ಬಂಟ್ವಾಳದ ಮಹಮ್ಮದ್ ಸಾವದ್ ಹತ್ಯೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ: ಹತ್ಯೆಗೆ ಕಾರಣ ಬಯಲು
ಮೂಡಿಗೆರೆ/ಬಂಟ್ವಾಳ: ಯುವಕನೋರ್ವನನ್ನು ಕೊಲೆ ಮಾಡಿ ಮೂಡಿಗೆರೆ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ದೇವರಮನೆ ಸಮೀಪ ಶವವನ್ನು ಎಸೆದು ಹೋಗಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಮಹಮ್ಮದ್ ಸಾವದ್ ಎಂಬ ಯುವಕನ ಕೊಲೆಗೆ ಸಂಬಂಧಿಸಿದಂತೆ ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂಬುವವರನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ. ಜಂಜೂರಾಜ್ ಮಹಾಜನ್ ನೇತೃತ್ವದ ಪೊಲೀಸ್ ತಂಡ ನಿನ್ನೆ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಗುರುವಾಯನಕೆರೆ ಎಂಬಲ್ಲಿ ಬಂಧಿಸಿ ಇಂದು ಮೂಡಿಗೆರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೂ ಮೂವರು ಆರೋಪಿಗಳ ತಲೆಮರೆಸಿಕೊಂಡಿದ್ದು, ಅವರ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಗಾಂಜಾ ವ್ಯವಹಾರದಲ್ಲಿ ಕೊಲೆ:
ಪೊಲೀಸರ ಪ್ರಾಥಮಿಕ ತನಿಖೆಯಿಂದ ಈ ಕೊಲೆ ಮಾದಕವಸ್ತು ಗಾಂಜಾ ವ್ಯವಹಾರಕ್ಕೆ ಸಂಬಂಧಿಸಿದಂತೆ ಉಂಟಾದ ಗಲಾಟೆಯಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಪಡುಬಿದ್ರೆಯ ಬೆಂಗ್ರೇ ಎಂಬಲ್ಲಿ ಸಾವದ್ ನನ್ನು ಕೊಲೆ ಮಾಡಿ ಹೆಣವನ್ನು ತಂದು ದೇವರಮನೆ ಗುಡ್ಡದಲ್ಲಿ ಎಸೆದು ಹೋಗಿದ್ದರು ಎಂದು ತಿಳಿದುಬಂದಿದೆ.
ಜೂನ್ 8 ರಂದು ದೇವರಮನೆ ಸಮೀಪ ರಸ್ತೆಯಂಚಿನಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು. ಆ ಶವ ತಮ್ಮ ಮಗನದೆಂದು ಬಂಟ್ವಾಳ ಮೂಲದ ಕುಟುಂಬ ಗುರುತಿಸಿತ್ತು.
ಕೊಲೆಗೀಡಾದ ಸಾವದ್ ಮಾದಕವಸ್ತು ವ್ಯಸನಿಯಾಗಿದ್ದ ಮತ್ತು ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದು ಬಂದಿತ್ತು. ಕೊನೆಗೆ ಆತ ತನ್ನ ಮಾದಕವಸ್ತು ಮಾರಾಟದ ಗ್ಯಾಂಗ್ ನಿಂದಲೇ ಕೊಲೆಗೀಡಾಗಿದ್ದಾನೆ.
ಪ್ರಕರಣವನ್ನು ಶೀರ್ಘವಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw