ಬಸವಣ್ಣನ ಇತಿಹಾಸ ತಿಳಿದುಕೊಂಡು ಬನ್ನಿ | ಅರುಣ್ ಸಿಂಗ್ ಗೆ ಬೆವರಿಳಿಸಿದ ಸತೀಶ್ ಜಾರಕಿಹೊಳಿ

ಬೆಳಗಾವಿ: ಕರ್ನಾಟಕಕ್ಕೆ ಬರುವ ಮೊದಲು ಬಸವಣ್ಣನ ಇತಿಹಾಸ ತಿಳಿದುಕೊಂಡು ಬನ್ನಿ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಹಿಂದೂ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೌಢ್ಯ ವಿರೋಧಿ ಹೋರಾಟ ಆರಂಭವಾಗಿದ್ದು 6ನೇ ಶತಮಾನದಲ್ಲಿ. ಅದನ್ನು ನಾನು ಆರಂಭ ಮಾಡಿದ್ದಲ್ಲ. ಬಸವಣ್ಣನವರು ಮಾಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಬರೆದಿದ್ದಾರೆ. ಅವರ ವಿಚಾರಗಳನ್ನು ನಾವು ಅನುಸರಿಸುತ್ತಿದ್ದೇವೆ. ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದೇವೆ. ಯಾವುದೇ ಜಾತಿ, ಧರ್ಮದ ವಿರುದ್ಧ ನಾವು ಹೋರಾಡುತ್ತಿಲ್ಲ. ಮೂಢನಂಬಿಕೆಗಳಿಗೆ ಬಲಿಯಾಗಬೇಡಿ ಎಂದು ಅವರು ಕರೆ ನೀಡಿದರು.
ಬಿಜೆಪಿಯವರಿಗೆ ಉಪ ಚುನಾವಣೆ ಪ್ರಚಾರದಲ್ಲಿ ಯಾವುದೇ ವಿಷಯಗಳಿಲ್ಲ. ಧರ್ಮ, ಜಾತಿಯೇ ಅವರ ವಿಷಯವಾಗಿವೆ. ಚುನಾವಣೆ ಪ್ರಚಾರಕ್ಕೆ ಬಂದ ಅವರು, ಏನೋ ಹೇಳಬೇಕೆಂದು ಯಾರೋ ಹೇಳಿಕೊಟ್ಟಿದ್ದನ್ನು ಹೇಳಿದ್ದಾರೆ ಎಂದು ಅವರು ತಿರುಗೇಟು ನೀಡಿದ್ದಾರೆ.