ಯಡಿಯೂರಪ್ಪ ಅವರ ಸಿಡಿ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿದವರಿಗೆ ಸಚಿವ ಸ್ಥಾನ ನೀಡಲಾಗಿದೆ | ಯತ್ನಾಳ್ ಆರೋಪ
13/01/2021
ವಿಜಯಪುರ: ಯಡಿಯೂರಪ್ಪ ಅವರ ಸಿಡಿ ಇಟ್ಟುಕೊಂಡು ಯಾರೆಲ್ಲ ಬ್ಲ್ಯಾಕ್ ಮೇಲ್ ಮಾಡಿದ್ದಾರೋ ಅವರಿಗೆಲ್ಲ ಸಚಿವ ಸ್ಥಾನ ನೀಡಲಾಗಿದೆ ಎಂದು ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಹಿಂದೆಲ್ಲ ಜಾತಿ ಕೋಟಾ, ಜಿಲ್ಲಾ ಕೋಟಾ, ಪಕ್ಷಕ್ಕಾಗಿ ದುಡಿದವರ ಕೋಟಾ ಎಂದೆಲ್ಲ ಇತ್ತು. ಇಂದು ಬ್ಲ್ಯಾಕ್ ಮೇಲ್ ಕೋಟಾ, ಹಣಕೊಟ್ಟವರ ಕೋಟಾವಾಗಿ ಅದು ಬದಲಾಗಿದೆ ಎಂದು ಗಂಭೀರವಾಗಿ ಆರೋಪಿಸಿರುವ ಯತ್ನಾಳ್, ಸಿಡಿ ವಿವಾದದ ಚರ್ಚೆಗೆ ಮತ್ತೆ ಜೀವ ನೀಡಿದ್ದಾರೆ.
ನೂತನ ಸಚಿವರ ಪಟ್ಟಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಯಾರದ್ದೆಲ್ಲ ಹೆಸರಿಲ್ಲವೋ, ಅವರು ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಮತ್ತೆ ಅಸಮಾಧಾನದ ಹೊಗೆಯೆದ್ದಿದ್ದು, ಈ ನಡುವೆ ಯಡಿಯೂರಪ್ಪ ಅವರ ಸಿಡಿ ವಿಚಾರವಾಗಿ ಶಾಸಕರು ಮಾತನಾಡಲು ಆರಂಭಿಸಿದ್ದಾರೆ.