ಭಾರತಕ್ಕೆ ವೈದ್ಯಕೀಯ ಸಾಮಾಗ್ರಿ ಒದಗಿಸಲು ಸಿದ್ಧ | ಪುನರುಚ್ಚರಿಸಿದ ಪಾಕಿಸ್ತಾನ
ಇಸ್ಲಾಮಾಬಾದ್: ಭಾರತಕ್ಕೆ ವೈದ್ಯಕೀಯ ಸಾಮಾಗ್ರಿಗಳನ್ನು ಒದಗಿಸಲು ಸಿದ್ಧರಿದ್ದೇವೆ ಎಂದು ಪಾಕಿಸ್ತಾನ ಪುನರುಚ್ಚರಿಸಿದ್ದು, ಕೋವಿಡ್‌ನಿಂದಾಗಿ ಎದುರಾಗುವ ಸವಾಲುಗಳನ್ನು ಕಡಿಮೆ ಮಾಡಲು ದೇಶದ ಸಂಬಂಧಪಟ್ಟ ಅಧಿಕಾರಿಗಳು ಮಾತುಕತೆ ನಡೆಸಿ ಸೂಕ್ತ ವಿಧಾನಗಳನ್ನು ಅನುಸರಿಸಬೇಕು ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ಶಾಹಿದ್ ಹಫೀಜ್ ಚೌಧರಿ ಹೇಳಿದ್ದಾರೆ.
ಎರಡೂ ರಾಷ್ಟ್ರಗಳು ಕೊವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜೈಲಿನಲ್ಲಿರುವ ಕಾಶ್ಮೀರ ನಾಯಕರು ಹಾಗೂ ಕಾಶ್ಮೀರ ಕೈದಿಗಳನ್ನು ಭಾರತ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಸಲಹೆ ನೀಡಿರುವ ಅವರು, ಭಾರತಕ್ಕೆ ವೆಂಟಿಲೇಟರ್, ಬಿಐ ಪಿಎಪಿ, ಡಿಜಿಟಲ್ ಎಕ್ಸ್ ರೇ ಉಪಕರಣ, ಪಿಪಿಇ ಕಿಟ್ ಗಳನ್ನು ಒದಗಿಸಲು ಪಾಕಿಸ್ತಾನ ಸಿದ್ಧವಿದೆ ಎಂದು ಅವರು ಹೇಳಿದ್ದಾರೆ.
ಕೊವಿಡ್ ಸಂಕಷ್ಟದಲ್ಲಿ ನೆರೆಯ ರಾಷ್ಟ್ರ ಭಾರತಕ್ಕೆ ನೆರವು ನೀಡಲು ನಾವು ಸಿದ್ಧ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಪಾಕ್ ವಿದೇಶಾಂಗ ಸಚಿವಾಲಯ ಭಾರತಕ್ಕೆ ನೆರವು ನೀಡುವ ವಿಚಾರವನ್ನು ಪುನರುಚ್ಚರಿಸಿದೆ.