ಬಂತು ನೋಡಿ “ಸಾವಯವ ನುಗ್ಗೆ ಪೌಡರ್” | ಇದನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?
ಕೊಪ್ಪಳ: ಪೌಷ್ಠಿಕಾಂಶದ ಕಣಜ ಎಂದೇ ಕರೆಯಲ್ಪಡುವ ನುಗ್ಗೆ ಕಾಯಿಯನ್ನು ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕೊಪ್ಪಳ ಜಿಲ್ಲಾಡಳಿತ ಮುಂದಾಗಿದ್ದು, ಈ ನಿಟ್ಟಿನಲ್ಲಿ “ಸಾವಯವ ನುಗ್ಗೆ ಪೌಡರ್” ಪೂರೈಕೆಗೆ ಮುಂದಾಗಿದೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರ ಇಂತಹ ಅಪೌಷ್ಟಿಕ ಮಕ್ಕಳ ಆರೋಗ್ಯವನ್ನು ಸದೃಢ ಮಾಡಬೇಕೆಂಬ ಉದ್ದೇಶದಿಂದ ಹಲವು ಯೋಜನೆ ಜಾರಿಗೊಳಿಸಿವೆ. ಆದರೆ ಜಿಲ್ಲೆಯಲ್ಲಿ ಅಪೌಷ್ಠಿಕತೆ ಇನ್ನೂ ಹೋಗಿಲ್ಲ ಈ ನಿಟ್ಟಿನಲ್ಲಿ ಹೊಸ ಪ್ರಯೋಗಕ್ಕೆ ಕೊಪ್ಪಳ ಜಿಲ್ಲಾಡಳಿತ ಮುಂದಾಗಿದೆ ಎಂದು ವರದಿಯಾಗಿದೆ.
ಈಗಾಗಲೆ ಮಕ್ಕಳಿಗೆ ಗೋದಿ, ರಾಗಿ, ಅಕ್ಕಿ, ಬೆಲ್ಲ ಪೂರೈಕೆ ಮಾಡಲಾಗುತ್ತಿದೆ. ಇದರೊಟ್ಟಿಂದಿಗೆ ಸಾವಯವ ನುಗ್ಗೆ ಪೌಡರ್ ಇದರಲ್ಲಿ ಸೇರ್ಪಡೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆರಂಭದಲ್ಲಿ 100 ಅಪೌಷ್ಟಿಕ ಮಕ್ಕಳಿಗೆ ಇದರ ಪ್ರಯೋಗ ನಡೆಸಿದೆ. ಪ್ರತಿ ತಾಲೂಕಿಗೆ 20
ಮಕ್ಕಳಂತೆ ಪಟ್ಟಿ ಮಾಡಿದ್ದು ಅವರಿಗೆ 0.75 ಗ್ರಾಂ ಪೌಡರ್ ಅನ್ನು ಮಾಲ್ಟ್ ನೊಂದಿಗೆ ಮಿಶ್ರಣ ಮಾಡಿ ಕೊಡಲು ಮುಂದಾಗಿದೆ.
ಈ ಪೌಡರ್ ನ್ನು ಮಾಲ್ಟ್ ನ ಜೊತೆಗೆ ಮಿಶ್ರಣ ಮಾಡಿ ಕುಡಿಸಿದರೆ ಮಕ್ಕಳಲ್ಲಿ ಹಸಿವು ಹೆಚ್ಚಾಗುತ್ತದೆ. ಹಸಿವು ಹೆಚ್ಚಿದಂತೆ ಮಗು ಹೆಚ್ಚು ಊಟ ಮಾಡುತ್ತದೆ. ಇದರಿಂದಾಗಿ ಮಗುವಿನ ದೇಹದ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.