ಭಾರೀ ಮಳೆಗೆ ರಾಮನಗರ ಜಿಲ್ಲೆ ತತ್ತರ: ಆಸ್ಪತ್ರೆಗೆ ನುಗ್ಗಿದ ನೀರು, ಮುಳುಗಿದ ಬಸ್, ರಸ್ತೆ ಜಲಾವೃತ!
ರಾಮನಗರ: ಮಹಾ ಮಳೆಗೆ ರಾಮನಗರ ಜಿಲ್ಲೆ ತತ್ತರಿಸಿದ್ದು, ಹೆದ್ದಾರಿಗಳು ಜಲಾವೃತಗೊಂಡು ವಾಹನಗಳು ನೀರಿನಲ್ಲಿ ಮುಳುಗಿದ ಘಟನೆ ನಡೆದಿದ್ದು, ಆಸ್ಪತ್ರೆಯೊಂದಕ್ಕೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಧಾರಾಕಾರ ಮಳೆಯ ಪರಿಣಾಮ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಆಸ್ಪತ್ರೆಗೆ ನುಗ್ಗಿದ ನೀರು:
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ರಾಮಕೃಷ್ಣ ಆಸ್ಪತ್ರೆಯ ನೆಲಮಹಡಿ ಹಾಗೂ ಹೊರರೋಗಿಗಳ ವಿಭಾಗಕ್ಕೆ ಮಳೆ ನೀರು ನುಗ್ಗಿದ್ದು, ವೈದ್ಯಕೀಯ ಉಪಕರಣಗಳಿಗೆ ಹಾನಿಯಾಗಿದೆ.
ಸದ್ಯ ರೋಗಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ವೈದ್ಯಕೀಯ ಸಲಕರಣೆಗಳನ್ನ ನೀರಿನಿಂದ ಹೊರತೆಗೆಯಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಇನ್ನು ಜಿಲ್ಲೆಯ ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ರಾಮನಗರದ ಜನ ಮಳೆಯ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ.
ಮುಳುಗಿದ ಕೆಎಸ್ಸಾರ್ಟಿಸಿ ಬಸ್:
ರಾಮನಗರ ರೈಲ್ವೆ ಸ್ಟೇಷನ್ ಬಳಿಯ ಕೆಳ ಸೇತುವೆ ಬಳಿ ಮಳೆ ನೀರು ತುಂಬಿಕೊಂಡಿದ್ದು, ಅದೇ ಮಾರ್ಗವಾಗಿ ಬಂದ ಕೆಎಸ್ಸಾರ್ಟಿಸಿ ಬಸ್ ಸಂಪೂರ್ಣ ಮುಳುಗಡೆಯಾಗಿದೆ. ರಾಮನಗರದಿಂದ ಹುಣಸನಹಳ್ಳಿ ಕಡೆ ತೆರಳುತ್ತಿದ್ದ ಬಸ್ ಕೆಳ ಸೇತುವೆ ಕೆಳಗೆ ಸಿಲುಕಿಕೊಂಡಿದ್ದು, ಪ್ರಯಾಣಿಕರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ.
ಜಿಲ್ಲೆಯ ಅನೇಕ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ರಾಮನಗರ ಬಳಿ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಮೈಸೂರು, ಮಂಡ್ಯ, ರಾಮನಗರದ ಕಡೆ ಹೋಗುವವರು ಕನಕಪುರ ರಸ್ತೆ ಮೂಲಕ ತೆರಳುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ಇನ್ನು ಜಲಾವೃತವಾದ ಪ್ರದೇಶಗಳಿಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ತಮ್ಮ ಟ್ವಿಟರ್ ನಲ್ಲಿ ಸಾರ್ವಜನಿಕರಿಗೆ ಮಾಹಿತಿ ಹಂಚಿಕೊಂಡಿರುವ ಅವರು, ವಿಪರೀತ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪ್ರವಾಹಸದೃಶ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಜನರು ಇಂದು ಈ ಹೆದ್ದಾರಿಗೆ ಬರದೇ ಇರುವುದು ಒಳಿತು. ಅನಿವಾರ್ಯವಾಗಿ ಸಂಚರಿಸಲೇಬೇಕಾದರೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಿ ಎಂದು ಜನರಿಗೆ ಮನವಿ ಮಾಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka