ಮಗಳನ್ನೇ ಅತ್ಯಾಚಾರ ನಡೆಸಿ ಬೆಂಗಳೂರಿಗೆ ಪರಾರಿಯಾಗುತ್ತಿದ್ದಾತನಿಗೆ ಅಪಘಾತ!
ಪುತ್ತೂರು: ಅತ್ಯಾಚಾರ ನಡೆಸಿ ಪೊಲೀಸರ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯೋರ್ವ ಇದೀಗ ಅಪಘಾತಕ್ಕೀಡಾಗಿ ತಾನಾಗಿಯೇ ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಸಜೀಪಮನ್ನೂರು ಗ್ರಾಮದ ಆಲಾಡಿ ನಿವಾಸಿ ಪುರುಷೋತ್ತಮ ಎಂಬಾತ ತನ್ನ ಪತ್ನಿಯ ಅಕ್ಕನ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು, ಅತ್ಯಾಚಾರದ ಬಳಿಕ ಯುವತಿಗೆ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಈತನ ವಿರುದ್ಧ ದೂರು ದಾಖಲಾಗಿತ್ತು.
ಆರೋಪಿಯು ಸಂತ್ರಸ್ತೆಗೆ ಚಿಕ್ಕಪ್ಪನಾಗಿದ್ದು, ಸಂಬಂಧಿಕರ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಪುರುಷೋತ್ತಮ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ. ಈ ಬಗ್ಗೆ ಯುವತಿ ದೂರು ನೀಡಿ ಒಂದು ವಾರವಾದರೂ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ.
ಬಂಧನದ ಭೀತಿಯಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆರೋಪಿ ನಿನ್ನೆ ರಾತ್ರಿ ಕಾರಿನಲ್ಲಿ ಸ್ವತಃ ಡ್ರೈವ್ ಮಾಡಿಕೊಂಡು ಬೆಂಗಳೂರಿಗೆ ಪರಾರಿಯಾಗುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂದರ್ಭ ಆತನಿಗೆ ಗಾಯಗಳಾಗಿದ್ದು, ಈತನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪೊಲೀಸರ ವಶದಲ್ಲಿಯೇ ಆರೋಪಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.