ಭೂಮಿಯನ್ನು ಖಾಸಗಿ ಕಂಪನಿಗೆ ಧಾರೆ – ಡಿವೈಎಫ್ ಐ ವಿರೋಧ
07/11/2020
ಮಂಗಳೂರು: ಬೆಂಗರೆ ಗ್ರಾಮದ ಜನರನ್ನು ಮೂಲಭೂತ ಸೌಕರ್ಯಗಳಿಂದ ವಂಚಿಸಿ ಕೇವಲ ಪ್ರವಾಸೋದ್ಯಮದ ಹೆಸರಲ್ಲಿ ಸ್ಥಳೀಯ ಜನರನ್ನು ಸಮುದ್ರದಿಂದ ಬೇರ್ಪಡಿಸುವ, ಶ್ರೀಮಂತರ ಮೋಜಿನಾಟಕೆ ಬೆಲೆಬಾಳುವ ಭೂಮಿಯನ್ನು ಖಾಸಗೀ ಕಂಪೆನಿಗಳಿಗೆ ಧಾರೆಯೆರೆಯುವ ಯೋಜನೆಯನ್ನು ವಿರೋಧಿಸಿ ಡಿವೈಎಫ್ಐ ಬೆಂಗರೆ ಗ್ರಾಮಸಮಿತಿಯಿಂದ ಬೆಂಗರೆ ಕಡಲ ಕಿನಾರೆಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಮಾತನಾಡಿ ಬೆಂಗರೆ ಪ್ರದೇಶವನ್ನು ಅಭಿವೃದ್ಧಿ ಪಡಿಸುವೆಂದು ಕೇವಲ ಬೀಚ್ ಗಳನ್ನಷ್ಟೇ ಅಭಿವೃದ್ಧಿ ಪಡಿಸಿದರೆ ಅದು ನಿಜವಾದ ಅಭಿವೃದ್ಧಿ ಅಲ್ಲ ಇಲ್ಲಿ ನೂರಾರು ವರುಷಗಳಿಂದ ನೆಲೆನಿಂತಿರುವ ನಿವಾಸಿಗಳ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಈಡೇರಿಸುವುದೇ ನಿಜವಾದ ಅಭಿವೃದ್ಧಿ. ಕಳೆದ ಹಲವಾರು ವರುಷಗಳಿಂದ ಈ ಬೆಂಗರೆಯ ನಿವಾಸಿಗಳ ಬಹುಮುಖ್ಯ ಬೇಡಿಕೆ ಮಹಾನಗರ ಪಾಲಿಕೆ ಈವರೆಗೂ ಈಡೇರಿಸಲಿಲ್ಲ. ಕುಡಿಯುವ ನೀರಿನ ಸಂಪರ್ಕ ಕೊಟ್ಟಿಲ್ಲ, ಹಕ್ಕುಪತ್ರವಿಲ್ಲ, ಡ್ರೈನೇಜ್ ಇಲ್ಲ, ಚರಂಡಿ ಇಲ್ಲ, ಆಟದ ಮೈದಾನ ಇಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ ಅಭಿವೃದ್ಧಿ ಹೆಸರಲ್ಲಿ ಇಲ್ಲಿನ ಫಲವತ್ತಾದ ಭೂಮಿಯನ್ನು ಖಾಸಗೀ ಧಣಿಗಳಿಗೆ ಮಾರಲು ಹೊರಟ ಯೋಜನೆಯನ್ನು ಪ್ರಾರಂಭಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಶಾಸಕರು , ಜನಪ್ರತಿನಿಧಿಗಳು ಈ ಊರಿಗೆ ಚುನಾವಣೆ ಸಂದರ್ಭ ಕೊಟ್ಟ ಆಶ್ವಾಸನೆಗಳೆಲ್ಲವು ಏನಾದವು. ಈ ಹಿಂದೆಯೂ ಗಾಲ್ಫ್ ಕ್ಲಬ್ ನಿರ್ಮಾಣದ ವಿರುದ್ದ ರಾಜಿರಹಿತ ಹೋರಾಟಗಳನ್ನು ಮಾಡಿದ್ದೇವೆ ಇಂತಹದೇ ಯೋಜನೆ ಮತ್ತೊಮ್ಮೆ ಕೈಗೊಂಡರೆ ಅದರ ವಿರುದ್ದವು ಹೋರಾಟಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಬೌಗೋಳಿಕವಾಗಿ ಸುಂದರವಾಗಿರುವ ಬೆಂಗರೆ ಪ್ರದೇಶದ ಜನರ ಬದುಕು ಮಾತ್ರ ಸುಂದರವಾಗಿಲ್ಲ. ಮಂಗಳೂರು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಬೆಂಗರೆ ಪ್ರದೇಶದಲ್ಲಿ ಬದುಕುವ ಜನರ ಪ್ರಶ್ನೆಗಳನ್ನು ಕೇಳಲು ಈವರೆಗೂ ಬೆಂಗರೆಗೆ ಕಾಲಿಟ್ಟಿಲ್ಲ ಬರೇ ಶ್ರೀಮಂತರ ಮೋಜಿನಾಟದ ಯೋಜನೆಗಳಿಗೆ ಭೇಟಿಕೊಡಲು ಇವರುಗಳಿಗೆ ಬೇಕಾದಷ್ಟು ಸಮಯಗಳಿವೆ. ಸ್ಮಾರ್ಟ್ ಸಿಟಿ ಅನ್ನೋದೆ ಒಂದು ಭ್ರಷ್ಟಾಚಾರದ ಕೊಂಪೆ . ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬೀಚ್ ಗಳನ್ನು ಅಭಿವೃದ್ಧಿ ಪಡಿಸುವಿರಾದರೆ ಈ ಊರಿನ ಜನರ ಮೂಲಭೂತದ ಸೌಕರ್ಯಗಳ ಅಭಿವೃದ್ಧಿ ಯಾಕೆ ಸಾದ್ಯವಿಲ್ಲ. ಇಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನಿಂದ ಹಿಡಿದು ಹಕ್ಕುಪತ್ರ, ಡ್ರೈನೇಜ್, ಸಾರಿಗೆ, ಆರೋಗ್ಯ ಕೇಂದ್ರ , ಶಾಲೆ ಎಲ್ಲದರಿಂದಲೂ ವಂಚಿತರಾಗಿದ್ದಾರೆ ನಗರ ಪಾಲಿಕೆಯ ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲಿ ನಡೆಯುವುದಿಲ್ಲ ಆದರೆ ಈ ಜನರಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಪ್ರತೀ ವರುಷ ವಸೂಲಿ ಮಾಡುವುದು ನಿಮ್ಮದೆಂತಹ ನೀತಿ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ವಿಲ್ಲಿ ವಿಲ್ಸನ್, ಮೋನಾಕ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಎ.ಬಿ ನೌಶದ್ ಡಿವೈಎಫ್ಐ ಬೆಂಗರೆ ಗ್ರಾಮ ಸಮಿತಿ ಅಧ್ಯಕ್ಷರಾದ ಹನೀಫ್ ಬೆಂಗರೆ, ಕಾರ್ಯದರ್ಶಿ ರಿಜ್ವಾನ್, ಅಸ್ಲಂ, ನಾಸಿರ್, ತೌಸೀಫ್, ತಸ್ರೀಫ್, ಸಮದ್, ಬಿಲಾಲ್, ಜಮಾಹತ್ ಕಮಿಟಿ ಸದಸ್ಯ ಆಶ್ರಫ್, ಬಶೀರ್ ಮುಂತಾದವರು ಉಪಸ್ಥಿತರಿದ್ದರು.