ಬೆಳ್ತಂಗಡಿ: ಶಾಸಕರು ಕಪಾಳ ಮೋಕ್ಷ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾರೆ: ಜಯಾನಂದ ಮಲೆಕುಡಿಯ ಆರೋಪ
ಬೆಳ್ತಂಗಡಿ: ಸವಣಾಲಿನ ಬೈರವಕಲ್ಲಿನ ಬೈರವ, ಮೂಜಿಲ್ನಾಯ, ಪುರುಷರಾಯ ದೈವಗಳ ದೈವಸ್ಥಾನದ ಅಭಿವೃದ್ದಿಗೆ ಸರಕಾರದ ಅನುದಾನಕ್ಕಾಗಿ ಮಾತುಕತೆ ನಡೆಸಲು ಶಾಸಕರ ಮನೆಗೆ ಹೋದ ಸಂದರ್ಭದಲ್ಲಿ ಶಾಸಕರು ದೈವಸ್ಥಾನ ಟ್ರಸ್ಟಿನ ಕಾರ್ಯದರ್ಶಿಯಾಗಿರುವ ತನಗೆ ಸಾರ್ವಜನಿಕರ ಎದುರೆ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿ ಅವಮಾನ ಮಾಡಿದ್ದಾರೆ ಈ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಜಯಾನಂದ ಮಲೆಕುಡಿಯ ಆರೋಪಿಸಿದ್ದಾರೆ.
ಬೆಳ್ತಂಗಡಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೈವಸ್ಥಾನದ ಪದಾಧಿಕಾರಿಗಳೊಂದಿಗೆ ಶಾಸಕರ ಮನೆಗೆ ಅವರ ಸೂಚನೆಯಂತೆ ತೆರಳಿದ್ದು, ಇಲ್ಲಿ ಶಾಸಕರೊಂದಿಗೆ ಮಾತನಾಡುತ್ತಿದ್ದ ವೇಳೆ ಶಾಸಕರು ಕ್ಷುಲ್ಲಕ ವಿಚಾರ ಮುಂದಿಟ್ಟು ವಾಗ್ವಾದ ನಡೆಸಿದ್ದಲ್ಲದೆ, ಸಾರ್ವಜನಿಕರ ನಡುವೆಯೇ ಕಪಾಳಮೋಕ್ಷ ಮಾಡುತ್ತೇನೆ ಎಂದು ಬೆದರಿಕೆ ಒಡ್ಡಿದಲ್ಲದೆ ಸಾರ್ವಜನಿಕವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿದರು.
ಮಲೆಕುಡಿಯ ಸಮುದಾಯದ ಈ ದೈವಸ್ಥಾನದ ಅಭಿವೃದ್ದಿಗೆ ಸಮುದಾಯ ಒಟ್ಟಾಗಿ ಶ್ರಮಿಸುತ್ತಿರುವಾಗ ಶಾಸಕರು ಈ ರೀತಿಯಾಗಿ ಅವಮಾನ ಮಾಡಿರುವುದು ಓರ್ವ ಜವಾಬ್ದಾರಿಯುತ ಜನಪ್ರತಿನಿಧಿಗೆ ಶೋಭೆ ತರುವ ವಿಚಾರವಲ್ಲ ಎಂದಿರುವ ಅವರು, ತಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದೇನೆ, ಆದರೆ ದೇವಸ್ಥಾನದ ವಿಚಾರದಲ್ಲಿ ನಾವು ಎಲ್ಲ ರಾಜಕೀಯಗಳನ್ನೂ ಬದಿಗಿರಿಸಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಶಾಸಕರು ಇದರಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಘಟನೆಯ ಬಗ್ಗೆ ಈಗಾಗಲೇ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ಪೊಲೀಸರು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ತಾಲೂಕು ಪಂಚಾಯತ್ ಸದಸ್ಯ ಜಯರಾಮ ಮಲೆಕುಡಿಯ, ಶಾಸಕರು ಮಾಡಿರುವ ಕಾರ್ಯ ಖಂಡನೀಯವಾಗಿದೆ. ದೈವಸ್ಥಾನದ ವಿಚಾರಕ್ಕಾಗಿ ಸರಕಾರಿ ಅನುದಾನ ಕೇಳಲು ಮನೆಗೆ ಬಂದವರನ್ನು ರಾಜಕೀಯ ದ್ವೇಷ ಇಟ್ಟುಕೊಂಡು ನಿಂದಿಸಿ ಹಲ್ಲೆಗೆ ಮುಂದಾಗಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ಈ ಘಟನೆಯನ್ನು ಇಡೀ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಶಾಸಕರು ಇನ್ನಾದರೂ ಸೌಜನ್ಯತೆಯಿಂದ ವರ್ತಿಸುವ ಮನೋಭಾವ ಬೆಳೆಸಿಕೊಳ್ಳಲಿ ಎಂದರು. ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ ನೆರಿಯ, ಮಹಾಬಲ ಮಲೆಕುಡಿಯ, ಚೇತನ್ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw