ಬೆಳ್ತಂಗಡಿ: ಭಾರೀ ಬಿರುಗಾಳಿ ಮಳೆಗೆ ಮನೆ, ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಭಾರೀ ಹಾನಿ

ಬೆಳ್ತಂಗಡಿ(Belthangady): ತಾಲೂಕಿನ ಹಲವೆಡೆಗಳಲ್ಲಿ ಏಪ್ರಿಲ್ 8ರಂದು ಸಂಜೆ ಭಾರೀ ಬಿರುಗಾಳಿ ಬೀಸಿದ್ದು, ಪರಿಣಾಮವಾಗಿ ವಿವಿಧೆಡೆ ಹಾನಿಯಾಗಿವೆ.
ಕಕ್ಕಿಂಜೆ, ಚಾರ್ಮಾಡಿ, ಮುಂಡಾಜೆ, ಕಲ್ಮಂಜ, ಚಿಬಿದ್ರೆ, ತೋಟತ್ತಾಡಿ, ಉಜಿರೆ ಮೊದಲಾದ ಪ್ರದೇಶಗಳಲ್ಲಿ ಮನೆ ಸಹಿತ ವಿದ್ಯುತ್ ಕಂಬಗಳ ಮೇಲೆ ಮರಗಳು ಉರುಳಿ ಬಿದ್ದು, ಹಾನಿಯಾಗಿದ್ದು, ಕೃಷಿಗೂ ಹಾನಿಯಾಗಿದೆ.
ಚಾರ್ಮಾಡಿಯ ಪೆಟ್ರೋಲ್ ಪಂಪ್ ಸಮೀಪ ಭಾರೀ ಗಾತ್ರದ ಮರವೊಂದು ಆಸ್ಯಮ್ಮ ಎಂಬವರ ಮನೆಗೆ ಉರುಳಿ ಬಿದ್ದಿದ್ದು, ಮನೆ ಸಂಪೂರ್ಣವಾಗಿ ಹಾನಿಯಾಗಿದೆ. ಘಟನೆಯ ವೇಳೆ ಮನೆಯಲ್ಲಿ ಯಾರೂ ಇಲ್ಲದೇ ಇದ್ದುರಿಂದಾಗಿ ಪ್ರಾಣಾಪಾಯ ತಪ್ಪಿದೆ.
ಗಾಳಿಯ ಆರ್ಭಟಕ್ಕೆ ಕಕ್ಕಿಂಜೆ ಪೇಟೆಯಲ್ಲಿ ಎರಡು ಅಂಗಡಿಗಳಿಗೆ ಹಾನಿಯಾಗಿದೆ. ಚಿಬಿದ್ರೆಯ ಬೊಟ್ಟುಮನೆ ರಮಾನಂದ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಕನ್ಯಾಡಿ ಗ್ರಾಮದ ಮಾರ್ನಡ್ಕದಲ್ಲಿ ಮನೆಯೊಂದರ ಶೀಟು ಹಾರಿ ಹೋಗಿದೆ. ಮುಂಡಾಜೆ—ಕುಡಂಚಿ ರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ರಸ್ತೆಗುರುಳಿ ಸಂಚಾರ ಸ್ಥಗಿತಗೊಂಡಿದೆ. ಅಲ್ಲದೇ ಸಾವಿರಾರು ಅಡಿಕೆ ಮರಗಳು, ರಬ್ಬರ್ ಗಿಡಗಳು ಧರೆಗುರುಳಿವೆ. ಕಲ್ಮಂಜ ಗ್ರಾಮದಲ್ಲಿ ಪುಟ್ಟನಾಯ್ಕ ಎಂಬವರ ಕೊಟ್ಟಿಗೆಯ ಶೀಟುಗಳನ್ನು ಗಾಳಿ ಹೊತ್ತೊಯ್ದಿದೆ.
ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಅಲ್ಲಲ್ಲಿ 41 ವಿದ್ಯುತ್ ಕಂಬಗಳು, ಉಜಿರೆ ಮೆಸ್ಕಾಂ ಉಪ ವಿಭಾಗಗಳಲ್ಲಿ 58 ಕಂಬಗಳು ಮುರಿದು ಬಿದ್ದಿವೆ ಎಂದು ತಿಳಿದು ಬಂದಿದೆ. ವಿದ್ಯುತ್ ಕಂಬಗಳು ಮುರಿದು ಬಿದ್ದ ಹಿನ್ನೆಲೆ ವಿವಿಧೆಡೆ ವಿದ್ಯುತ್ ಪೂರೈಕೆಗೆ ಅಡಚಣೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: