ಭಾರತ ಬಂದ್ ಗೆ ಬೆಂಬಲ ಘೋಷಿಸಿದ ಜೆಡಿಎಸ್ | ಕುಮಾರಸ್ವಾಮಿಯವರಿಂದ ಅಧಿಕೃತ ಘೋಷಣೆ
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನಿನ ವಿರುದ್ಧ ಡಿ.8(ನಾಳೆ)ರಂದು ನಡೆಯಲಿರುವ ಭಾರತ ಬಂದ್ ಗೆ ಜಾತ್ಯಾತೀತ ಜನತಾದಳ(ಜೆಡಿಎಸ್) ಬೆಂಬಲ ಸೂಚಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು , ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ಕಾನೂನು ವಿರುದ್ಧ ರೈತರು ನೀಡಿರುವ ಭಾರತ್ ಬಂದ್‍ಗೆ ನಮ್ಮ ಬೆಂಬಲವಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆ ತಂದಿರುವುದು ಸರಿಯಲ್ಲ ಎಂದರು.
ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಕೇಂದ್ರದ ರೈತ ವಿರೋಧಿ ನೀತಿ ವಿರುದ್ಧ ಬಂದ್ ಕರೆಯಲಾಗಿದ್ದು, ಅದಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತೇವೆ. ರೈತರನ್ನು ವಿರೋಧ ಮಾಡಿದ ಯಾವ ರಾಜಕಾರಣಿಗಳು ಉಳಿದಿಲ್ಲ. ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಿವಲಿಂಗೇಗೌಡ ಹೇಳಿದರು.
ರೈತರ ಪರವಾಗಿ ನಾವಿರುವುದಾದರೆ ಸದನವನ್ನು ಬಂದ್ ಮಾಡಬೇಕು. ಆಡಳಿತ ಪಕ್ಷದವರು ಏನು ಬೇಕಾದರೂ ಮಾಡಲಿ. ಆದರೆ, ಪ್ರತಿಪಕ್ಷದವರು ನಾಳೆ ಕಲಾಪ ಬಹಿಷ್ಕರಿಸಬೇಕೆಂದು ಸಲಹೆ ಮಾಡಿದರು. ವಿಧಾನಪರಿಷತ್‍ನ ಸಭಾಪತಿ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯಕ್ಕೆ ಮುಂದಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ನಮ್ಮ ನಾಯಕರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದರು.