ಹರೀಶ್ ಪೂಂಜ ಅವರೇ, ಒಂದಲ್ಲ ಮೂರು ಗನ್ ಮ್ಯಾನ್ ಬೇಕಾದ್ರೆ ಕೊಡಿಸ್ತೇನೆ: ಮಾಜಿ ಶಾಸಕ ವಸಂತ್ ಬಂಗೇರ - Mahanayaka
2:39 AM Saturday 25 - January 2025

ಹರೀಶ್ ಪೂಂಜ ಅವರೇ, ಒಂದಲ್ಲ ಮೂರು ಗನ್ ಮ್ಯಾನ್ ಬೇಕಾದ್ರೆ ಕೊಡಿಸ್ತೇನೆ: ಮಾಜಿ ಶಾಸಕ ವಸಂತ್ ಬಂಗೇರ

belthangady protest
17/10/2022

ಬೆಳ್ತಂಗಡಿ: ಹರೀಶ್ ಪೂಂಜ ಅವರೇ ನಿಮಗೆ ಗನ್ ಮ್ಯಾನ್ ಬೇಕಾದರೆ ಅರ್ಜಿ ಕೊಡಿ ಒಂದಲ್ಲ ಮೂರು ಕೊಡಿಸುತ್ತೇನೆ ಈ ರೀತಿಯ ಕಟ್ಟು ಕತೆ ನಾಟಕ ಮಾಡಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸ ಬೇಡಿ  ಎಂದು ಬೆಳ್ತಂಗಡಿ  ಮಾಜಿ ಶಾಸಕ ವಸಂತ್ ಬಂಗೇರ ಹೇಳಿದರು.

ಬೆಳ್ತಂಗಡಿ ತಾಲೂಕು ಪಂಚಾಯತಿನ ಎದುರು ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ನಗರ ಹಾಗೂ  ಗ್ರಾಮೀಣ ಮತ್ತು ರಾಜೀವ ಗಾಂಧಿ ಪಂಚಾಯತಿ ರಾಜ್ ಸಂಘಟನೆಯ ಬ್ಲಾಕ್ ಘಟಕಗಳ ನೇತೃತ್ವದಲ್ಲಿ ಪಂಚಾಯತಿ ರಾಜ್ವಕಾಯ್ದೆಯಲ್ಲಿ ತಂದಿರುವ ತಿದ್ದು ಪಡಿಗಳನ್ನು ಕೈಬಿಡಬಿಡಲು ಒತ್ತಾಯಿಸಿ ನಡೆಸಿದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ವಸಂತ್ ಬಂಗೇರ, ಇತ್ತೀಚೆಗೆ ಹಾಲಿ ಶಾಸಕ ಹರೀಶ್ ಪೂಂಜಾ ಅವರು, ತಲ್ವಾರ್ ದಾಳಿ ನಡೆಸಲು ಯತ್ನಿಸಿದ್ದಾರೆ ಎಂದು ಆರೋಪಿಸಿರುವ ಘಟನೆಯ ಕುರಿತು ಪ್ರಸ್ತಾಪಿಸಿದರು.

ಅಧಿಕಾರ ವಿಕೇಂದ್ರೀಕರಣದ ಕಲ್ಪನೆ ನಾಶ:

ರಾಜ್ಯ ಸರಕಾರ ಗ್ರಾಮ ಪಂಚಾಯತು ಅಧ್ಯಕ್ಷರುಗಳ ಹಾಗೂ ಸದಸ್ಯರ ಅಧಿಕಾರವನ್ನು ಕಸಿದುಕೊಂಡು ಅಧಿಕಾರ ವಿಕೇಂದ್ರೀಕರಣದ ಕಲ್ಪನೆಯನ್ನೇ ನಾಶಗೊಳಿಸಲು ಹೊರಟಿದೆ. ಇಡೀ ಸರಕಾರವೇ ಭ್ರಷ್ಟ ಸರಕಾರವಾಗಿದೆ. ಇಲ್ಲಿಯೂ ಭ್ರಷ್ಟಾಚಾರ ನಡೆಸಲು ಜನಪ್ರತಿನಿಧಿಗಳ ಅಧಿಕಾರವನ್ನು ಕಸಿಯಲು ಮುಂದಾಗಿದೆ ಎಂದರು.

ಮಾಜಿ ಸಚಿವ ಕೆ.ಗಂಗಾಧರ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ರಾಜೀವ ಗಾಂಧಿಯವರ ಕಲ್ಪನೆಯಂತೆ ಅಧಿಕಾರ ವಿಕೇಂದ್ರೀಕರಣವನ್ನು ಜಾರಿಗೆ ತಂದು ಸಾಮಾನ್ಯ ಜನರ ಕೈಗೆ ಶೋಷಿತರ ಕೈಗೆ ಅಧಿಕಾರವನ್ನು ನೀಡಿತ್ತು. ಅದನ್ನು ಕಸಿದುಕೊಳ್ಖುವ ಕಾರ್ಯವನ್ನು ಇದೀಗ ಬಿಜೆಪಿ ಸರಕಾರ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಸರಕಾರ ಇದೀಗ ಜನಪ್ರತಿನಿಧಿಗಳ ಅಧಿಕಾರವನ್ನೂ ಕಸಿಯಲು ಮುಂದಾಗುತ್ತಿದ್ದು ಭ್ರಷ್ಟ ಸರಕಾರವನ್ನು ಕಿತ್ತೊಗೆಯಲು ಎಲ್ಲರೂ ಪಣ ತೊಡಬೇಕಾಗಿದೆ ಎಂದರು.

ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕೋಲ್ನಾಡು ಮಾತನಾಡಿ, ವಿಕೇಂದ್ರೀಕರಣ ಮತ್ತು ಸಾಮಾಜಿಕ ನ್ಯಾಯವನ್ನು ಒಪ್ಪದ ಬಿಜೆಪಿ ಪ್ರಜಾ ಪ್ರಭುತ್ವದ ಅಡಿಗಲ್ಲು ಅಲುಗಾಡಿಸುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ಎಲ್ಲರೂ ಸೇರಿ ವಿರೋಧಿಸಬೇಕಾಗಿದೆ. ಸಚಿವರುಗಳ ಮೇಲೆ ಸರಕಾರದ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಮಾತನಾಡದವರಿಗೆ ಗ್ರಾಮಪಂಚಾಯತಿನ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಯಾವ ಹಕ್ಕಿದೆ? ಎಂದು ಪ್ರಶ್ನಿಸಿದ ಅವರು ತಾಲೂಕು ಪಂಚಾಯತು ಜಿಲ್ಲಾ ಪಂಚಾಯತು ಚುನಾವಣೆ ನಡೆಸದ ಸರಕಾರ ಇದರ ಅನುದಾನವನ್ನು ಅಧಿಕಾರಿಗಳ ಮೂಲಕ ಮನಬಂದಂತೆ ಉಪಯೋಗಿಸುತ್ತಿದ್ದಾರೆ ಕೂಡಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಪಕ್ಷದ ಮುಖಂಡರುಗಳಾದ ಮನೋಹರ ಕುಮಾರ್, ಉಷಾ ಶರತ್, ಅಬ್ದುಲ್ ರಹಿಮಾನ್ ಪಡ್ಪು, ಜಯವಿಕ್ರಮ ಕಲ್ಲಾಪು, ಅಭಿನಂದನ್ ಹರೀಶ್, ಅಶ್ರಫ್ ನೆರಿಯ,ರಾಜಶೇಖರ ಶೆಟ್ಟಿ, ನಮಿತಾ ಪೂಜಾರಿ, ಸಲೀಂ ಗುರುವಾಯನಕೆರೆ, ಡಿ ಜಗದೀಶ್, ಗೋಪೀನಾಥ ನಾಯಕ್, ಗಫೂರ್ ಪುದುವೆಟ್ಟು, ಮಹಮ್ಮದ್ ರಫಿ ಹಾಗೂ ಗ್ರಾ.ಪಂ ಸದಸ್ಯರುಗಳು ಮುಖಂಡರುಗಳು ಇದ್ದರು. ಪ್ರತಿಭಟನೆಯ ಬಳಿಕ ತಾ.ಪಂ ಕಾರ್ಯನಿರ್ವಹಣಾಧಿಕಾರಿಯವರ ಮೂಲಕ ಸರಕಾರಕ್ಕೆ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಯಿತು.  ರೋಯಿ ಪುದುವೆಟ್ಟು ಸ್ವಾಗತಿಸಿದರು. ಪ್ರಶಾಂತ ವೇಗಸ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