ಮಹಾನಾಯಕ ಎಪಿಸೋಡ್: 30 | ಹೆಣ್ಣು ಮಕ್ಕಳ ಶಿಕ್ಷಣ | ಭೀಮಾ ಭಾಯಿಯ ಅನಾರೋಗ್ಯ -ಗಣಪತಿ ಚಲವಾದಿ - Mahanayaka
2:15 PM Wednesday 4 - December 2024

ಮಹಾನಾಯಕ ಎಪಿಸೋಡ್: 30 | ಹೆಣ್ಣು ಮಕ್ಕಳ ಶಿಕ್ಷಣ | ಭೀಮಾ ಭಾಯಿಯ ಅನಾರೋಗ್ಯ -ಗಣಪತಿ ಚಲವಾದಿ

22/10/2020

ಮಹಾನಾಯಕ ಮತ್ತೂ ನಾನು(ವೀಕ್ಷಕ)ಒಂದು ವಿಮರ್ಶಾಲೇಖನ:

ಸಂಚಿಕೆ(ಎಪಿಸೋಡ್):30

ದಿನಾಂಕ:17/10/2020.

ವಾರ :ಶನಿವಾರ.

       ಪ್ರತಿ ಶನಿವಾರದಂತೆ ಇವತ್ತೂ ಶನಿವಾರ zee ವಾಹಿನಿಯಲ್ಲಿ ಮಹಾನಾಯಕ ಧಾರಾವಾಹಿ ಪ್ರಸಾರವಾಗುವ ಸಮಯಕ್ಕಾಗಿ ಎಲ್ಲರೂ ದೂರದರ್ಶನದ ಮುಂದೆ ಕಾಯುತ್ತಿದ್ದಾರೆ. ಈಗ ಅವರಿವರೆನ್ನದೆ ಎಲ್ಲರೂ ಮಹಾನಾಯಕ ಧಾರಾವಾಹಿ ನೋಡುವ ಕುತೂಹಲ ಹೊಂದಿದ್ದಾರೆ ಮತ್ತೂ  ಬಾಬಾಸಾಹೇಬ ಅಂಬೇಡ್ಕರವರ ಬಾಲ್ಯ ಜೀವನದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಮುಂದಿನ ಎಲ್ಲ ಎಪಿಸೋಡ್ ಗಳನ್ನೂ ನೋಡುತ್ತೇವೆ. ಎಂದು ಉತ್ಸಾಹದಿಂದ ಹೇಳುತ್ತಾರೆ.  ಅದರಲ್ಲೂ ಮಕ್ಕಳಂತೂ ಇನ್ನೂ ಉತ್ಸಾಹದಿಂದ ನೋಡಲು ಖುಷಿಯಿಂದ ಕಾಯುತ್ತಿದ್ದಾರೆ.

      ಹೋದ ವಾರ ಮಂಜುಳಾ ಹಾಗೂ  ತುಳಸಿ ತಮ್ಮ ತಂದೆ, ಸಹೋದರ ಭೀಮರಾರವರ  ಇಚ್ಛೆಯಂತೆ ಊರ ಹೆಣ್ಣುಮಕ್ಕಳು ದಿನನಿತ್ಯ  ಶಾಲೆಗೆ ಹೋಗುವ ಸಲುವಾಗಿ,ಆ ಊರ ಹೆಣ್ಣುಮಕ್ಕಳ ಅಪ್ಪಂದಿರು ಹಾಕಿರುವ ಕಠಿಣ ಆಟದ ಸ್ಪರ್ಧೆಯಲ್ಲಿ ತಮ್ಮ ಪ್ರಾಣದ ಹಂಗೂ ತೊರೆದು ಆಡಿ ಗೆದ್ದರು. ಮತ್ತೂ ಇದರಿಂದಾಗಿ  ಮಂಜುಳಾ ತುಳಸಿ ನಮ್ಮ ಅಪ್ಪಂದಿರ ಷರತ್ತಿನಂತೆ ಸ್ಪರ್ಧೆಯಲ್ಲಿ ಗೆದ್ದಿದ್ದು  ನಾವು ಕೂಡ ನಾಳೆಯಿಂದ ಶಾಲೆಗೆ ಹೋಗಬಹುದು. ನಾವೂ ವಿದ್ಯೆ ಕಲಿಯಬಹುದು ಎಂಬುದಾಗಿ ಸಂಭ್ರಮ ಪಟ್ಟಿದ್ದರು.ಮತ್ತೂ ಅದಕ್ಕಾಗಿ ಆಟದಲ್ಲಿ ಗೆದ್ದ ರಾಮಜೀ ಸಕ್ಪಾಲರ ಇಬ್ಬರು ಹೆಣ್ಣುಮಕ್ಕಳಿಗೆ ಅದೇ ಸಂಭ್ರಮದಲ್ಲಿ ಉಡುಗೊರೆಯನ್ನೂ ಸಹಿತ ಭೀಮರಾವ್ ಹಾಗೂ ಆನಂದನ ಕೈಯಲ್ಲಿ ಕೊಟ್ಟಿದ್ದರು. ಹಾಗಾಗಿ ಇವತ್ತಿನ ಧಾರಾವಾಹಿಯಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವ ಸಲುವಾಗಿ ಏನೂ ನಡೆಯಬಹುದು ಎಂಬುದನ್ನು ತಿಳಿಯಲು ಉತ್ಸುಕತೆಯಿಂದ   ಎಲ್ಲ ಪ್ರೇಕ್ಷಕರು ಕಾಯುತ್ತಿದ್ದಾರೆ.                 

          ಇವತ್ತಿನ  ಧಾರಾವಾಹಿ ಪ್ರಾರಂಭವಾಗುತ್ತಿದ್ದಂತೆ ಮನುವಾದಿಯೊಬ್ಬ ತನ್ನ ಮಗಳಿಗೆ, ” ನನಗೆ ಗೊತ್ತಿಲ್ಲದೇ ಈ ಪುಸ್ತಕ ತಂದಿದ್ದೀಯ..?  ನೀನು ಶಾಲೆಗೆ ಹೋಗಬೇಕಾ..?ಆ ಕೀಳು ಜಾತಿಯವರು ಶಾಲೆಗೆ ಹೋದರೆ ನೀನೂ  ಹೋಗಬೇಕಾ..?” ಹೀಗೆಂದು ಆಕೆಯ ಕೈಯಲ್ಲಿದ್ದ ಪುಸ್ತಕ ಕಿತ್ತೆಸೆದು ಒಡೆಯುತ್ತಿದ್ದಾನೆ. ಆಗ ಆ ಮಗಳ ಪರವಾಗಿ ಆಕೆಯ ತಾಯಿ “ನೀವೇ ಅವತ್ತು ರಾಮಜೀ ಸಕ್ಪಾಲರೊಡನೆ ಒಪ್ಪಿಕೊಂಡ ಷರತ್ತಿನಂತೆ ಇವತ್ತೂ ನಮ್ಮ ಮಗಳು ಕೂಡ ಓದಬೇಕು.ಬೇಡ ಅಂದ್ರೆ ಅವತ್ತೇಕೆ ಎಲ್ಲರ ಮುಂದೆ ಸುಮ್ಮನೆ ಕೂತಿದ್ದೀರಿ. ” ಎಂದು ಗಂಡನಿಗೆ ಕೇಳುತ್ತಾರೆ. ಇದರಿಂದ ಕೆರಳಿದ ಆತ ಮಗಳನ್ನು ಮನೆಯೊಳಗೇ ಕೂಡಿ ಹಾಕುತ್ತಾನೆ. ಮತ್ತೂ  ಮಗಳಿಗೆ ವಿದ್ಯೆ ಕೊಡಿಸೋಣವೆಂದ  ಹೆಂಡತಿಯನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದಾನೆ. ಪಾಪ ಆತನ ಒದೆತಗಳನ್ನು ತಾಳಲಾರದೆ ಅಯ್ಯೋ, ಅಮ್ಮಾ, ನೋವು ಎನ್ನುತ್ತಿದ್ದಾಳೆ.

    ಇತ್ತ ರಾಮಜೀಯವರ ಮನೆಯಲ್ಲಿ ಭೀಮಾಬಾಯಿಯವರು ಅತ್ತಿಂದಿತ್ತ, ಇತ್ತಿಂದತ್ತ ಓಡಾಡುತ್ತ ಮನೆಯಲ್ಲಿ, ರಾಮಜೀಯವರ ಮುಂದೆ  ಚಡಪಡಿಸುತ್ತಿದ್ದಾರೆ.ಕಾರಣ ಪಾಯಸ ಮಾಡಲು ಅಕ್ಕಿ ಬೆಲ್ಲ, ತರಲು ಹೋದ ಭೀಮಾ ಮತ್ತೂ ಆನಂದ ಇನ್ನೂ ಬರಲಿಲ್ಲವೆಂದು. ಅದೇ ಸಮಯಕ್ಕೆ ಈ  ಇಬ್ಬರೂ ಬರುತ್ತಾರೆ.ಮತ್ತೂ ಭೀಮ”ಅಮ್ಮ ನಮಗೆ  ಅಕ್ಕಿ ಬೆಲ್ಲ ಸಿಗಲಿಲ್ಲ ಆದರೆ, ಈ ಉಡುಗೊರೆ ಸಿಕ್ಕಿತು ಎಂದು ಹೇಳುತ್ತಾನೆ. ದಂಪತಿಗಳು ಇವರ ಮುಖ ನೋಡುತ್ತಾರೆ. ಆಗ ಆನಂದ್ “ಅದೇ ಈ ಹಳ್ಳಿ ಹುಡುಗಿಯರು, ‘ಮಂಜುಳಾ ಮತ್ತೂ ತುಳಸಿ  ನಮಗೆ ಓದಲು ದಾರಿ ಮಾಡಿ ಕೊಟ್ಟಿದ್ದಾರೆ, ಹಾಗಾಗಿ ಅವರಿಗೆ ಈ ಉಡುಗೊರೆ ಕೊಡಿ, ಎಂದು ಹೇಳಿ ಕೊಟ್ಟಿದ್ದಾರೆ ” ಎಂದು ಹೇಳುತ್ತಾನೆ. ಮತ್ತೂ ಅದೇ ಖುಷಿಯಲ್ಲಿ ತುಳಸಿ ಹಾಗೂ ಮಂಜುಳಾ ಊರ ಹೆಣ್ಣುಮಕ್ಕಳು ಕಳಿಸಿರುವ ಉಡುಗೊರೆಯುಳ್ಳ ಗಂಟನ್ನು  ಲಘುಬಗೆಯಿಂದ   ಬಿಚ್ಚಿ ನೋಡುತ್ತಾರೆ. ಅದರಲ್ಲಿ ಬಳೆ, ಕಿವಿಯೋಲೆಗಳು ಇರುತ್ತವೆ. ಆಗ ರಾಮಜೀಯವರು “ವಾವ್ ಪಾಯಸಕ್ಕಿಂತಲೂ ಸಿಹಿಯಾದ ಉಡುಗೊರೆಗಳಿವು. ಮುಂದೆ ಬರುವ ಕಷ್ಟಗಳನ್ನು ಹೆದರಿಸೋಕೆ ಇವು ಸ್ಫೂರ್ತಿ ಕೊಡುತ್ತವೆ” ಎನ್ನುತ್ತಾರೆ.

ಭೀಮಾಬಾಯಿ” ಇಷ್ಟು ದಿನ ಈ ಜನಗಳು ಬಯ್ಗುಳ, ಶಾಪಗಳಿಂದಲೇ ಅಲಂಕಾರ ಮಾಡುತ್ತಿದ್ದರು, ಆದ್ರೆ ಇದೇ ಮೊದಲ ಸಲ ಉಡುಗೊರೆ ಕೊಟ್ಟಿರೋದು”. ಎಂದು ಹೇಳಿ ಕಣ್ಣೀರು ಒರೆಸಿಕೊಳ್ಳುತ್ತಾರೆ. ಮತ್ತಿದೆಲ್ಲ ನಮ್ಮ ಹೆಣ್ಣುಮಕ್ಕಳಿಗೆ ಎಂದು ಹೇಳಿ ಇಬ್ಬರು ಹೆಣ್ಣುಮಕ್ಕಳಿಗೆ ಸಿಹಿ  ಮುತ್ತು ಕೊಡುತ್ತಾರೆ.

ಮೀರಾ “ನೋಡಿ ಅತ್ತಿಗೆ ಕಾಲ ಹೇಗೆ ಬದಲಾಗ್ತಿದೆ “ಎಂದು ಭೀಮಾಬಾಯಿಯವರ ಕಡೆ ನೋಡುತ್ತಾರೆ. ಮತ್ತೂ ಎಲ್ಲರೂ ಆನಂದ ಬಾಷ್ಪಗಳನ್ನು ಉದುರಿಸುತ್ತಾರೆ.

           ಒಂದು ಕಡೆ ಅಂಬೇಡ್ಕರ್ ಹಾಗೂ ಪೆನ್ಸೇ ಗುರುಗಳು ಕುಳಿತ್ತಿದ್ದಾರೆ.

ಮತ್ತೂ ಅಂಬೇಡ್ಕರ್ ಗುರುಗಳು “ಪೆನ್ಸೇ ಸರ್, ಧರ್ಮಂಧಕಾರ ತುಂಬಿಕೊಂಡಿರುವ ನಮ್ಮ ಜನ ಬದಲಾಗಲು ತುಂಬಾ ಸಮಯ ಬೇಕಾಗುತ್ತದೆ. ದೊಡ್ಡ ಸಂಘರ್ಷನೆಯೇ ನಡೆಬಹುದು, ಬಲಿದಾನಗಳು ಆಗಬೇಕಾಗಬಹುದು “ಎಂದು ಹೇಳಿ ಚಿಂತಿಸುತ್ತಾರೆ.ಹೌದು ನಿಜವಾದ ಸಮಾಜದ ಏಳ್ಗೆ ಬಯಸುವ ಆದರ್ಶ ಶಿಕ್ಷಕರವರು.

        ಈಲ್ಲಿ ಅಮ್ಮ ಮಗಳನ್ನ ಕೂಡಿ ಹಾಕಿ ಚಿತ್ರ ಹಿಂಸೆ ಕೊಟ್ಟ ಮನುವಾದಿ ಅಪ್ಪನೊಬ್ಬ ಒಂದು ಹಗಲು ಒಂದು ರಾತ್ರಿಯ ನಂತರ ಮಗಳನ್ನು ಆಕೆಯ ತಾಯಿಯ ಹತ್ತಿರ ಬಿಟ್ಟು “ಇನ್ನಮುಂದೆ  ಯಾವತ್ತಾದ್ರೂ ಶಾಲೆ, ಓದು ಅಂತಾ ನನ್ನ ಕಿವಿಗೆ ಬಿದ್ರೆ ನಿಮ್ಮನ್ನು ಹುಟ್ಟಿಲ್ಲ, ಅನ್ನಿಸಿ ಬಿಡುತ್ತೇನೆ. ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿರಬೇಕು”  ಹೀಗೆ  ಎಚ್ಚರಿಕೆ ಕೊಟ್ಟು ಹೊರಡುತ್ತಾನೆ.

          ಹೇಳಿ ಕೇಳಿ ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನಗಾಥೆ ಶುರುವಾಗಿದ್ದು, ಬ್ರಿಟಿಷ್ ಭಾರತದಲ್ಲಿ. ಅಂಬೇಡ್ಕರ್ ತಂದೆ ರಾಮಜೀ ಸಕ್ಪಾಲರು ಕೀಳು ಜನರೆಂದು ಆ ಊರಿನಲ್ಲಿ ಮನುವಾದಿಗಳು ಕೆಲಸ ಕೊಡದ ಕಾರಣ, ಪಕ್ಕದ ಬೇರೆ ಹಳ್ಳಿಗೆ ಒಬ್ಬ ಜಮೀನ್ದಾರನ ಬಳಿ ಕೆಲಸಕ್ಕೆ ಬಂದಿದ್ದು ನಿಮಗೆ ಗೊತ್ತೇ ಇದೇ. ಈಗ ರಾಮಜೀಯವರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ಸಮಯಕ್ಕೆ,  “ಒಂದೇ ಮಾತರಂ, ಒಂದೇ ಮಾತರಂ,  ಇಂಕಿಲಾಬ್ ಜಿಂದಾಬಾದ್  ಎಂದು  ಸ್ವತಂತ್ರಕ್ಕಾಗಿ  ಘೋಷೆಣೆ ಕೂಗುತ್ತ ಒಬ್ಬ ಮುಂದಾಳುವಿನ  ಜತೆಗೆ  ಬರುತ್ತಾರೆ. ಮತ್ತೂ ಆ 

ಮುಂದಾಳು  ಮಾಲಕನ ಹತ್ತಿರ ಬಂದು  ಹೋರಾಟಕ್ಕೆ ಸಹಾಯ ಸಹಕಾರ ಬೇಕೆಂದು ಹಣ ಪಡೆಯುತ್ತಾನೆ.ಮತ್ತೂ ಅಲ್ಲಿ ಕೆಲಸ ಮಾಡುವ ಇತರರ ಬಳಿ ಕೂಡ ಹಣ ಪಡೆದು, ರಾಮಜೀ ಸಕ್ಪಾಲರಿಗೂ, ನೀವೂ ಸಹಾಯ ಮಾಡಿ ಎಂದು ಹಣ ಕೇಳಿದಾಗ ರಾಮಜೀಯವರು ತಮ್ಮ ಬಳಿ ಖರ್ಚಿಗೆಂದು   ಇಟ್ಟುಕೊಂಡಿದ್ದ ಸ್ವಲ್ಪ ಹಣ ಕೊಡುತ್ತಾನೆ. ಈಗ ಆ ಮುಂದಾಳು “ನೀವೂ ಯಾರೂ ಈ ಮೊದಲು ನಿಮ್ಮನ್ನು ನೋಡಿಲ್ಲ “ಎಂದು ಹೇಳಿದಾಗ, ಮಾಲೀಕ “ಆತ ಬಡವ ನಾನೇ ಕೆಲಸ ಕೊಟ್ಟು ಇಟ್ಟುಕೊಂಡಿದ್ದೆನೆ “ಎನ್ನುತ್ತಾನೆ. ಆಗವರು ಸುಮ್ಮನೆ ಹೋಗುತ್ತಾರೆ. ಅವರು ಹೋದ ಮೇಲೆ ಮಾಲೀfಕ “ಇವರು ಸ್ವಾತಂತ್ರಕ್ಕಾಗಿ ಹೋರಾಟ ಮಾಡುವವರು,ನೀನು ಸುಬೇದಾರ್ ಅಂತಾ ಗೊತ್ತಾದ್ರೆ, ನಿನಗೆ ಕೆಲಸ ಮಾಡೋಕೆ ಬಿಡೋದಿಲ್ಲ. ಅದಕ್ಕೆ ನಾನೂ ಸುಳ್ಳು ಹೇಳಿದ್ದು, ಸುತ್ತ ಮುತ್ತ ಇರುವ ಕ್ರಾಂತಿಕಾರಿಗಳಿಗೆ ಗೊತ್ತಾಗದೆ ಇರಬೇಕು “ಎಂದು ಹೇಳುತ್ತಾನೆ.

       ಶಾಲೆಯಲ್ಲಿ ಅಂಬೇಡ್ಕರ್  ಗುರುಗಳು ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಾರ್ಮ್ ತುಂಬಲು ಹೇಳುತ್ತಾ, “ನಿಮ್ಮ  ಹೆಸರು, ಅಪ್ಪನ ಹೆಸರು ಹಾಗೂ ನಿಮ್ಮ ಉಪನಾಮ ಬರೆಯಿರಿ “ಎಂದು ಹೇಳಿದಾಗ ಭೀಮರಾವ್ ಆನಂದನಿಗೆ “ಅಣ್ಣಾ ನಾನೂ ಭೀಮರಾವ್ ರಾಮಜೀ ಸಕ್ಪಾಲ್ ಎಂದು ಬರೆಯಬೇಕೆ?  ಎಂದು ಕೇಳುತ್ತ, ಅಪ್ಪ, ಕೊನೆಯಲ್ಲಿ ಅಂಬಾವಾಡೆಕರ್ ಎಂದು ಬರೆಯಬೇಕೆಂದು ಹೇಳಿದ್ದಾರಲ್ಲ..? ” ಎಂದು ಕೇಳುತ್ತಾನೆ.  ಆಗ ಅಂಬೇಡ್ಕರ್ ಗುರುಗಳು “ಏನಾಯಿತು ಭೀಮಾ..? “ಎನ್ನುತ್ತಾರೆ. ಆಗ ಮುಗ್ದತೆಯಿಂದ ಭೀಮರಾವ್, ಗುರುಗಳೇ ನನ್ನ ಹೆಸರನ್ನು “ಭೀಮರಾವ ರಾಮಜೀ ಸಕ್ಪಾಲ್ ಅಂಬವಾಡೇಕರ” ಎಂದು ಬರೆಯಬೇಕಾ..?  ಎಂದು ಕೇಳಿದಾಗ ಅಲ್ಲಿನ ಎಲ್ಲರೂ ನಗುತ್ತಾರೆ.

ಆಗ ಗುರುಗಳು ಭೀಮರಾವನ  ಮನಸ್ಸಿನ ದುಗುಡ ತಿಳಿದುಕೊಂಡು ಭೀಮರಾವ್ ನಿನ್ನ ಪೂರ್ತಿ ಹೆಸರನ್ನು ಹೀಗೆ ಬರೆ “ಭೀಮರಾವ್ ರಾಮಜೀ ಅಂಬೇಡ್ಕರ್ ” ಅಂಬೇಡ್ಕರ್ ಗುರುಗಳ ಮಾತನ್ನು ಕೇಳಿ ಎಲ್ಲರೂ ಚಕಿತರಾಗುತ್ತಾರೆ. ಮತ್ತೂ ಭೀಮರಾವ್ ಕೇಳುತ್ತಾನೆ “ಗುರುಗಳೇ ಅದು ನಿಮ್ಮ ಉಪನಾಮ ನಾನೂ ತಗೋಬಹುದೆ ಎಂದು ಕೇಳುತ್ತಾನೆ. ಆಗ ಅಂಬೇಡ್ಕರ್  ಗುರುಗಳು “ಹೌದು ಭೀಮಾ ಜಾತಿ ಸೂಚಕ ಪದಗಳಾದ ರಾಮಜೀ ಹಾಗೂ ಅಂಬವಾಡೇಕರ್ ಬೇಡ, ಇವುಗಳಿಂದ ಮುಂದೆ ನಿನಗೆ ಹಲವಾರು ಸಂಕಟಗಳನ್ನು ತಂದು ಕೊಡಬಹುದು, ಆದುದರಿಂದ  ಅಂಬೇಡ್ಕರ್ ಎಂಬ ನನ್ನ ಹೆಸರು ಸೇರಿಸಿಕೊ, ಇದನ್ನು ನೀನಗೆ  ನಾನು ಕೊಡುತ್ತಿರುವ ಉಡುಗೊರೆ ಎಂದುಕೋ”. ಎನ್ನುತ್ತಾರೆ.  ಭೀಮರಾವ “ಧನ್ಯವಾದಗಳು ಗುರುಗಳೇ ಇಂದಿನಿಂದ ನಿಮ್ಮ ಉಪನಾಮದೊಂದಿಗೆ ನಾನು ಮುಂದೆ ನಡೆಯುತ್ತೇನೆ ಧನ್ಯವಾದಗಳು “ಎನ್ನುತ್ತಾನೆ.

       ಭೀಮರಾವ ಅವರಿಗೆ ಎಂತಾ ಒಳ್ಳೆಯ ಗುರುಗಳು ಸಿಕ್ಕಿದ್ದರು ಎಂಬುದನ್ನು ನಾವೂ ತಿಳಿದುಕೊಳ್ಳಬಹುದು. ಈಗಲೂ ನಮ್ಮ ಹಳ್ಳಿಗಳಲ್ಲಿ ನಾವೂ ಯಾರೂ ಎಂದು ತಿಳಿದುಕೊಳ್ಳಲು ನಿಮ್ಮ ಅಡ್ಡೆಸರು ಏನೂ ಎಂದು ಕೇಳುತ್ತಾರೆ. ನಾವು ಹರಿಜನ, ಗಿರಿಜನ, ಹೀಗೆ ಹೇಳುವ ಅಡ್ಡೆಸರ ಮೇಲೆ ನಮ್ಮನ್ನು ಅಳೆಯುತ್ತಾರೆ.ಈ ಕಾರಣಕ್ಕೆನೇ ಅಂದು ಅಂಬೇಡ್ಕರ್ ಗುರುಗಳು, ಭೀಮರಾವ್ ಮುಂದೆ ಉನ್ನತ ಹುದ್ದೆಗೆಂದು ಪಟ್ಟಣಕ್ಕೆ ಹೋದಾಗ ಹೀಗೆ ಜಾತಿಯಿಂದ ತೊಂದ್ರೆಯಾಗದಿರಲಿ ಎಂಬ ಒಳ್ಳೆಯ ಉದ್ದೇಶದಿಂದ ತಮ್ಮ ಹೆಸರನ್ನೇ ಉಡುಗೊರೆಯಾಗಿ ಕೊಟ್ಟ ಶಿಕ್ಷಕರು ಅವರನ್ನು ನಾವು ಕೂಡ ಗೌರದಿಂದ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳೋಣ.

       ಇದೆಲ್ಲವನ್ನು ಗಮನಿಸಿದ ಪೆನ್ಸೇ ಗುರುಗಳು “ವಾವಾ ಕೊನೆಗೂ ನಿಮ್ಮ ಶಿಷ್ಯನ ಹೆಸರಿನೊಂದಿಗೆ ನಿಮ್ಮ ಹೆಸರನ್ನು ಸೇರಿಸಿಕೊಂಡು ಬಿಟ್ಟಿರಿ. ತುಂಬಾನೇ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಈ ಜಾಗದಲ್ಲಿ ನಾನು ಇದ್ದರೂ ಬಹುಷಃ ನಾನು ಹೀಗೆ ಮಾಡುತ್ತಿದ್ದೆ”ಎನ್ನುತ್ತಾರೆ. ಆಗ ಅಂಬೇಡ್ಕರ್ ಗುರುಗಳು “ಶಿಷ್ಯನಿಗೆ ರಕ್ಷಾ ಕವಚ ಕೊಡುವುದು ಪ್ರತಿಯೊಬ್ಬ ಗುರುಗಳ ಕರ್ತವ್ಯ, ಅಷ್ಟಕ್ಕೂ ವಿದ್ಯಾರ್ಥಿಗಳು ನಮಗೆ ಮಕ್ಕಳ ಸಮಾನರಲ್ಲವೇ.?,  ಕಡೆ ಪಕ್ಷ ಜಾತಿ ಅಡ್ಡಹೆಸರಿನಿಂದಾಗುವ ಅಪಮಾನವಾದರೂ ಭೀಮನಿಗೆ ಕಡಿಮೆಯಾಗುವಂತಾಗಲಿ ಎಂದು ನಾನು ಹೀಗೆ ಮಾಡಿದ್ದೇನೆ “ಎಂದು ಅಂಬೇಡ್ಕರ್ ಗುರುಗಳು ತಮ್ಮ ಉತ್ತಮ ಕೆಲಸವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ.

