ಮದುವೆ, ವಿಚ್ಛೇದನಕ್ಕೆ ಏಕರೂಪದ ನಾಗರಿಕ ಸಂಹಿತೆ ಅಗತ್ಯ ಎಂದ ದೆಹಲಿ ಹೈಕೋರ್ಟ್!

ನವದೆಹಲಿ: ಮದುವೆ ವಿಚ್ಛೇದನ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕ ರೂಪದ ಸಂಹಿತೆ ರೂಪಿಸುವುದು ಇಂದಿನ ತುರ್ತು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ನಾಗರಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸಲು ಇದು ಸಹಾಯಕ ಎಂದು ಕೋರ್ಟ್ ಪ್ರತಿಪಾದಿಸಿದೆ ಎಂದು ವರದಿಯಾಗಿದೆ.
ಈಗ ಹಲವಾರು ವೈಯಕ್ತಿಕ ಕಾನೂನುಗಳು ಜಾರಿಯಲ್ಲಿವೆ. ಇವುಗಳು ಸೃಷ್ಟಿಸುವ ಸಂಘರ್ಷ, ವಿರೋಧಾಭಾಸಗಳಿಂದ ನಾಗರಿಕರು ತೊಂದರೆ ಅನುಭವಿಸುವುದನ್ನು ತಪ್ಪಿಸಬೇಕಾದರೆ, ಇಂತಹ ಸಂಹಿತೆಯನ್ನು ರೂಪಿಸಿ ಜಾರಿಗೊಳಿಸಬೇಕು ಎಂದು ಅನೇಕ ಪ್ರಕರಗಳಿಗೆ ಸಂಬಂಧಿಸಿದಂತೆ ತೀರ್ಪುಗಳನ್ನು ಪ್ರಕಟಿಸಿದ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ಈ ಆಶಯವನ್ನು ಪುನರುಚ್ಚರಿಸುತ್ತಲೇ ಬಂದಿದೆ ಎಂದು ನ್ಯಾಯಮೂರ್ತಿ ಪ್ರತಿಭಾ ಸಿಂಗ್ ಹೇಳಿದರು.
ಸಮಾಜದಲ್ಲಿ ಈಗ ಸಾಕಷ್ಟು ಬದಲಾವಣೆ ಕಾಣಬಹುದು. ಧರ್ಮ, ಜಾತಿ ಹಾಗೂ ಸಮುದಾಯಗಳೆಂಬ ಬೇಲಿಗಳು ಕಣ್ಮರೆಯಾಗುತ್ತಿವೆ. ಸಮಾನತೆ ಮನೆ ಮಾಡುತ್ತಿದೆ. ಹೀಗಾಗಿ, ಮದುವೆ, ವಿಚ್ಛೇದನ ಹಾಗೂ ಆಸ್ತಿಗಳ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಏಕರೂಪದ ಸಂಹಿತೆ ಅಗತ್ಯ ಎಂದು ಅವರು ಹೇಳಿದರು.