇಜುಗಳು ದೊಡ್ಡ ಸಂಸ್ಥೆಗಳ ಮುಂದೆ ಬೃಹತ್ ಮಾಲುಗಳ ಮುಂದೆ ಹೋಟೆಲ್ಲುಳ ಮುಂದೆ ನಿಂತು ಹೋಗುವ–ಬರುವ ಗ್ರಾಹಕರನ್ನು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ , ಇನ್ಶೂರೆನ್ಸ್ ಪಾಲಿಸಿಗಳನ್ನು ಕೊಳ್ಳಲು ಅಂಗಲಾಚಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬ್ಯಾಂಕ್ ತನ್ನ ಅಧಿಕಾರಿಗೆ ಟಾರ್ಗೆಟ್ ನೀಡಿದ್ದು, ಅದನ್ನು ತಲುಪದ ಸ್ಥಿತಿ ನಿರ್ಮಾಣವಾಗಿ ವ್ಯವಸ್ಥಾಪಕರ ಬೇಸರದ ನಿತ್ಯದ ನಿವೇದನೆಯಾಗಿದೆ. ಇವೆಲ್ಲ ನೀವು ಯಾಕೆ ಮಾಡಬೇಕು ಎಂದರೆ ಏನು ಮಾಡೋಣ ಸರ್ ಎಂಬ ಉತ್ತರ ಕೊಡುತ್ತಾರೆ. ಇತರೆ ಇನ್ಸೂರೆನ್ಸ್ ಕಂಪನಿಯವರು ನಮಗೆ ಬ್ಯಾಂಕ್ ಕೆಲಸ ಮಾಡಲು ಬಿಡುತ್ತಿಲ್ಲ ಅವರು ಟಾರ್ಗೆಟ್ ರೀಚ್ ಮಾಡಲು ನಮ್ಮ ಹಿಂದೆ ಬಿದ್ದಿದ್ದಾರೆ. ಅವರು ಡೋರ್ ಸ್ಟೆಪ್ ಹೋಗಿ ಮಾಡಬೇಕಾದ ಕೆಲಸವನ್ನು ಬ್ಯಾಂಕ್ ಮ್ಯಾನೇಜರ್ ಮುಂದೆ ಬಂದು ಕುಳಿತು ಕೇಳುತ್ತಿದ್ದಾರೆ. ಮಾಡಿಸಿಲ್ಲವಾದರೆ ನಮ್ಮ ಮೇಲಾಧಿಕಾರಿಗಳಿಗೆ ವರದಿ ನೀಡಿ ನಮಗೆ ಗೌರವಿಲ್ಲದಂತೆ ಮಾಡಿಬಿಡುತ್ತಾರೆ. ಬೇರೆ ಕಂಪನಿಗಳ ಟಾರ್ಗೆಟ್ಟನ್ನು ಅವರ ಇಲಾಖೆಗಳ ಕೆಲಸವನ್ನೆಲ್ಲ ಬ್ಯಾಂಕುಗಳು ಯಾಕೆ ಮಾಡಬೇಕು ಅಂದರೆ ಇದು ಸರ್ಕಾರದ ಆದೇಶ ಎಂದು ಹೇಳಿಬಿಡುತ್ತಾರೆ. ಆದರೆ ಇತ್ತೀಚಿಗೆ ಕೇಂದ್ರ ಸರ್ಕಾರ ಚುನಾವಣೆಗಳು ಹತ್ತಿರವಾದಂತೆಲ್ಲ ಯಾಕೆ ಇಂಥ ಪಾಲಿಸಿಗಳ ಹಿಂದೆ ಬೀಳುತ್ತವೆ ಎನ್ನುವುದನ್ನು ಜನಸಾಮಾನ್ಯರು ಅರ್ಥಮಾಡಿಕೊಳ್ಳಬೇಕು. ವಿಮೆಗಳನ್ನು ನಿಜವಾಗಿಯೂ ಮಾಡಿಸಬೇಕಾದ ಹೊಣೆ ಯಾರದು? ಯಾರಿಗಾಗಿ ವಿಮೆ ಮಾಡಿಸಬೇಕು? ವಿಮೆ ಮಾಡಿಸಿಕೊಳ್ಳದಿದ್ದಲ್ಲಿ ಯಾರಿಗೆ ಯಾವ ಕುಟುಂಬಕ್ಕೆ ಹೆಚ್ಚು ನಷ್ಟ ಮತ್ತು ಸಂಕಷ್ಟ? ವಿಮೆಗಳನ್ನು ಮಾಡಿಸಿಕೊಳ್ಳುವುದು ಯಾರ ಆಯ್ಕೆ ಮತ್ತು ಯಾರ ಹಿತಾಸಕ್ತಿ? ಇವೆಲ್ಲವನ್ನೂ ಯೋಚಿಸಿ ವಿಮೆಯನ್ನು ಮಾಡಿಸಿಕೊಳ್ಳಬೇಕಾಗಿರುವುದು ಗ್ರಾಹಕರ ಇಷ್ಟವೋ ಅಥವಾ ಬ್ಯಾಂಕ್ ಉದ್ಯೋಗಗಳು ಗ್ರಾಹಕರಿಗೆ ಒತ್ತಾಯ ಪೂರ್ವಕವಾಗಿ ಮಾಡಿಸಲೇಬೇಕಾದ ಕರ್ತವ್ಯವೋ ? ಒಮ್ಮೆ ಯೋಚಿಸಬೇಕಾಗಿದೆ .
ವಿಮೆಗಳನ್ನು ಮಾಡಿಸಿಕೊಳ್ಳುವ ಹೊಣೆಗಾರಿಕೆ ಪ್ರತಿಯೊಬ್ಬ ಗ್ರಾಹಕರ ಅಥವಾ ಪ್ರತಿಯೊಬ್ಬ ಭಾರತೀಯ ಪ್ರಜೆಯ ಜವಾಬ್ದಾರಿಯೇ ಹೊರತು ಬೇರೆ ಯಾರು ಇಲ್ಲಿ ಜವಾಬ್ದಾರರಲ್ಲ . ವಿಮಾ ಕಂಪನಿಗಳಿಗೆ ಟಾರ್ಗೆಟ್ ಇರುವುದಾದರೆ ಕಂಪನಿಯ ನೌಕರರೇ ಗ್ರಾಹಕರನ್ನು ಮತ್ತು ಸಾಮಾನ್ಯ ಜನರನ್ನು ಭೇಟಿ ಮಾಡಬಹುದಲ್ಲವೇ? ಹಾಗಾದರೆ ಪ್ರತಿ ವರ್ಷ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಂದ 12ರಿಂದ 20 ರೂಪಾಯಿ ಮತ್ತು 365 ರಿಂದ 420 ಕಡಿತಗೊಳಿಸಿರುವುದಕ್ಕೆ ಗ್ರಾಹಕರ ಅನುಮತಿ ಇದೆಯಾ ? ಅಥವಾ ಗ್ರಾಹಕರು ಮರಣ ಹೊಂದಿದ್ದಾರೆ ಎಂದು ಯಾವ ಮಾನ ದಂಡದ ಮೂಲಕ ಸತ್ತವರನ್ನು ಗುರುತಿಸಿ ಬ್ಯಾಂಕುಗಳು ನ್ಯಾಯ ದೊರಕಿಸಿ ಕೊಡುತ್ತಿವೆ .
ಹಾಗಾದರೆ ಪ್ರತಿವರ್ಷ ಇಡೀ ದೇಶಾದ್ಯಂತ ಬ್ಯಾಂಕ್ ಗ್ರಾಹಕರಿಂದ ಎಷ್ಟು ಹಣ ವಸೂಲಾತಿ ಆಗಿದೆ . ಎಷ್ಟು ಹಣವನ್ನು ನೀವು ಫಲಾನುಭವಿಗಳಿಗೆ ತಲುಪಿಸಿದ್ದೀರಾ ? ವರ್ಷಕ್ಕೆ ಒಮ್ಮೆಯಾದರೂ ಆ ಕಂಪನಿಗಳು ಉತ್ತರ ಹೇಳಬೇಕಲ್ಲವೇ ? ಕಳೆದ ವರ್ಷ ವಿಮೆ ಮಾಡಿಸಿದವರು ಈ ವರ್ಷ ವಿಮೆ ಕಂತನ್ನು ಕಟ್ಟಿಲ್ಲವೆಂದರೆ ಆ ವಿಮಾದಾರ ತನ್ನ ವಿಮೆಯ ಅರ್ಹತೆಯನ್ನೇ ಕಳೆದುಕೊಳ್ಳುತ್ತಾನೆ . ಹಾಗಾದರೆ ಪ್ರತಿವರ್ಷ ಇಂತಹ ಎಷ್ಟು ಪ್ರಕರಣಗಳು ಲ್ಯಾಪ್ಸ್ ಆಗಿವೆ ಅವುಗಳಿಂದ ಕಂಪನಿಗಳಿಗೆ ಆದ ಉಳಿತಾಯವೆಷ್ಟು ? ವಿಮಾದಾರರಿಗೆ ಯಾವುದಾದರೂ ಬಾಂಡ್ ಮೂಲಕ ಕೊಟ್ಟರೆ ಸತ್ತ ವ್ಯಕ್ತಿಯ ಕುಟುಂಬಕ್ಕೆ ತಿಳಿಯುತ್ತದೆ ಇಲ್ಲದಿದ್ದರೆ ಹೇಗೆ ತಿಳಿಯುವುದು ಇವೆಲ್ಲವೂ ನಮ್ಮ ಮುಂದೆ ಇರುವ ಪ್ರಶ್ನೆಗಳು ಅಲ್ಲವೇ ? ಬ್ಯಾಂಕ್ ನೌಕರರು ತಮ್ಮ ಇಲಾಖೆಯ ಕೆಲಸದ ಜೊತೆಯಲ್ಲಿ ಇವೆಲ್ಲವನ್ನು ತಲೆ ಕೆಡಿಸಿಕೊಂಡು ಮಾಡುವ ಹೊಣೆಗಾರಿಕೆಯನ್ನು ಯಾಕೆ ಅವರ ಮೇಲೆ ಹಾಕಬೇಕಾಗಿದೆ.
ಯಾರದೋ ಕೆಲಸವನ್ನು ಇವರು ಮಾಡಬೇಕಾದ ಒತ್ತಡಗಳಿಗೆ ಸಿಕ್ಕ ಅದೆಷ್ಟೋ ವ್ಯವಸ್ಥಾಪಕರು ಬ್ಯಾಂಕ್ ಉದ್ಯೋಗಿಗಳು ಹೃದಯಘಾತದಿಂದ ಕಚೇರಿಯಲ್ಲಿ ಕೊನೆಯಸಿರೆಳೆದ ಘಟನೆಗಳನ್ನ ದಿನನಿತ್ಯ ಪತ್ರಿಕೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಅವರ ಕುಟುಂಬಗಳಿಗೆ ಯಾರು ಹೊಣೆಗಾರರು? ಅದೆಷ್ಟೋ ಯುವಕರು ಈ ದೇಶದಲ್ಲಿ ಉದ್ಯೋಗ ಸಿಗದೇ ನಿರುದ್ಯೋಗಿಗಳಾಗಿದ್ದಾರೆ. ಅಂತಹವರಿಗೆ ಈ ಕಂಪನಿಗಳು ಉದ್ಯೋಗ ಕೊಟ್ಟು ಆ ಕೆಲಸವನ್ನು ಮಾಡಿಸಬಹುದಲ್ಲವೇ? ಏಕೆ ಬ್ಯಾಂಕ್ ನೌಕರರಿಗೆ ಒತ್ತಡದ ಮೇಲೆ ಒತ್ತಡ ಏರುತ್ತಾ ಅವರ ನೆಮ್ಮದಿಯನ್ನು ಹಾಳು ಮಾಡಬೇಕು . ಉದ್ಯೋಗ ಸೃಷ್ಠಿಯ ಹೊಣೆಗಾರಿಕೆಯನ್ನು ಈಗ ಕಾರ್ಪೊರೇಟ್ ಕಂಪನಿಗಳು ನಿರ್ವಹಿಸಬಹುದಲ್ಲವೇ ? ಈಗ ಯಾಕೆ ಬ್ಯಾಂಕುಗಳು ಈ ಕಾರ್ಯವನ್ನು ನಿರ್ವಹಿಸಬೇಕು. ಅವರು ನಮ್ಮಂತೆಯೇ ಮನುಷ್ಯರಲ್ಲವೇ ? ಅವರಿಗೂ ಸಂಸಾರ, ಮಕ್ಕಳು, ಬಂಧು ಬಳಗಗಳ ಒಡನಾಟದ ಅವಶ್ಯಕತೆ ಇಲ್ಲವೇ ? ನಾವುಗಳು ನಮ್ಮ ಕೆಲಸ ಮುಗಿಸಿ ಮನೆಗೆ ಬಂದು ಸ್ವಲ್ಪ ಸಮಯ ಕಾಲ ಕಳೆದು ಸ್ನೇಹಿತರ ಮನೆಗೋ, ಮದುವೆ ಮತ್ತು ಇತರ ಸಮಾರಂಭಕ್ಕೋ ಹೊರಟಾಗ ಎಷ್ಟೋ ಬ್ಯಾಂಕ್ ವ್ಯವಸ್ಥಾಪಕರು, ಸಿಬ್ಬಂದಿಗಳು ಸುಮಾರು ರಾತ್ರಿಯ 8:00 ಗಂಟೆ ಆದರೂ ಅರ್ಧ ಬಾಗಿಲು ಮುಚ್ಚಿ ಕೆಲಸ ಮಾಡುತ್ತಿರುವ ದೃಶ್ಯವನ್ನು ಕಣ್ಣಾರೆ ಕಂಡಿದ್ದೇವೆ.ಇಂತಹ ವ್ಯವಸ್ಥೆ ಬ್ಯಾಂಕ್ ನೌಕರರಿಗೆ ಏಕೆ? ಯಾರೋ ಮಾಡಬೇಕಾದ ವಿಮಾ ಕೆಲಸವನ್ನು ತನಗೆ ಸಂಬಂಧವೇ ಇಲ್ಲದ ಬ್ಯಾಂಕ್ ನೌಕರ ಮಾಡಬೇಕು. ಎಲ್ಲಾ ಸದುಪಯೋಗವನ್ನು ವಿಮಾ ಕಂಪನಿಗಳು ಪಡೆಯಬೇಕು. ಇದು ವಿಮಾ ಕಂಪನಿಗಳಿಗೆ ಸರಿ ಎನಿಸಿದೆಯೇ ? ಇದನ್ನೆಲ್ಲರೂ ಗಂಭೀರವಾಗಯೋಚಿಸಬೇಕಾಗಿದೆ.
ದಯವಿಟ್ಟು ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ವಿಮಾ ಕಂಪನಿಗಳು, ಕಂಪನಿಗಳ ಒಡೆತನವನ್ನು ಹೊಂದಿರುವವರು ದಯಮಾಡಿ ಬ್ಯಾಂಕ್ ನೌಕರ ಮಿತ್ರರನ್ನು ಬೀದಿ ಬೀದಿಯಲ್ಲಿ ಪಾಲಿಸಿಗಳಿಗಾಗಿ ಅಲೆಯಬೇಕಾದ ಪರಿಸ್ಥಿತಿಯನ್ನು ತಂದೊಡ್ಡಬೇಡಿ. ಗ್ರಾಹಕರು ಬ್ಯಾಂಕ್ ಅಧಿಕಾರಿಗಳನ್ನು ನೋಡಿದ ತಕ್ಷಣವೇ ದೂರ ಹೋಗುವ ಪರಿಸ್ಥಿತಿಯನ್ನು ಸೃಷ್ಠಿಸಬೇಡಿ ಅವರುಗಳು ನಮ್ಮಂತೆ ಸರ್ಕಾರಿ ನೌಕರರಂತೆ ನೆಮ್ಮದಿಯಾಗಿ ದುಡಿದು ಘನತೆಯಿಂದ ಬದುಕಲು ಬಿಡಿ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw