ಸಾಲ ಮಾಡುವ ಮುನ್ನ?
- ಚಂದ್ರಕಾಂತ ಹಿರೇಮಠ, ಬೆಂಗಳೂರು
ಹಾಸಿಗೆ ಇದ್ದಷ್ಟು ಕಾಲು ಚಾಚ ಬೇಕು ಎಂಬ ಗಾದೆ ಎಲ್ಲ ಕಾಲಕ್ಕೂ ಸಲ್ಲುತ್ತದೆ. ಉತ್ತಮ ಜೀವನಕ್ಕಾಗಿ ಕೆಲವೊಮ್ಮೆ ನಾವು ನಮ್ಮ ಆಸೆಗಳನ್ನು ಮುಂದೂಡಬೇಕು. ನಾವು ನಮ್ಮ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಿನ ಐಶಾರಾಮಿ ಜೀವನಕ್ಕೆ ಮೊರೆ ಹೋಗಬಾರದು. ಒಂದೊಮ್ಮೆ ಅಂತಹ ಐಷಾರಾಮಿ ಜೀವನಕ್ಕೆ ಶರಣಾದರೆ ಸಾಲದ ಬಲೆಗೆ ಬೀಳಬೇಕಾಗುತ್ತದೆ. ಕೊನೆಗೆ ಸಾಲ ನಮ್ಮನ್ನು ಶೂಲಕ್ಕೆ ಏರಿಸುತ್ತದೆ. ಹಾಗಾದರೆ ಸಾಲ ಎಂದರೇನು? ಬರುವ ಆದಾಯಕ್ಕಿಂತ ಮಾಡುವ ಖರ್ಚು ಹೆಚ್ಚಿದ್ದರೆ, ನಮ್ಮಲ್ಲಿ ಉಳಿತಾಯವೂ ಇಲ್ಲದಿದ್ದಲ್ಲಿ ಹಣದ ಕೊರತೆ ಉಂಟಾಗುತ್ತದೆ. ಅದನ್ನು ತುಂಬಲು ನಾವು ಬೇರೆಯವರಿಂದ ಹಣವನ್ನು ತರಬೇಕಾಗುತ್ತದೆ. ಅದುವೇ ಸಾಲ. ಹೀಗಾಗಿ ಸಾಲವನ್ನು ತೆಗೆದುಕೊಳ್ಳುವ ಮೊದಲು ಹಿಂದಿನ ಸಾಲಗಳು ಮತ್ತು ಬದ್ಧತೆಗಳ ಬಗ್ಗೆ ಸಂಪೂರ್ಣ ಪರಿಶೀಲನೆಯನ್ನು ಮಾಡಬೇಕು.
ಅನೇಕರು ಹಣಕಾಸು ನಿರ್ವಹಣೆ ಸರಿಯಾಗಿ ಮಾಡಲಾಗದೆ ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿಕೊಳ್ಳುತ್ತಾರೆ. ಇದರಿಂದ ಹೊರಬರಲು ಅವರಿಗೆ ಸಾಧ್ಯವಾಗುವುದಿಲ್ಲ. ಕಾರಣ ಇಷ್ಟೇ ಅವರು ಪ್ರತಿಯೊಂದಕ್ಕೂ ಸಾಲವನ್ನು ತೆಗೆದುಕೊಳ್ಳುವ ಪದ್ಧತಿಯನ್ನು ಬೆಳೆಸಿಕೊಂಡಿರುವುದೇ ಆಗಿದೆ. ಗಳಿಕೆಗೆ ಅನುಗುಣವಾಗಿ ಖರ್ಚು ಮಾಡುವ ಮೂಲತತ್ವವನ್ನು ನಿರ್ಲಕ್ಷಿಸಿರುವುದೇ ಈ ಎಲ್ಲಾ ಸಮಸ್ಯೆಗಳಿಗೆ ಕಾರಣ.ಪದವಿ ಸ್ನಾತಕೋತ್ತರ ಪದವಿ ಪಡೆದು ಉತ್ತಮ ಉದ್ಯೋಗದಲ್ಲಿದ್ದು ಒಳ್ಳೆಯ ಸಂಬಳವನ್ನು ಪಡೆಯುತ್ತಿದ್ದರೂ ಕೂಡಾ ಹಲವಾರು ಯುವಕ ಯುವತಿಯರಿಗೆ ಹಣಕಾಸಿನ ಸಾಕ್ಷರತೆ ಇರುವುದಿಲ್ಲ. ಅಂದರೆ ಹಣಕಾಸನ್ನು ಹೇಗೆ ನಿರ್ವಹಣೆ ಮಾಡುವುದು ಎಂದು ತಿಳಿದಿರುವುದಿಲ್ಲ. ಆದರೆ ನಮ್ಮ ಜೀವನವನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಹಾಗೂ ಹಣಕಾಸಿನ ವ್ಯವಹಾರವನ್ನು ವ್ಯವಸ್ಥಿತವಾಗಿ ನಡೆಸಲು ನಮಗೆ ಹಣಕಾಸಿನ ಬಗ್ಗೆ ತಿಳಿಯುವಳಿಕೆ ಇರುವುದು ಬಹಳ ಮುಖ್ಯವಾಗುತ್ತದೆ.
ಭವಿಷ್ಯದ ಆದಾಯವನ್ನು ಇಂದೇ ಖರ್ಚು ಮಾಡುವುದು ಈಗಿನ ಟ್ರೆಂಡ್ ಆಗಿದೆ. ಒಮ್ಮೆ ಹಣಕಾಸಿನ ಯೋಜನೆ ತಪ್ಪಿದ್ದರೆ ಮತ್ತೆ ದಾರಿಗೆ ಬರುವುದು ತುಂಬಾ ಕಷ್ಟ. ಹೀಗಾಗಿ ತೊಂದರೆ ಆಗದಂತೆ ಮುನ್ನೆಚ್ಚರಿಕೆವಹಿಸಿ ಬರುವ ಸಂಬಳವನ್ನು ಖರ್ಚು ಮಾಡಬೇಕಾಗಿರುವುದು ಉತ್ತಮವಾದ ಮಾರ್ಗವಾಗಿದೆ. ಯೋಚಿಸಿ ಹಣಕಾಸು ನಿರ್ವಹಣೆ ಮಾಡಿದರೆ ಉತ್ತಮ ಜೀವನವನ್ನು ಮಾಡಬಹುದು.
ಯಾರೋ ಕೊಡುತ್ತಾರೆ ಎಂಬ ಕಾರಣಕ್ಕೆ ಸಾಲ ಪಡೆಯಬಾರದು. ಇದು ನಮ್ಮ ಆದಾಯ ಮತ್ತು ಸಾಲ ಮರುಪಾವತಿ ಮಿತಿಗಳನ್ನು ಆಧರಿಸಿರಬೇಕು. ಆರ್ಥಿಕ ಸಾಕ್ಷರತೆ ಹೊಂದುವುದು ಕಷ್ಟವೇನಲ್ಲ- ಈ ಜ್ಞಾನದ ಕೊರತೆಯು ಜನತೆಯನ್ನು “ಆರ್ಥಿಕವಾಗಿ ಅನಕ್ಷರಸ್ಥ” ರನ್ನಾಗಿ ಮಾಡುತ್ತದೆ.
ಒಂದು ವೇಳೆ ನಾವುಗಳು ಆರ್ಥಿಕವಾಗಿ ಅನಕ್ಷರಸ್ಥರಾಗಿದ್ದರೆ, ಆರ್ಥಿಕ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸಹಜವಾಗುತ್ತದೆ. ಅಲ್ಲದೆ ಸಂಕಷ್ಟದ ಹೊರೆ ಅಧಿಕವಾಗಬಹುದು. ಈ ಆರ್ಥಿಕ ಅನಕ್ಷರತೆಯಿಂದಾಗಿ ತೆಗೆದುಕೊಂಡ ನಿರ್ಧಾರಗಳು ನಮ್ಮನ್ನು ಸಾಲದ ಬಲೆಗೆ ಬೀಳಿಸಬಹುದು. ನಮ್ಮನ್ನು ಆರ್ಥಿಕ ಸಂಕಷ್ಟಕ್ಕೂ ದೂಡಬಹುದು. ನಾವು ಆರ್ಥಿಕವಾಗಿ ಸಾಕ್ಷರರಾಗುವುದು ಕಷ್ಟವೇನಲ್ಲ.
ಹಾಗೆಯೇ ಇದು ನಮ್ಮ ಕೈ ಮೀರಿಲ್ಲ ಎಂದು ಕೂಡಾ ಹೇಳಬಹುದು. ಜನರು ಚಿಕ್ಕ ವಯಸ್ಸಿನಿಂದಲೂ ಆರ್ಥಿಕ ಸಾಕ್ಷರತೆಯನ್ನು ಕಲಿಯಬಹುದು. ದಿನನಿತ್ಯದ ಮನೆಯ ಖರ್ಚುಗಳ ವಿಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಿಂದ ಹಣದ ಮೌಲ್ಯದ ಅರಿವು ಪಡೆಯಬಹುದು. ಹಾಗೆಯೇ ವಾರಕ್ಕೆ ಒಮ್ಮೆ ಅಥವಾ ಮಾಸಿಕವಾಗಿ ನಮಗೆ ದೊರೆಯುವ ಪಾಕೆಟ್ ಮನಿ ಮೂಲಕವೂ ನಾವು ಈ ಹಣಕಾಸಿನ ಸಾಕ್ಷರತೆಯನ್ನು ಸಣ್ಣ ವಯಸ್ಸಿನಲ್ಲೇ ಹೊಂದಬಹುದು.ಭವಿಷ್ಯದ ಲೆಕ್ಕಾಚಾರವೂ ಈಗಲೇ ಇರಲಿ ನೀವು ಸರಿಯಾದ ಹಣಕಾಸು ಯೋಜನೆಯನ್ನು ರೂಪಿಸಿಕೊಂಡರೆ ನಮ್ಮ ಭವಿಷ್ಯವೂ ಕೂಡಾ ಸುಂದರವಾಗಿರುತ್ತದೆ.
ದುಡಿಯುವ ಸಂದರ್ಭದಲ್ಲೇ ನಮ್ಮ ಭವಿಷ್ಯದ ಜೀವನಕ್ಕೆ ಬೇಕಾದ ಉಳಿತಾಯವನ್ನು ಮಾಡಿಕೊಂಡರೆ ನಿವೃತ್ತಿ ಜೀವನವು ಸುಗಮವಾಗುತ್ತದೆ. ಸರಿಯಾದ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಿದರೆ, ನಿವೃತ್ತಿ ನಿಧಿ, ಮಕ್ಕಳ ಉನ್ನತ ಶಿಕ್ಷಣ, ಮದುವೆ, ಸ್ವಂತ ಮನೆ ಮತ್ತು ಇತರ ಪ್ರಮುಖ ಜೀವನದ ಘಟನೆಗಳನ್ನು ನಾವು ಸಂತಸದಿಂದ ಅನುಭವಿಸಲು ಸಾಧ್ಯವಾಗುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw