ಬೌದ್ಧಿಕ ದಾರಿದ್ರ್ಯದ ವ್ಯಾಧಿಯೂ ಸಮೂಹ ಸನ್ನಿಯ ವ್ಯಸನವೂ- ನಾ ದಿವಾಕರ - Mahanayaka
5:08 PM Wednesday 11 - December 2024

ಬೌದ್ಧಿಕ ದಾರಿದ್ರ್ಯದ ವ್ಯಾಧಿಯೂ ಸಮೂಹ ಸನ್ನಿಯ ವ್ಯಸನವೂ- ನಾ ದಿವಾಕರ

07/02/2021

ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ನೋವಿನ ಧ್ವನಿ ಕೇಳಿಬಂದರೂ ಸಾಂತ್ವನ ಹೇಳುವ ಮನಸ್ಥಿತಿ ಇದ್ದರೆ ಮಾತ್ರ ನಾವು ನಾಗರಿಕ ಜಗತ್ತಿನ ಮನುಷ್ಯರು ಎಂದು ಎದೆ ಮುಟ್ಟಿ ಹೇಳಿಕೊಳ್ಳಲು ಸಾಧ್ಯ. ಹಾಗೆಯೇ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯ ಮತ್ತು ಅನ್ಯಾಯದ ವಿರುದ್ಧ ದನಿ ಎತ್ತುವ ಮನಸ್ಥಿತಿ ಇದ್ದರೆ ಮಾತ್ರ ನಮ್ಮಲ್ಲಿ ಮನುಷ್ಯತ್ವ ಇದೆ ಎಂದು ಬೆನ್ನು ತಟ್ಟಿಕೊಳ್ಳಲು ಸಾಧ್ಯ. ಈ ದಾರ್ಶನಿಕತೆಯನ್ನು ಕಳೆದುಕೊಂಡ ಯಾವುದೇ ಮಾನವ ಸಮಾಜ ಮನುಜ ಜಗತ್ತಿನಲ್ಲಿ ಬದುಕುವ ಅರ್ಹತೆಯನ್ನೇ ಕಳೆದುಕೊಂಡುಬಿಡುತ್ತದೆ. ಸಾವನ್ನು ಸಂಭ್ರಮಿಸುವ , ನೋವನ್ನು ಶ್ರೇಣೀಕರಿಸುವ ಮತ್ತು ಅನ್ಯಾಯವನ್ನು ವರ್ಗೀಕರಿಸುವ ಯಾವುದೇ ಸಮಾಜ ಶಿಲಾಯುಗಕ್ಕೂ ಮುಂಚಿನ ಸಮಾಜದಂತೆಯೇ ಕಾಣುತ್ತದೆ.

ದುರಂತ ಎಂದರೆ ಭಾರತ ಇಂತಹ ಒಂದು ಸಮಾಜವನ್ನೇ ಬಿಂಬಿಸುವಂತೆ ಕಾಣುತ್ತಿದೆ. ಭಾರತ ಹೀಗಿರಲಿಲ್ಲ ಎಂದು ಹೇಳುವುದು ಸುಲಭ ಆದರೆ ಏಕೆ ಹೀಗಾಗಿದೆ ಎಂದು ಯೋಚಿಸುವುದು ಮುಖ್ಯ. “ ವಸುದೈವ ಕುಟುಂಬಕಂ” ನಮ್ಮ ನಾಗರಿಕತೆಯ ಸಂಕೇತ, ಭವ್ಯ ಭಾರತ ಪರಂಪರೆಯ ದ್ಯೋತಕ ಎಂದು ಬೆನ್ನು ಚಪ್ಪರಿಸಿಕೊಳ್ಳುವ ಭಾರತದಲ್ಲಿ ಇಂದು ಸಾವು ನೋವು , ನ್ಯಾಯಾನ್ಯಾಯಗಳ ಪರಾಮರ್ಶೆ ಅಸ್ಮಿತೆಗಳ ಚೌಕಟ್ಟಿನಲ್ಲಿ ನಡೆಯುತ್ತಿದೆ. ಇಡೀ ವಿಶ್ವವನ್ನೇ ಒಂದು ಕುಟುಂಬ ಎಂದು ಭಾವಿಸುವ ಸಮಾಜದಲ್ಲಿ, ನಮ್ಮೊಳಗೆ ನಡೆಯುವ ಅನ್ಯಾಯಗಳಿಗೆ ಮತ್ತಾರೋ ಸ್ಪಂದಿಸಿದಾಗ ಆಕ್ರೋಶ ಭುಗಿಲೇಳುತ್ತದೆ. ಇದು ವಿಕೃತಿಯೋ ವೈಚಿತ್ರ್ಯವೋ ? ಸಾವು ನೋವಿನಲ್ಲೂ ‘ ಅನ್ಯರನ್ನು ’ ಗುರುತಿಸುವಷ್ಟು ಮಟ್ಟಿಗೆ ಸಂವೇದನೆಯನ್ನು ಕಳೆದುಕೊಂಡಿರುವ ಒಂದು ಬೃಹತ್ ಸಮುದಾಯ ಭಾರತದ ಸುಶಿಕ್ಷಿತ, ಸುಸಂಸ್ಕೃತ(?), ಆಧುನಿಕ ಸಮಾಜದಲ್ಲಿ ಬೆಳೆಯುತ್ತಲೇ ಇದೆ.

ನಿಜ, ಭಾರತ ಹೀಗಿರಲಿಲ್ಲ. ನೆರೆ ರಾಷ್ಟ್ರಗಳಲ್ಲಿ ಪ್ರಕ್ಷುಬ್ಧತೆ ಉಂಟಾದಾಗ ತನ್ನ ಸೇನೆಯನ್ನು ಕಳುಹಿಸಿ ದಂಗೆಯನ್ನು ಮಣಿಸುವ ಧೋರಣೆ ಭಾರತದ್ದಾಗಿತ್ತು. ಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಭಾರತದಲ್ಲಿ ಜನಾಂದೋಲನಗಳೇ ರೂಪುಗೊಂಡಿದ್ದವು. ಮ್ಯಾನ್ಮಾರ್ನಳಲ್ಲಿ ಪ್ರಜಾಸತ್ತೆಯ ರಕ್ಷಣೆಗಾಗಿ ಅವಿರತ ಶ್ರಮಿಸಿದ ಅಂಗ್ ಸೂ ಕಿ ಅವರ ಪ್ರಜಾಂದೋಲನಕ್ಕೆ ಭಾರತದ ಪ್ರಜಾಸತ್ತಾತ್ಮಕ ಮನಸುಗಳು ಸ್ಪಂದಿಸಿದ್ದವು. ಈಗಲೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯಗಳಿಗೆ ಇಲ್ಲಿನ ಹಿಂದೂ ಮನಸುಗಳು ಮಿಡಿಯುತ್ತವೆ, ಸ್ಪಂದಿಸುತ್ತವೆ. ಪಾಕಿಸ್ತಾನದಲ್ಲಿ ಒಂದು ದೇವಸ್ಥಾನ ಕೆಡವಿದರೆ ಇಲ್ಲಿನ ಭಕ್ರ ಪಾಳಯದಲ್ಲಿ ಅಲ್ಲೋಲಕಲ್ಲೋಲವಾಗುತ್ತದೆ. ಅಮೆರಿಕದಲ್ಲಿ ಒಬ್ಬ ಭಾರತೀಯನ ಕೊಲೆಯಾದರೆ ಇಲ್ಲಿನವರ ರಕ್ತ ಕುದಿಯುತ್ತದೆ. ಇದಾವುದೂ ಅಪರಾಧವಲ್ಲ, ಪ್ರಮಾದವೂ ಅಲ್ಲ. ಮಾನವ ಸಹಜ ಸಂವೇದನೆಯಷ್ಟೇ.

ಮತ್ತೊಂದು ಮಜಲನ್ನು ನೋಡೋಣ. ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ, ಪಂಡಿತರು ನಿರಾಶ್ರಿತರಾಗಿದ್ದಾರೆ ಎಂದು ಅಮೆರಿಕ, ಯೂರೋಪ್ನ ಪ್ರಜೆಗಳಾಗಿರುವ ಭಾರತೀಯ ಸಂಜಾತರು ಪ್ರತಿರೋಧ ವ್ಯಕ್ತಪಡಿಸುತ್ತಾರೆ. ಭಾರತ ಸರ್ಕಾರ ಜಾರಿಗೊಳಿಸುವ ಪೌರತ್ವ ತಿದ್ದುಪಡಿ ಕಾಯ್ದೆಗೆ ಭಾರತೀಯ ಸಂಜಾತ ಅಮೆರಿಕನ್ನರು ನೇರ ಬೆಂಬಲ ವ್ಯಕ್ತಪಡಿಸುತ್ತಾರೆ. ಇಲ್ಲಿ ನಡೆಯುವ ಪ್ರತಿಯೊಂದು ಅಹಿತಕರ ಘಟನೆಗೂ ವಿದೇಶಗಳಲ್ಲಿನ ಅನಿವಾಸಿ ಭಾರತೀಯರು, ಭಾರತೀಯ ಸಂಜಾತರು ಮತ್ತು ವಿದೇಶಿ ಸಂಘಟನೆಗಳು ಪ್ರತಿಕ್ರಯಿಸಿದಾಗ ನಾವು ಹೆಮ್ಮೆ ಪಡುತ್ತೇವೆ. ಹಾಗೆಯೇ ವಿದೇಶಗಳಲ್ಲಿರುವ ಭಾರತೀಯರ ಮೇಲೆ ನಡೆಯುವ ದೌರ್ಜನ್ಯಗಳಿಗೂ ನಾವು ಸ್ಪಂದಿಸುತ್ತೇವೆ. ಹೀಗೆ ತಾರತಮ್ಯ, ದೌರ್ಜನ್ಯಕ್ಕೊಳಗಾಗಿರುವ ಹಿಂದೂಗಳನ್ನು ಭಾರತಕ್ಕೆ ಕರೆತಂದು ಪೌರತ್ವ ನೀಡಲು ಸರ್ಕಾರ ಕಾನೂನನ್ನೇ ಸಿದ್ಧಪಡಿಸಿದೆ. ಇವೆಲ್ಲವೂ ನಮಗೆ ಸಹಜ ಎನಿಸುತ್ತದೆಯೇ ಹೊರತು ಮತ್ತೊಂದು ದೇಶದ ಆಂತರಿಕ ವಿಚಾರ ಎನಿಸುವುದಿಲ್ಲ.

ಆದರೆ ನಮ್ಮ ದೇಶದಲ್ಲೇ, ನಮ್ಮ ಮಣ್ಣಿನ ಮಕ್ಕಳೇ ಅನ್ಯಾಯಕ್ಕೊಳಗಾದಾಗ, ದೌರ್ಜನ್ಯಕ್ಕೊಳಗಾದಾಗ, ಹಲ್ಲೆಗೊಳಗಾದಾಗ ಪ್ರತಿಕ್ರಯಿಸಲು ಅಸ್ಮಿತೆಗಳ ಮೊರೆ ಹೋಗುತ್ತೇವೆ. ಅತ್ಯುನ್ನತ ಪ್ರಶಸ್ತಿ ಪಡೆದವರ ಜಾತಕವನ್ನೂ ಗೂಗಲ್ನತಲ್ಲಿ ಹುಡುಕಲಾಗುತ್ತದೆ, ಆಕ್ರಮಣಕ್ಕೊಳಗಾದ ವ್ಯಕ್ತಿಯ ಗುರುತನ್ನೂ ಗೂಗಲ್ನೊಲ್ಲಿ ಶೋಧಿಸಲಾಗುತ್ತದೆ, ಅತ್ಯಾಚಾರಕ್ಕೊಳಗಾದ ಮಹಿಳೆ, ಅತ್ಯಾಚಾರ ಎಸಗಿದ ವಿಕೃತ ಕಾಮಿ ಇವರ ಜಾತಕಗಳನ್ನೂ ಗೂಗಲ್ನ್ಲ್ಲಿ ಹುಡುಕಿ ನಂತರ ‘ ಇವ ನಮ್ಮವ ’ ಅಥವಾ ‘ ಇವ ಅನ್ಯ ’ ಎಂದು ನಿಷ್ಕರ್ಷೆ ಮಾಡಿ ನಮ್ಮ ಜಯಕಾರ, ಸಂತಾಪ, ಅನುಕಂಪ ವ್ಯಕ್ತಪಡಿಸುತ್ತೇವೆ. ಒಂದು ದೇಶ ಹೀಗೂ ಬದಲಾಗಬೇಕೇ ?

ಇಂದು ದೇಶದ ಸಮಸ್ತ ರೈತರು ತಮ್ಮ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದ್ದಾರೆ. ಮುಂದೆ ಕಾರ್ಮಿಕರಿಗೂ ಇದೇ ಪರಿಸ್ಥಿತಿ ಎದುರಾಗುತ್ತದೆ. ರೈತರ ಬೇಡಿಕೆಗಳಿಗೆ ಸ್ಪಂದಿಸುವವರನ್ನು ನೀವೇನು ರೈತರೇ ? ಎಂದು ಪ್ರಶ್ನಿಸುತ್ತಲೇ, ರೈತರಲ್ಲದವರಿಗೆ ಕೃಷಿ ಮಸೂದೆಯ ಉಸಾಬರಿ ಏಕೆ ಎಂದು ಪ್ರಶ್ನಿಸುವ ಮನಸುಗಳೂ ನಮ್ಮ ನಡುವೆ ಸೃಷ್ಟಿಯಾಗಿವೆ. ಖಂಡಿತವಾಗಿಯೂ ಭಾರತ ಹೀಗಿರಲಿಲ್ಲ. ಅಸ್ಪೃಶ್ಯತೆ, ಜಾತಿ ತಾರತಮ್ಯಗಳು ಉಚ್ಛಾಯ ಸ್ಥಿತಿಯಲ್ಲಿದ್ದ ಸಂದರ್ಭದಲ್ಲೂ ತುಳಿತಕ್ಕೊಳಗಾದ ಅಸ್ಪೃಶ್ಯರ ಬಗ್ಗೆ ಸಂವೇದನಾಶೀಲ ಸ್ಪಂದನೆ ನೀಡಿದ ಮೇಲ್ಜಾತಿಯ ಮನಸುಗಳು ಇತಿಹಾಸದಲ್ಲಿ ಆಗಿಹೋಗಿವೆ. ಇಂದೇಕೆ ಹೀಗೆ ? ನಾವು ಅತ್ಯಂತ ಆಧುನಿಕ ವೈಜ್ಞಾನಿಕ ಅನ್ವೇಷಣೆಗಳ ಹಾದಿಯಲ್ಲಿ ಸಾಗುತ್ತಿದ್ದು, ವಿಶ್ವದ ಅಗ್ರಶ್ರೇಣಿಯ ರಾಷ್ಟ್ರವಾಗುವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಆದರೆ ಈ ದೇಶದ ಒಂದು ಬೃಹತ್ ವರ್ಗ ಬೌದ್ಧಿಕವಾಗಿ ಪ್ರಾಚೀನತೆಗೆ, ಶಿಲಾಯುಗಕ್ಕೆ ಮರಳುತ್ತಿದೆ.

ಆಳುವ ವರ್ಗಗಳಲ್ಲಿ, ರಾಜಕೀಯ ನಾಯಕರಲ್ಲಿ, ಚುನಾಯಿತ ಸರ್ಕಾರಗಳಲ್ಲಿ ಕ್ರೌರ್ಯ ಇರುತ್ತದೆ. ತಮ್ಮ ಅಸ್ತಿತ್ವಕ್ಕಾಗಿ ಎದುರಾಳಿಗಳನ್ನು ದಮನಿಸುತ್ತಲೇ ಅಧಿಕಾರದಲ್ಲಿ ಮುಂದುವರೆಯುವುದು ಪ್ರಜಾತಂತ್ರ ವ್ಯವಸ್ಥೆಯಲ್ಲೂ ಕಂಡುಬರುವ ಒಂದು ವಿದ್ಯಮಾನ. ಇದು ಅಪೇಕ್ಷಣೀಯವಲ್ಲ ಆದರೆ ವಾಸ್ತವ. ನಮ್ಮ ನಡುವೆಯೇ ಇಂತಹ ವಿದ್ಯಮಾನಗಳನ್ನು ಕಾಣುತ್ತಿದ್ದೇವೆ. ದೆಹಲಿಯಲ್ಲಿ 70 ದಿನಗಳಿಂದ ಮುಷ್ಕರನಿರತ ರೈತರನ್ನು ದಮನಿಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ನಿರ್ದಯಿ ಕ್ರಮಗಳು ಇವತ್ತಿನ ಸಾಕ್ಷಿ. ಪ್ರಜೆಗಳ ಸಂವಹನ, ಸಂಚಾರ, ಚಲನೆ ಮತ್ತು ಸಂಪರ್ಕ ಮಾರ್ಗಗಳನ್ನು ನಿರ್ಬಂಧಿಸುವ ಒಂದು ಕ್ರೂರ ಆಡಳಿತ ವ್ಯವಸ್ಥೆಯನ್ನೂ ಕಾಣುತ್ತಿದ್ದೇವೆ. ಇದು ಅಧಿಕಾರ ರಾಜಕಾರಣದ ದಬ್ಬಾಳಿಕೆ, ಅಹಮಿಕೆ ಮತ್ತು ದಮನಕಾರಿ ನೀತಿ.

ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಿರುವುದು ಸರ್ಕಾರದ ಈ ಕ್ರಮಗಳಲ್ಲ. ಈ ಕ್ರೌರ್ಯ ಮತ್ತು ನಿರ್ದಯಿ ನಡವಳಿಕೆಯನ್ನು ಸ್ವೀಕಾರಾರ್ಹವೆಂದೇ ಪರಿಗಣಿಸಿ, ಸ್ವಾಗತಿಸಿ, ಮುಕ್ತ ಕಂಠದಿಂದ ಶ್ಲಾಘಿಸುವ ನಾಗರಿಕ ಸಮಾಜದ ಮನಸ್ಥಿತಿ ನಮ್ಮನ್ನು ಕಾಡಬೇಕಿದೆ. ಸಾಂಸ್ಕೃತಿಕ ರಾಷ್ಟ್ರೀಯತೆಯ ಬೆಳವಣಿಗೆಯ ಹಾದಿಯಲ್ಲಿ ಸಾವನ್ನು ಸಂಭ್ರಮಿಸಲಾಗಿದೆ, ನೋವನ್ನು ಸಂಭ್ರಮಿಸಲಾಗಿದೆ. ಸಾವಿರಾರು ಅಸಹಜ ಸಾವುಗಳು, ಹಿಂಸಾಕಾಂಡಗಳು, ಹಿಂಸಾಕೃತ್ಯಗಳು, ಅತ್ಯಾಚಾರ ದೌರ್ಜನ್ಯಗಳು, ಧ್ವಂಸ ಕಾರ್ಯಾಚರಣೆಗಳು, ಸಜೀವ ದಹನದ ಪ್ರಕರಣಗಳು ನಮ್ಮ ನಡುವೆ ಆಗಿ ಹೋಗಿವೆ. ಇವೆಲ್ಲವನ್ನೂ ಕಂಡು ಸಂಭ್ರಮಿಸಿದ, ಮೌನವಾಗಿ ಸ್ವೀಕರಿಸಿದ, ಮನದೊಳಗೇ ಶ್ಲಾಘಿಸಿದ ಒಂದು ಕ್ರೂರ ಸಾಮಾಜಿಕ ವ್ಯವಸ್ಥೆಯ ನಡುವೆ ನಾವು ಸಂವೇದನೆಯ ಶೋಧದಲ್ಲಿ ತೊಡಗಿದ್ದೇವೆ. ಈ ಕ್ರೌರ್ಯವನ್ನು, ಕ್ರೂರ ಮನಸ್ಥಿತಿಯನ್ನು ಪೋಷಿಸಲು ಮತ್ತು ಸಂರಕ್ಷಿಸಲೆಂದೇ ಈ ದೇಶದ ವಿದ್ಯುನ್ಮಾನ ಮಾಧ್ಯಮ ಸುದ್ದಿಮನೆಗಳು ತಮ್ಮ ಬೌದ್ಧಿಕ ಪಡೆಗಳನ್ನು ಸಿದ್ಧಪಡಿಸಿವೆ.

ಭಾರತ ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ದನಿ ಎತ್ತಿದೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ವಿಯಟ್ನಾಂ ಯುದ್ಧ, ಮ್ಯಾನ್ಮಾರ್ನ್ಲ್ಲಿ ನಡೆದ ದೌರ್ಜನ್ಯಗಳು, ಲ್ಯಾಟಿನ್ ಅಮೆರಿಕ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿನ ಹಿಂಸಾಚಾರ, ಪ್ಯಾಲೆಸ್ಟೈನ್ ಸಮಸ್ಯೆ ಹೀಗೆ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆಯುವ ದೌರ್ಜನ್ಯಗಳಿಗೆ ಭಾರತ ಸ್ಪಂದಿಸಿದೆ. ಇಂದು ಭಾರತದಲ್ಲೇ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯಗಳ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ದನಿ ಕೇಳಿಬರುತ್ತಿದ್ದರೆ ಅದು ಸಹಜ ಪ್ರಕ್ರಿಯೆಯಲ್ಲವೇ ? ಭಾರತ ಎಂದೂ ಪ್ರಶ್ನಾತೀತ ರಾಷ್ಟ್ರವಾಗಿರಲಿಲ್ಲ ಇಂದಿಗೂ ಪ್ರಶ್ನಾತೀತವಲ್ಲ. “ ನಮ್ಮ ದೇಶದಲ್ಲಿ ಯಾವುದೇ ದೌರ್ಜನ್ಯ, ಹಿಂಸಾಕಾಂಡ, ಅತ್ಯಾಚಾರ, ಅನ್ಯಾಯಗಳು ನಡೆದಿಲ್ಲ ” ಎಂದು ಎದೆತಟ್ಟಿ ಹೇಳಿಕೊಳ್ಳುವ ನೈತಿಕತೆಯನ್ನು ನಾವು ಎಂದೋ ಕಳೆದುಕೊಂಡುಬಿಟ್ಟಿದ್ದೇವೆ. ಈಗ ರೈತ ಮುಷ್ಕರದ ಸಂದರ್ಭದಲ್ಲಿ ನಮ್ಮ ಕ್ರೌರ್ಯವನ್ನು ಮೌನದ ಮೂಲಕ, ನಿಷ್ಕ್ರಿಯತೆಯ ಮೂಲಕ, ನಿರ್ಲಿಪ್ತತೆಯ ಮೂಲಕ ಮತ್ತು ಸುಳ್ಳುಗಳ ಮೂಲಕ ಪ್ರದರ್ಶಿಸುತ್ತಿದ್ದೇವೆ.

ಜಗತ್ತಿನ ಪ್ರಖ್ಯಾತ ಪಾಪ್ ಗಾಯಕಿ ರಿಯಾನ ಟ್ವೀಟ್ ಮಾಡಿದ ಒಂದು ಸಾಲು “ ಈ ವಿಷಯದ ಕುರಿತು ನಾವೇಕೆ ಮಾತನಾಡಬಾರದು ”. ಇದು ಈ ದೇಶದ ಆತ್ಮಸಾಕ್ಷಿಯನ್ನು ಕೆದಕಬೇಕಿತ್ತು, ಮನದಾಳದಲ್ಲಿ ಹುದುಗಿಹೋಗಿದ್ದ ಸಂವೇದನೆಯನ್ನು ಹೊರಹಾಕಬೇಕಿತ್ತು, ಕಳೆದು ಹೋಗಿದ್ದ ಮಾನವೀಯ ಸ್ಪಂದನೆಯನ್ನು ಹೊರತರಬೇಕಿತ್ತು. ಆದರೆ ನವ ಭಾರತದ ಒಂದು ಸುಸಂಸ್ಕೃತ (?) ವರ್ಗ ಆ ಗಾಯಕಿಯ ಜನ್ಮ ಜಾತಕವನ್ನು ಜಾಲಾಡುವುದರಲ್ಲಿ ತೊಡಗಿದೆ. ಆಕೆಯ ಜಾತಿ ಧರ್ಮಗಳನ್ನು ಶೋಧಿಸಿ ಅವಹೇಳನ ಮಾಡಲು ಮುಂದಾಗಿದೆ. ಭಾರತದ ಕ್ರಿಕೆಟ್ ಕಲಿಗಳು, ಸಿನಿಮಾ ತಾರೆಯರು 70 ದಿನಗಳ ಕಾಲ ರೈತರ ಬಗ್ಗೆ, ಮುಷ್ಕರದ ಅವಧಿಯಲ್ಲೇ ಮಡಿದ ರೈತರ ಬಗ್ಗೆ ಸೊಲ್ಲೆತ್ತದವರು, ಮೂರು ಲಕ್ಷ ರೈತರ ಆತ್ಮಹತ್ಯೆಯ ಬಗ್ಗೆ ಮಾತನಾಡದವರು, ರಿಯಾನಾ ಹೇಳಿಕೆಯಿಂದ ನಿದ್ರೆಯಿಂದೆದ್ದಿದ್ದಾರೆ, ಆದರೆ ಇದು ನಮ್ಮ ಆಂತರಿಕ ವಿಚಾರ ಎಂದು ಹೇಳುವ ಮೂಲಕ ಆಕೆಯನ್ನು ಖಂಡಿಸಲು ಮುಂದಾಗಿದ್ದಾರೆ.

ಈ ಅಸೂಕ್ಷ್ಮತೆ ಮತ್ತು ಬೌದ್ಧಿಕ ದಾರಿದ್ರ್ಯ ಏಕೆ ವ್ಯಾಪಕವಾಗಿ ಪಸರಿಸುತ್ತಿದೆ ? ರಿಯಾನಾ ಓರ್ವ ಸಾರ್ವಜನಿಕ ವ್ಯಕ್ತಿಯಾಗಿ ತಮ್ಮ ನೈತಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದ್ದಾರೆ. ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬ್ರ್ಗ್ ಸಹ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಅಮೆರಿಕದ ಫುಟ್ಬಾಿಲ್ ಆಟಗಾರ ಜುಲು ಸ್ಮಿತ್ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವುದೇ ಅಲ್ಲದೆ ವೈದ್ಯಕೀಯ ನೆರವಿನ ರೂಪದಲ್ಲಿ 10 ಸಾವಿರ ಡಾಲರ್ ನೀಡುವುದಾಗಿ ಘೋಷಿಸಿದ್ದಾರೆ. ಈ ಜಾಗತಿಕ ಬೆಂಬಲ ಸಂವಹನ ಕ್ರಾಂತಿ ಮತ್ತು ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಹಜ ಎನಿಸುವುದಿಲ್ಲವೇ ? ಅಮೆರಿಕದ ಕ್ಯಾಪಿಟಲ್ ಹಿಲ್ ಮೇಲೆ ದಾಳಿ ನಡೆದಾಗ ಭಾರತದ ಪ್ರಧಾನಿ ನರೇಂದ್ರ ಮೋದಿ ಸಹ ಕಳವಳ ವ್ಯಕ್ತಪಡಿಸಿದ್ದರು. ಅದು ಅಮೆರಿಕದ ಅಂತರಿಕ ವಿಚಾರ ಅಲ್ಲವೇ ?

ಈ ಸರಳ ಸೂಕ್ಷ್ಮವನ್ನೇ ಗ್ರಹಿಸಲಾರದಷ್ಟು ಬೌದ್ಧಿಕ ದಾರಿದ್ರ್ಯ ನಮ್ಮ ದೇಶದ ತೆಂಡೂಲ್ಕರ್, ಕುಂಬ್ಳೆ, ಅಜಯ್ ದೇವಗನ್ ಮುಂತಾದವರಲ್ಲಿರುವುದು ದುರಂತ. ತಮ್ಮ ಸ್ಥಾನಮಾನ, ಹುದ್ದೆ, ಅಂತಸ್ತು ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳಲು ಈ ತಾರೆಯರಿಗೆ ಆಡಳಿತ ವ್ಯವಸ್ಥೆಯ ಪರವಾಗಿ ತುತ್ತೂರಿ ಊದುವುದು ಅನಿವಾರ್ಯವೂ ಆಗಿರಬಹುದು. ವಿದೇಶದ ಗಣ್ಯರಿಗೆ, ಸೆಲೆಬ್ರಿಟಿಗಳಿಗೆ ಭಾರತದಲ್ಲಿ ನಡೆಯುವ ಯಾವುದೇ ಅಂತರಿಕ ದೌರ್ಜನ್ಯ, ಅನ್ಯಾಯಗಳ ಬಗ್ಗೆ ಸೊಲ್ಲೆತ್ತುವ ಹಕ್ಕು ಇಲ್ಲ ಎಂದು ಹೇಳುವುದೇ ನಮ್ಮ ಬೌದ್ಧಿಕ ಅವನತಿಯ ಸಂಕೇತವಾಗಿ ಕಾಣುತ್ತದೆ. ಈ ಕ್ರಿಕೆಟ್ ಕಲಿಗಳು, ಸಿನಿಮಾ ತಾರೆಯರು ಹಥ್ರಾಸ್, ಕಂಬಾಲಪಲ್ಲಿ, ಖೈರ್ಲಾಂಜಿ, ಊನ, ಕಥುವಾ ಮುಂತಾದ ಘಟನೆಗಳಿಗೆ ಯಾವ ರೀತಿ ಸ್ಪಂದಿಸಿದ್ದಾರೆ ? ರಿಯಾನಾ, ಜುಲು ಸ್ಮಿತ್ ಅಥವಾ ಗ್ರೇಟಾ ಥನ್ಬಘರ್ಗ್ ಅವರ ಮಾನವೀಯ ಸ್ಪಂದನೆ ಮತ್ತು ಸಂವೇದನೆ ನಮ್ಮ ತಾರಾಪಟುಗಳಿಗೆ ಮಾರ್ಗದರ್ಶನವಾಗಬೇಕಿತ್ತು. ದುರಂತ ಎಂದರೆ ಇದು ಕಲ್ಪಿತ ದೇಶಪ್ರೇಮದ ಚೌಕಟ್ಟಿಗೆ ಸಿಲುಕಿ ಎಲ್ಲರೂ ಬೆತ್ತಲಾಗಿಬಿಟ್ಟಿದ್ದಾರೆ.

ಭಾರತದ ಸುಶಿಕ್ಷಿತ ಮಧ್ಯಮ ವರ್ಗ ಹೀಗಿರಲಿಲ್ಲ. ದೌರ್ಜನ್ಯ, ಅನ್ಯಾಯದ ವಿರುದ್ಧ ಸಿಡಿದೇಳದಿದ್ದರೂ ಇಂತಹ ಘಟನೆಗಳ ಪರ ನಿಲ್ಲುತ್ತಿರಲಿಲ್ಲ. ಇಂದು ಇಂತಹ ಒಂದು ಬೃಹತ್ ಪಡೆಯೇ ಸಿದ್ಧವಾಗಿದೆ. ಸಾಂಸ್ಕೃತಿಕ ರಾಷ್ಟ್ರೀಯತೆಗೆ ಬೌದ್ಧಿಕ ದಾರಿದ್ರ್ಯವೇ ಬಂಡವಾಳವಾದರೆ ಭಾರತಕ್ಕೆ ಉತ್ತಮ ಭವಿಷ್ಯ ಇಲ್ಲ ಎಂದೇ ಹೇಳಬೇಕಾಗುತ್ತದೆ. ಒಂದು ಪಕ್ಷ ಅಥವಾ ಸಂಘಟನೆ ಸಿದ್ಧಪಡಿಸುವ ವ್ಯಾಖ್ಯಾನವನ್ನೇ ಪರಮ ಸತ್ಯ ಎಂದು ನಂಬಿ ತಮ್ಮ ವಾಟ್ಸಪ್ ಮೂಲಕ, ಸಾಮಾಜಿಕ ತಾಣಗಳ ಮೂಲಕ ಹಂಚಿಕೊಳ್ಳುವ ಈ ಬೃಹತ್ ಪಡೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾವಂತರೇ ಇರುವುದು ಮತ್ತೊಂದು ದುರಂತ. ವಿಮರ್ಶೆ, ಪರಾಮರ್ಶೆ ಮತ್ತು ಚಿಂತನೆ ಇದಾವುದರ ಪರಿವೆಯೂ ಇಲ್ಲದೆ ಸಿದ್ಧಸೂತ್ರವನ್ನು ಹಿಂಬಾಲಿಸುವ ಈ ಸುಶಿಕ್ಷಿತ ವರ್ಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಬೆತ್ತಲಾಗಿಸುತ್ತಿರುವುದು ಸ್ಪಷ್ಟ.

ಮತಾಂಧತೆ, ದ್ವೇಷ ರಾಜಕಾರಣ, ಶ್ರೇಷ್ಠತೆಯ ಅಹಮಿಕೆ ಮತ್ತು ವ್ಯಕ್ತಿ ಆರಾಧನೆ ಈ ದೇಶದ ಒಂದು ವರ್ಗವನ್ನು ಸಮೂಹ ಸನ್ನಿಗೊಳಪಡಿಸಿದೆ. ತಮ್ಮ ಸ್ವಂತಿಕೆ ಮತ್ತು ಆಲೋಚನಾ ಶಕ್ತಿಯನ್ನೇ ಕಳೆದುಕೊಂಡಿರುವ ಬೃಹತ್ ಸಮುದಾಯ ನಮ್ಮ ನಡುವೆ ಸೃಷ್ಟಿಯಾಗಿದೆ. ವಿದ್ಯುನ್ಮಾನ ಮಾಧ್ಯಮಗಳಿಗೆ ಈ ಮನೋಭಾವ ಮಾರುಕಟ್ಟೆ ಲಾಭದ ದೃಷ್ಟಿಯಿಂದ ಉಪಯುಕ್ತವಾಗುತ್ತದೆ. ಈ ಸಮೂಹ ಸನ್ನಿಗೆ ಬಲಿಯಾದವರಲ್ಲಿ ಯುವಜನತೆಯೇ ಹೆಚ್ಚಿನ ಪ್ರಮಾಣದಲ್ಲಿರುವುದು ಅತಂಕಕಾರಿಯಾಗಿದೆ. ಸಾವಿರಾರು ಸಾವುಗಳನ್ನೂ ನ್ಯಾಯಯುತವೆಂದು ಸ್ವೀಕರಿಸುವ, ಸಂಭ್ರಮಿಸುವ ವಿಕೃತ ಮನಸ್ಥಿತಿ ಈ ವರ್ಗವನ್ನು ಆವರಿಸುವ ಸಾಧ್ಯತೆಗಳಿವೆ. ಇದು ಯಾವುದೇ ನಾಗರಿಕ ಸಮಾಜಕ್ಕೆ ಶೋಭೆ ತರುವುದಲ್ಲ.

ಒಂದು ದೇಶದ ಸ್ವಾಸ್ಥ್ಯ ಇರುವುದು ಅದರ ಬೌದ್ಧಿಕ ಅಂತಃಸತ್ವದಲ್ಲಿಯೇ ಹೊರತು, ಆಧುನಿಕ ಶಸ್ತ್ರಾಸ್ತ್ರ ಅಥವಾ ಮಾರುಕಟ್ಟೆ ಸೂಚ್ಯಂಕಗಳಲ್ಲಿ ಅಲ್ಲ. ವಿಶ್ವದ ಅನೇಕ ಸಣ್ಣ ಪುಟ್ಟ ರಾಷ್ಟ್ರಗಳು ಬೃಹತ್ ರಾಷ್ಟ್ರಗಳ ವಿರುದ್ಧ ದಿಗ್ವಿಜಯ ಸಾಧಿಸಿ ತಮ್ಮ ಅಸ್ಮಿತೆ ಮತ್ತು ಅಸ್ತಿತ್ವವನ್ನು ಉಳಿಸಿಕೊಂಡಿರುವುದೇ ಈ ಬೌದ್ಧಿಕ ಅಂತಃಸತ್ವದ ನೆರವಿನಿಂದ. ವಿಯಟ್ನಾಂ, ಕ್ಯೂಬಾ ಮುಂತಾದ ದೇಶಗಳ ನಿದರ್ಶನ ನಮ್ಮ ಕಣ್ಣೆದುರಿನಲ್ಲೇ ಇದೆ. ನಮ್ಮೊಳಗಿನ ಸಮಾಜೋ ಸಾಂಸ್ಕೃತಿಕ ಅನಿಷ್ಟಗಳನ್ನು, ಹೀನ ಸಂಸ್ಕೃತಿಗಳನ್ನು, ಮಾನವ ಸಂವೇದನೆಯೇ ಇಲ್ಲದ ಕ್ರೂರ ಆಡಳಿತ ವ್ಯವಸ್ಥೆಯನ್ನು ಸಮರ್ಥಿಸಿಕೊಳ್ಳುವ ಒಂದು ಸಮಾಜಕ್ಕೆ ಬೌದ್ಧಿಕ ನಿಷ್ಕ್ರಿಯತೆ ಮತ್ತು ಸಮೂಹ ಸನ್ನಿ ಕ್ಯಾನ್ಸರ್ ರೋಗದಂತೆಯೇ ಕಾಡುತ್ತದೆ. ಆಂತರಿಕವಾಗಿ ಸಮಾಜದ ಅಂತಃಸತ್ವವನ್ನು ಹೀರಿ ನಿಸ್ತೇಜಗೊಳಿಸಿ, ನಿಷ್ಕ್ರಿಯಗೊಳಿಸಿಬಿಡುತ್ತದೆ.

ಬಹುಶಃ ಭಾರತ ಈ ಸ್ಥಿತಿಯನ್ನು ತಲುಪಿಬಿಟ್ಟಿದೆ. ನಡೆದಾಡುವ ರಸ್ತೆಗೆ ಮೊಳೆ ಹೊಡೆಯುವುದನ್ನು, ರಸ್ತೆಗಳಲ್ಲಿ ಕಂದಕ ತೋಡುವುದನ್ನು, ಅಂತರ್ಜಾಲ ಸಂಪರ್ಕ ನಿಷೇಧಿಸುವ ಮೂಲಕ ಸಂವಹನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳುವುದನ್ನು ಸಮರ್ಥಿಸುವ ಮನಸುಗಳು ಹೆಚ್ಚಾಗುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಇದು ಪ್ರಾಚೀನ ಭವ್ಯ ಭಾರತದ ಅವನತಿಯೋ ಅಥವಾ ಆಧುನಿಕ ಆತ್ಮ ನಿರ್ಭರ ಭಾರತದ ಹಿರಿಮೆಯೋ ಎನ್ನುವ ಜಿಜ್ಞಾಸೆ ನಾಗರಿಕ ಸಮಾಜವನ್ನು ಕಾಡಲೇಬೇಕಿದೆ. ಓರ್ವ ಪಾಪ್ ಗಾಯಕಿಯ ಆರು ಪದಗಳು, ಒಬ್ಬ ಹಾಸ್ಯ ಕಲಾವಿದನ ಒಂದು ಜೋಕ್, ಒಬ್ಬ ಕಲಾವಿದನ ಒಂದು ಕುಂಚ ಕಲೆ, ಒಬ್ಬ ಗಾಯಕನ ಒಂದು ಹಾಡು ಈ ದೇಶದ ಅಂತಃಸತ್ವವನ್ನೇ ಅಲುಗಾಡಿಸುವಷ್ಟು ಮಟ್ಟಿಗೆ ನಾವು ನಿಸ್ತೇಜವಾಗಿರುವುದು ಸ್ಪಷ್ಟ.

ಕೃಪೆ : ದ ಪಾಲಿಟಿಕ್

ಇತ್ತೀಚಿನ ಸುದ್ದಿ