ಭೀಮ್ ಆರ್ಮಿ ಕಾರ್ಯಕರ್ತರ ಬಿಡುಗಡೆ ಮಾಡದಿದ್ದರೆ, ಕೇರಳಕ್ಕೆ ನಾನು ಬರಬೇಕಾಗುತ್ತದೆ | ಪಿಣರಾಯಿ ವಿಜಯನ್ ಗೆ ಚಂದ್ರಶೇಖರ್ ಆಜಾದ್ ಎಚ್ಚರಿಕೆ
ತೊಡುಫುಳ: ದಲಿತರ ಕಾಲನಿಗೆ ಹೋಗುವ ಮಾರ್ಗಕ್ಕೆ ಗೇಟ್ ನಿರ್ಮಿಸಿ ದಲಿತರು ಇಲ್ಲಿಂದ ಪ್ರಯಾಣಿಸದಂತೆ ತಡೆಯಲಾಗಿದ್ದು, ಈ ಗೇಟ್ ನ್ನು ಮುರಿದ ಕಾರಣಕ್ಕಾಗಿ ಭೀಮ್ ಆರ್ಮಿ ಮುಖಂಡರನ್ನು ಬಂಧಿಸಲಾಗಿದ್ದು, ಆ ಮುಖಂಡರನ್ನು ಬಿಡುಗಡೆ ಮಾಡದೇ ಇದ್ದರೆ, ನಾನು ಕೇರಳಕ್ಕೆ ಬರಬೇಕಾಗುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಗೆ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಎಚ್ಚರಿಕೆ ನೀಡಿದ್ದಾರೆ.
ತೋಡುಪುಳ ಮುಟ್ಟಮ್ ಪಂಬಾನಿ ದಲಿತ ಕಾಲೋನಿಗೆ ಹೋಗುವ ಮಾರ್ಗವನ್ನು ತಡೆಯಲು ಮಲಂಕರ ಎಸ್ಟೇಟ್ ನಲ್ಲಿ ಗೇಟ್ ನಿರ್ಮಿಸಲಾಗಿತ್ತು. ಈ ಗೇಟ್ ನ್ನು ಭೀಮ್ ಆರ್ಮಿ ಕಾರ್ಯಕರ್ತರು ಕೆಡವಿಹಾಕಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಭೀಮ್ ಆರ್ಮಿಯ ರಾಜ್ಯ ಅಧ್ಯಕ್ಷ ರಾಬಿನ್ ಆಲಪ್ಪುಳ, ಪ್ರಧಾನ ಕಾರ್ಯದರ್ಶಿ ಪ್ರೈಸ್ ಕಣ್ಣೂರು, ಉಪಾಧ್ಯಕ್ಷ ಮನ್ಸೂರ್ ಕೊಚುಕಡವು ಮತ್ತು ಸಿಪಿಎಂ ಮುಖಂಡ ರಾಜು ತಂಕಪ್ಪನ್ ಅವರನ್ನು ಬಂಧಿಸಲಾಗಿತ್ತು.
ದಲಿತರು ವಾಸಿಸುವ ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿ ಮಲಂಕರ ಎಸ್ಟೇಟ್ ಮ್ಯಾನೇಜ್ಮೆಂಟ್ 26 ವರ್ಷಗಳ ಹಿಂದೆ ಗೇಟ್ ನಿರ್ಮಿಸಿತ್ತು. ಈ ಗೇಟ್ ನ್ನು ಬದಲಿಸಿ ಎಂದು ಸ್ವತಃ ಜಿಲ್ಲಾಧಿಕಾರಿ ಅವರೇ ಆದೇಶಿಸಿದ್ದರೂ ಇಲ್ಲಿಯವರೆಗೂ ಆದೇಶ ಪಾಲನೆ ಆಗಿಲ್ಲ. ಈ ಹಿನ್ನೆಲೆಯಲ್ಲಿ ಭೀಮ್ ಆರ್ಮಿ ಜಾತಿ ಗೇಟ್ ನ್ನು ಧ್ವಂಸ ಮಾಡಿದ್ದರು.
ಬಂಧಿತ ಭೀಮ್ ಆರ್ಮಿ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದು ಟ್ವೀಟ್ ಮಾಡಿರುವ ಚಂದ್ರಶೇಖರ್, ಪಿಣರಾಯ್ ವಿಜಯನ್ ಅವರನ್ನು ಟ್ಯಾಗ್ ಮಾಡಿದ್ದು, ಭೀಮ್ ಆರ್ಮಿ ಕಾರ್ಯಕರ್ತರನ್ನು ಬಿಡುಗಡೆ ಮಾಡದಿದ್ದರೆ, ತಾನು ಕೇರಳಕ್ಕೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.