ಪತಿಯನ್ನು ಹೋಮಕುಂಡದಲ್ಲಿ ಸುಟ್ಟುಕೊಂದಿದ್ದ ಪತ್ನಿ ಸೇರಿದಂತೆ ಮೂವರಿಗೆ ಶಿಕ್ಷೆ ಪ್ರಕಟ
ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ತೀರ್ಪು ಪ್ರಕಟವಾಗಿದ್ದು, ಭಾಸ್ಕರ್ ಶೆಟ್ಟಿ ಪತ್ನಿ, ಪುತ್ರ ಸೇರಿದಂತೆ ಮೂವರಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.
ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಧೀಶರಾದಂತ ಸುಬ್ರಹ್ಮಣ್ಯ ಜೆ.ಎನ್ ತೀರ್ಪು ಪ್ರಕಟಿಸಿದ್ದು, ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ಗೆಳೆಯ ನಿರಂಜನ್ ಭಟ್ ಗೆ ಜೀವಿತಾವಧಿ ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ.
2016ರ ಜುಲೈ 28ರಂದು ಎನ್ ಆರ್ ಐ ಉದ್ಯಮಿ 52 ವರ್ಷ ವಯಸ್ಸಿನ ಭಾಸ್ಕರ್ ಶೆಟ್ಟಿಯನ್ನ ಪತ್ನಿಯೇ ತನ್ನ ಪ್ರಿಯಕರ ಮತ್ತು ಮಗನೊಂದಿಗೆ ಸೇರಿಕೊಂಡು ಕೊಂದು ಮೃತದೇಹವನ್ನ ಹೋಮಕುಂಡದಲ್ಲಿ ಹಾಕಿ ಸುಟ್ಟಿದ್ದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.
ಉದ್ಯಮಿ ಭಾಸ್ಕರ್ ಶೆಟ್ಟಿ ಅವರ ಇಂದ್ರಾಳಿ ಮನೆಗೆ ಬಂದಿದ್ದ ಭಾಸ್ಕರ ಶೆಟ್ಟಿ ಸ್ನಾನ ಮುಗಿಸಿ ಹೊರ ಬರುವ ವೇಳೆ ಪತ್ನಿ ರಾಜೇಶ್ವರಿ ಶೆಟ್ಟಿ, ಈಕೆಯ ಪ್ರಿಯಕರ ನಂದಳಿಕೆ ನಿರಂಜನ ಭಟ್ಟ, ಭಾಸ್ಕರ್ ಶೆಟ್ಟಿ ಪುತ್ರ ನವನೀತ್ ಶೆಟ್ಟಿ ಈ ಮೂವರು ಸೇರಿಕೊಂಡು ಭಾಸ್ಕರ್ ಶೆಟ್ಟಿಯ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ, ರಾಡಿನಿಂದ ತಲೆಗೆ ಹೊಡೆದು ಕೊಲೆಗೈದಿದ್ದರು. ಬಳಿಕ ಮೃತದೇಹವನ್ನು ಕಾರಿನಲ್ಲಿ ನಂದಳಿಕೆ ನಿರಂಜನ್ ಭಟ್ ಮನೆಗೆ ಸಾಗಿಸಿ, ಹೋಮಕುಂಡದಲ್ಲಿ ಮೃತದೇಹವನ್ನು ಸುಟ್ಟಿದ್ದರು. ಬಳಿಕ ಊರಿನ ಸಮೀಪವಿದ್ದ ನೀರಿನ ತೋಡಿಗೆ ಮೂಳೆ, ಬೂದಿಯನ್ನು ಎಸೆದಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.