“ನಶೆಯಲ್ಲಿರುತ್ತಾರೆ”: ಭವಾನಿ ರೇವಣ್ಣ ಬಗ್ಗೆ ಕೀಳುಮಟ್ಟದ ಹೇಳಿಕೆಗೆ ಪ್ರೀತಂ ಗೌಡ ಕ್ಷಮೆಯಾಚಿಸಬೇಕು: ಜೆಡಿಎಸ್ ಯುವ ನಾಯಕ ಪ್ರವೀಣ್ ವಾಗ್ದಾಳಿ
ಹಾಸನ: ಅಭಿವೃದ್ಧಿ ವಿಚಾರವಾಗಿ ಶಾಸಕ ಪ್ರೀತಂ ಗೌಡ ಹೆಸರು ಪ್ರಸ್ತಾಪ ಮಾಡದೇ ಶಾಸಕರು ಎಂಬ ಗೌರವಯುತ ಶಬ್ದ ಬಳಸಿ ಪ್ರೀತಂ ಗೌಡ ಅವರನ್ನು ಟೀಕೆ ಮಾಡಿರುವ ಭವಾನಿ ರೇವಣ್ಣ ಅವರ ಮೇಲೆ ವೈಯಕ್ತಿಕ ದಾಳಿ ನಡೆಸಿರುವುದು ಶಾಸಕರು ಪರೋಕ್ಷವಾಗಿ ತಮ್ಮ ವೈಫಲ್ಯವನ್ನು ಒಪ್ಪಿಕೊಂಡಂತಾಗಿದೆ ಎಂದು ಜೆಡಿಎಸ್ ಯುವ ನಾಯಕ ಪ್ರವೀಣ್ ಹೇಳಿದರು.
ಒಬ್ಬ ಶಾಸಕ ತಾನೇ ಎಲ್ಲ ಮಾಡಿರುವುದು ಎಂದು ಕೊಚ್ಚಿಕೊಳ್ಳುತ್ತಾರೆ. ಅವರು ವಿದ್ಯಾವಂತರೋ ಅವಿದ್ಯಾವಂತರೋ ಗೊತ್ತಿಲ್ಲ. ಇದು ರೇವಣ್ಣ ಮಾಡಿರುವ ಕೆಲಸ ಅನ್ನೋದು ಅವಿದ್ಯಾವಂತರಿಗೂ ಗೊತ್ತಾಗುತ್ತದೆ. 7ನೇ ಕ್ಲಾಸ್ ಓದಿದವರು ಅಂತ ರೇವಣ್ಣ ಅವರಿಗೆ ಹೇಳ್ತಾರೆ, ರೇವಣ್ಣ ವಿದ್ಯಾಭ್ಯಾಸವನ್ನು ಜನರಿಗೆ ತೋರಿಸಿಕೊಂಡು ಕೆಲಸ ಮಾಡ್ಬೇಕಾ? ಎಂದು ಭವಾನಿ ರೇವಣ್ಣ ಅವರು ಪ್ರೀತಂ ಗೌಡ ಅವರ ಆರೋಪಗಳಿಗೆ ಉತ್ತರಿಸಿದ್ದಾರೆ.
ಆದರೆ, ಭವಾನಿ ರೇವಣ್ಣ ಅವರ ಉತ್ತರವನ್ನು ಸಹಿಸದ ಪ್ರೀತಂ ಗೌಡ ಸತ್ಯವಾದ ಮಾತುಗಳಿಗೆ ಅಂಜಿ, ವೈಯಕ್ತಿಕ ದಾಳಿಗೆ ಇಳಿದಿದ್ದು, ಇಲ್ಲಸಲ್ಲದ, ಆಧಾರ ರಹಿತ ಆರೋಪಗಳನ್ನು ಮಾಡಿದ್ದಾರೆ. ರಾಜಕೀಯ ತತ್ವ ಸಿದ್ಧಾಂತಗಳ ಬಗ್ಗೆ ಮಾತನಾಡದೇ, ಅಭಿವೃದ್ಧಿಯ ಬಗ್ಗೆ ಹೇಳಿಕೆ ನೀಡಲು ಸಾಧ್ಯವಾಗದೇ ಪ್ರೀತಂ ಗೌಡ ಅವರು, ‘ನಶೆ’ ಎಂಬ ಪದಗಳನ್ನು ಬಳಸಿದ್ದಾರೆ ಇದು ಖಂಡನೀಯ ಎಂದು ಪ್ರವೀಣ್ ಅವರು ಆಕ್ರೋಶ ವ್ಯಕ್ತಪಡಿಸಿದರು.
ತಾಯಿ ಮಗ ಇಬ್ಬರು ರಾತ್ರಿ ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡಿರುತ್ತಾರೆ, ಎಂದು ಒಬ್ಬ ಶಾಸಕನಾಗಿ ಇಂತಹ ಕೀಳುಮಟ್ಟದ ಅಭಿರುಚಿಯ ಸುಳ್ಳು ಹೇಳಿಕೆಗಳನ್ನು ನೀಡಿ ರಾಜಕೀಯ ಮಾಡಲು ನಾಚಿಕೆಯಾಗುವುದಿಲ್ಲವೇ ಎಂದು ಪ್ರವೀಣ್ ಆಕ್ರೋಶ ವ್ಯಕ್ತಪಡಿಸಿದರು.
ಭವಾನಿ ರೇವಣ್ಣ ಅವರು ಯಾವ ಕುಟುಂಬದ ಹಿನ್ನೆಲೆಯಿಂದ ಬಂದಿದ್ದಾರೆ, ಅವರ ಸಂಸ್ಕಾರ ಎಂತಹದ್ದು ಅನ್ನೋದು ಪ್ರೀತಂ ಗೌಡ ಹೇಳಿ ಜನರಿಗೆ ತಿಳಿಯಬೇಕೆಂದಿಲ್ಲ. ಪ್ರೀತಂ ಗೌಡ ಅವರು ತಾನು ಸುಳ್ಳು ಹೇಳಿದರೂ ಜನರು ನಂಬುತ್ತಾರೆ. ಇದರಿಂದ ತಾನು ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತೇನೆ ಅಂದುಕೊಂಡಿದ್ದಾರೆ. ಆದರೆ ಇಂತಹ ಮಾತುಗಳಿಂದ ನೀವು ರಾಜಕೀಯ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಈ ಹೇಳಿಕೆಯಿಂದ ಜನರಿಗೆ ನಿಮ್ಮ ಮೇಲಿದ್ದ ಸ್ವಲ್ಪ ನಂಬಿಕೆಯನ್ನೂ ನೀವು ಕಳೆದುಕೊಂಡಿದ್ದೀರಿ ಎಂದು ಅವರು ವಾಗ್ದಾಳಿ ನಡೆಸಿದರು.
ಒಬ್ಬ ಮಹಿಳಾ ರಾಜಕಾರಣಿಗೆ ಗೌರವ ಕೊಟ್ಟು ಮಾತನಾಡುವುದು ರಾಜಕಾರಣಿಗಳಿಗಿರಬೇಕಾದ ಮೊದಲ ಸಂಸ್ಕಾರ, ಒಬ್ಬ ಶಾಸಕರಾಗಿ ನಿಮ್ಮಲ್ಲಿ ಅದೇ ಇಲ್ಲವಾದ ಮೇಲೆ ನೀವು ಜನ ಸಾಮಾನ್ಯರ ಬಗ್ಗೆ ಏನು ಕಾಳಜಿ ವಹಿಸಲು ಸಾಧ್ಯ? ನೀವು ಮಾತನಾಡಿದ ಧಾಟಿಯಲ್ಲೇ ನಾವು ಮಾತನಾಡಬೇಕಾದರೆ, ಬೇಕಾದಷ್ಟು ವಿಷಯಗಳನ್ನು ನಾವು ಹೇಳಬಹುದು. ಆದರೆ, ಅಂತಹ ರಾಜಕೀಯವನ್ನು ಜೆಡಿಎಸ್ ಎಂದಿಗೂ ನಮಗೆ ಕಲಿಸಿಲ್ಲ. ನಿಮ್ಮ ಈ ಹೇಳಿಕೆಗೆ ಜನರೇ ನಿಮಗೆ ತಕ್ಕ ಪಾಠ ಕಳಿಸುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಪಕ್ಷ ಬಹಳ ಶಿಸ್ತಿನ ಪಕ್ಷ ಎಂದು ಹೇಳುತ್ತಿರುವ ಬಿಜೆಪಿ ನಾಯಕರು ಪ್ರೀತಂ ಗೌಡ ಅವರ ಹೇಳಿಕೆಯನ್ನು ಗಮನಿಸಿಲ್ಲವೇ? ಇದೇನಾ ಮಹಿಳೆಯರಿಗೆ ನೀವು ಕೊಡುತ್ತಿರುವ ಗೌರವ? ಹೆಣ್ಣನ್ನು ತಾಯಿ, ಮಾತೆ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ನಿಮ್ಮಲ್ಲಿ ನಿಜವಾಗಿಯೂ ಹೆಣ್ಣನ್ನು ಗೌರವಿಸುವ ಸಂಸ್ಕಾರ ಇದ್ದರೆ, ಪ್ರೀತಂ ಗೌಡ ಅವರನ್ನು ಉಚ್ಛಾಟಿಸಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಅವರು ಸವಾಲು ಹಾಕಿದರು.
ಪ್ರೀತಂ ಗೌಡ ಅವರು ತಮ್ಮ ಆಕ್ಷೇಪಾರ್ಹ ಹೇಳಿಕೆಗೆ ತಕ್ಷಣವೇ ಕ್ಷಮೆಯಾಚಿಸಬೇಕು. ಭವಾನಿ ರೇವಣ್ಣ ಅವರ ಬಗ್ಗೆ ಸುಳ್ಳು ಮಾತುಗಳನ್ನಾಡಿದ್ದಕ್ಕೆ ತಪ್ಪು ಒಪ್ಪಿಕೊಂಡು ಕ್ಷಮೆ ಯಾಚಿಸಬೇಕು. ಇಲ್ಲವಾದರೆ, ಶಾಸಕರು ಪ್ರತಿನಿತ್ಯ ಅಲ್ಲಲ್ಲಿ ಪ್ರತಿಭಟನೆಯನ್ನು ಎದುರಿಸಬೇಕಾಗಬಹುದು ಎಂದು ಅವರು ಇದೇ ವೇಳೆ ಎಚ್ಚರಿಕೆ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka