ಹಿಂದೂಗಳಿಗೆ ಮಾತ್ರವೇ ವ್ಯಾಪಾರಕ್ಕೆ ಅವಕಾಶ: ಮಂಗಳೂರಿನಲ್ಲಿ ಮತ್ತೊಂದು ಬ್ಯಾನರ್
ಮಂಗಳೂರು ನಗರದ ಕಾವೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಸಂತೆ ವ್ಯಾಪಾರಕ್ಕೆ ಅವಕಾಶ ಎಂದು ಸಂಘ ಪರಿವಾರದ ಹೆಸರಿನಲ್ಲಿ ಬ್ಯಾನರ್ ಹಾಕಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಈ ಬ್ಯಾನರ್ ನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಹಾಗೂ ಈ ವಿಚಾರವಾಗಿ ಬೇಜವಾಬ್ದಾರಿಯುತವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಪಿಎಂ ಮಂಗಳೂರು ಉತ್ತರ ಸಮಿತಿ ಮತ್ತು ಡಿವೈಎಫ್ ಐ ಮಂಗಳೂರು ನಗರ ಸಮಿತಿಯು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಕಾವೂರು ಜಾತ್ರೆ ಇಂದಿನಿಂದ ಆರಂಭಗೊಳ್ಳಲಿದೆ. ಈ ಜಾತ್ರೆಯಲ್ಲಿ ವಿವಿಧ ಮತ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿಗಳು ಭಾಗವಹಿಸುವುದು, ಸಂತೆ ವ್ಯಾಪಾರ ಮಾಡುತ್ತಿರುವುದು ಹಿಂದಿನಿಂದಲೂ ನಡೆದುಬಂದಿದೆ.
ಆದರೆ ಜನವರಿ 10ರಂದು ‘ಮುಸ್ಲಿಮ್ ಧರ್ಮದವರು ಸಂತೆ ವ್ಯಾಪಾರ ಮಾಡುವುದಕ್ಕೆ ಬಹಿಷ್ಕಾರ ಹಾಕಲಾಗಿದೆ’ ಎಂಬ ಜನಾಂಗೀಯ ನಿಂದನೆಯ ಬ್ಯಾನರ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ, ಎಸಿಪಿಯವರ ಗಮನಕ್ಕೆ ತಂದ ಬಳಿಕ ಅದನ್ನು ತೆರವುಗೊಳಿಸಲಾಗಿತ್ತು.
ಆದರೆ ಶುಕ್ರವಾರ ಮತ್ತೆ ಇದೇ ರೀತಿ ‘ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ. ವಿಗ್ರಹಾರಾಧನೆಯನ್ನು ‘ಹರಾಂ’ ಎಂದು ನಂಬಿರುವ ಯಾರಿಗೂ ಅವಕಾಶವಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾವೂರು ಪ್ರಖಂಡ ಹೆಸರಿನಲ್ಲಿ ಬ್ಯಾನರ್ ಆಳವಡಿಸಲಾಗಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw