ಭಾರತ್ ಬಂದ್: ಮಂಗಳೂರಿನ ನಂತೂರ್ ಸರ್ಕಲ್ ನಲ್ಲಿ ರಸ್ತೆ ತಡೆ ನಡೆಸಿದ ಸಂಘಟನೆಗಳು

08/12/2020

ಮಂಗಳೂರು: ಭಾರತ್ ಬಂದ್ ಹಿನ್ನೆಲೆಯಲ್ಲಿ  ಮಂಗಳೂರಿನ ನಂತೂರ್ ಸರ್ಕಲ್ ನಲ್ಲಿ  ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದು, ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾನೂನು ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹಸಿರು ಸೇನೆ ರೈತ ಸಂಘಟನೆಯ ಜಿಲ್ಲಾಧ್ಯಕ್ಷ ಓಸ್ವಾಲ್ಟ್ ಫೆರ್ನಾಂಡಿಸ್,  ರೈತರು ಕೇಂದ್ರ ಸರ್ಕಾರದ ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದೆ. ರೈತರನ್ನು ಎದುರಿಸಲಾಗದ ಕೇಂದ್ರ ಸರ್ಕಾರವು ಕಂದಕಗಳನ್ನು ನಿರ್ಮಿಸಿ, ಬೇಲಿ ಹಾಕಿ, ಅಶ್ರುವಾಯು ಸಿಡಿಸಿ, ಜಲಫಿರಂಗಿ ಬಳಸಿ ತಾನು ರೈತ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.

ರೈತರ ವಿರೋಧಿ ಕೃಷಿ ಕಾನೂನನ್ನು  ತಂದಿರುವ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ತಾಯಿ ಹೃದಯವೇ ಇಲ್ಲವಾಗಿದೆ.  ಈ ಕಾಯ್ದೆಯು ರೈತರ ಮರಣ ಶಾಸನವಾಗಿದೆ ಎಂದು ಫೆರ್ನಾಂಡಿಸ್ ಹೇಳಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವ, ರೈತ ಸಂಘಟನೆ ಮುಖಂಡ ಕೃಷ್ಣಪ್ಪ ಸಾಲ್ಯಾನ್, ಅಲ್ವಿನ್ ಮಿನೇಜಸ್, ಸನ್ನಿ ಡಿಸೋಜಾ, ಲಿಯೋ ನಝರತ್, ಶ್ರೀಧರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ, ಮುನೀರ್ ಕಾಟಿಪಳ್ಳ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

Exit mobile version