    ಇತ್ತ ಭೀಮಾಬಾಯಿಯವರು ಮನೆಯಲ್ಲಿ ಕೆಲಸ ಮಾಡುವಾಗ ಮತ್ತದೇ ತಲೆ ನೋವು ಶುರುವಾಗುತ್ತದೆ. ಅವತ್ತು ವೈದ್ಯರು ಹೇಳಿದ್ದ “ನಿನಗೆ ತುಂಬಾ ಗಂಭೀರ ಕಾಯಿಲೆ ಇದೆ.ಮತ್ತೂ ಪುನಾ, ಬಾಂಬೆಗೆ ಹೋಗಿ ತೋರಿಸಬೇಕು “ಎಂಬ ಮಾತುಗಳು ನೆನಪಾಗುತ್ತವೆ. ಯೋಚಿಸುತ್ತಾರೆ. ಪತಿಗೆ ಹೇಳಿದರೆ ಹೇಗೆ..?  ಅಯ್ಯೋ ಬೇಡ ಅವರು ಗಾಬರಿಯಾಗುತ್ತಾರೆ..? ಇವಾಗ ತಾನೇ ಕೆಲಸಕ್ಕೆ ಹೋಗುತ್ತಿದ್ದಾರೆ.ಎಂದೂ  ಅಕಸ್ಮಾತ್  ಮತ್ತೊಮ್ಮೆ ಕಾಯಿಲೆ ಜಾಸ್ತಿ ಆದಾಗ ಎಲ್ಲರಿಗೂ ಗೊತ್ತಾದ್ರೆ, ಇನ್ನೂ ಖರ್ಚು ಜಾಸ್ತಿ ಆದ್ರೆ ಹೇಗೆ..? ‘ ಹೀಗೆ ಒಬ್ಬರೇ ಮಾತಾಡಿಕೊಂಡು ಚಿಂತೆ ಮಾಡುತ್ತಿರುವಾಗ ಮಕ್ಕಳು ಅಲ್ಲಿಗೆ ಬರುತ್ತಾರೆ. ಮತ್ತೂ ಭೀಮರಾವ “ಅಮ್ಮ ಏನೋ ಹೇಳಿದಂಗೆ ಇತ್ತು. “ಎನ್ನುತ್ತಾನೆ.  ಆದ್ರೆ ಆ ತಾಯಿ ಹೇಳೋದಿಲ್ಲ, ಇಷ್ಟರಲ್ಲೇ ಆನಂದ್ “ಅಮ್ಮ  ನಾವೇ ನಿಮಗೊಂದು ವಿಷಯ ಹೇಳುತ್ತೇವೆ, ಇವತ್ತಿನಿಂದ ಭೀಮನ ಹೆಸರು ಭೀಮರಾವ್ ಅಂಬೇಡ್ಕರ್ ಎಂದು ಬದಲಾಗಿದೆ “ಎನ್ನುತ್ತಾನೆ. ಮತ್ತೂ ಭೀಮರಾವ “ಅಮ್ಮ ಅಂಬೇಡ್ಕರ್ ಗುರುಗಳೇ ತಮ್ಮ ಉಪನಾಮವನ್ನು  ಖುಷಿಯಿಂದ ನನಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ, ಇದರಿಂದ ಮುಂದೆ ನಾನು ಹಲವಾರು ಸಂಕಷ್ಟಗಳಿಂದ ಪರಾಗಬಹುದಂತೆ “ಎನ್ನುತ್ತಾನೆ. ಆಗ ಆನಂದ್”ಅಷ್ಟೇ ಅಲ್ಲ,ನನ್ನ ಉಪನಾಮ ಭೀಮನಿಗೆ ಕೊಟ್ಟಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರೆಂದು” ಹೇಳುತ್ತಾನೆ.

ಆಗ ಸಂತೋಷಗೊಂಡ ಭೀಮಾಬಾಯಿಯವರು “ಭೀಮಾ ಇದು ಅಂಬೇಡ್ಕರ್ ಗುರುಗಳ ದೊಡ್ಡತನ, ನೀನು ಯಾವತ್ತೂ ಅವರನ್ನು ಮರೆಯಬೇಡ”. ಮತ್ತೂ ಇವತ್ತೂ ಅಪ್ಪ ಬರುತ್ತಾರಲ್ಲ ಅವರಿಗೂ ಈ ವಿಷಯ ಹೇಳಿ ಅವರೂ ತುಂಬಾ ಖುಷಿ ಪಡುತ್ತಾರೆ”ಎಂದು ಹೇಳಿ ಮಕ್ಕಳನ್ನು ಸ್ವಲ್ಪ ಹೊತ್ತು ಆಟ ಆಡಲು ಕಳಿಸುತ್ತಾರೆ.

           ರಾಮಜೀಯವರು ಊರಿಗೆ ಬಂದಿದ್ದಾರೆ.  ಮತ್ತೂ  ರಾಮಜೀಯವರಿಗೆ ಕ್ರಾಂತಿಕಾರಿಗಳ ಬಗ್ಗೆ  ಮಾಲೀಕ ಹೇಳಿದ ಮಾತುಗಳನ್ನು ನೆನಪು ಮಾಡಿಕೊಳ್ಳುತ್ತ, ನಾನು ಏನೂ ತಪ್ಪು ಮಾಡಿರುವುದಿಲ್ಲ.  ಸೈನಿಕಧರ್ಮವನ್ನು ಪಾಲಿಸಿದಿನಿ ಅಷ್ಟೇ. ಹಾಗಾದ್ರೆ ಸೈನಿಕ ಧರ್ಮ ಅಂದ್ರೇನು..? ! ಇವತ್ತಿನವರೆಗೂ ಇಂತಹ ಸಂದರ್ಭಗಳು ಬಂದಿಲ್ಲ. ಇವತ್ತು ಅವರೂ ಬಂದಾಗಿಂದ ನನ್ನ ಮನಸಲ್ಲಿ ಒಂಥರಾ ಗೊಂದಲ ಆಗುತ್ತಿದೆ. ಇವತ್ತಿನ ತನಕ ನನ್ನ ಕೆಲಸದ ಬಗ್ಗೆ ಹೆಮ್ಮೆ ಇತ್ತು. ಆದ್ರೆ ಈಗ ಮುಂದಿನ ದಿನಗಳನ್ನು ಹೇಗೆ ಎದುರಿಸೋದು ಎಂಬುದು ಗೊತ್ತಾಗುತ್ತಿಲ್ಲ. ಹೀಗೆ ಚಿಂತಿಸುತ್ತ ಮರದ ಕೆಳಗೆ  ಕುಳಿತಿರುವಾಗ ಭೀಮ, ಆನಂದ್ ಹಾಗೂ ಬಾಲಾ ಅಲ್ಲಿಗೆ ಬರುತ್ತಾರೆ. ಮತ್ತೂ ಅಂಬೇಡ್ಕರ್ ಗುರುಗಳು ಕೊಟ್ಟಿರುವ ಅಡ್ಡಹೆಸರಿನ ಬಗ್ಗೆ ಹೇಳುತ್ತಾರೆ.ರಾಮಜೀಯವರು ಖುಷಿಯಾಗುತ್ತಾರೆ. ಆದ್ರೆ ಅವರು ತಮ್ಮದೇ ಆದ  ಚಿಂತೆಯಲ್ಲಿ ಮುಳುಗಿದ್ದಾರೆ. ಹೀಗಾಗಿ ಮಕ್ಕಳಿಗೆ “ಹೋಗಿ ನೀವೂ ಆಟ ಆಡಿಕೊಳ್ಳಿ”. ಎನ್ನುತ್ತಾರೆ. ಆದರೂ ಭೀಮನಿಗೆ ತಮ್ಮ ತಂದೆ ಏನೋ ಚಿಂತೆ ಮಾಡುತ್ತಿದ್ದಾರೆ ಅನ್ನಿಸಿ, ಮರಳಿ ಬಂದು  ತಂದೆಯ ಪಕ್ಕ ಕುಳಿತು “ಏನೋ ಆಗಿದೆ ಅಪ್ಪ ನೀವೂ ಹೇಳುತ್ತಿಲ್ಲ..?  ಅಮ್ಮನು ಏನೂ ಹೇಳುತ್ತಿಲ್ಲ..?  ಏಕೆ ಹೇಳಿ? ” ಎಂದು  ಕೇಳುತ್ತಾನೆ. ಆಗ ರಾಮಜೀಯವರು ದೇಶದ  ಇಡೀ ಜನರು ಕಂಪನಿ(ಬ್ರಿಟಿಷ್) ಸರಕಾರದ ವಿರುದ್ಧ ತಿರುಗಿ ಬಿದ್ದಿದೆ ಹೀಗಾಗಿ ನಾನು ಬ್ರಿಟಿಷ್ ಸೇನೆಯಲ್ಲಿ ಸೇವೆ ಮಾಡಿದ್ದ ಕಾರಣಕ್ಕೆ ನನ್ನ ವಿರುದ್ಧ ತಿರುಗಿ ಬಿದ್ದರೆ ಹೇಗೆ..? ಎಂದು ಭೀಮನಿಗೆ ಹೇಳುತ್ತಾರೆ.

ಆಗ ಭೀಮ”ಅಪ್ಪ ನೀವೂ ನಮ್ಮ ಮನೆ ನಡೆಸೋದಕ್ಕೆ ಕೆಲಸಕ್ಕೆ ಹೋಗಿದ್ದಿರಿ ಮತ್ತೂ ಪೂರ್ಣ ಕೆಲಸ ಮಾಡಿದ್ದೀರಿ?  ಹಾಗೂ ಏನೂ ತಪ್ಪು ಮಾಡಿರುವುದಿಲ್ಲ. ಅದೂ ಅಲ್ಲದೆ, ಈ ಸಮಾಜ ನಿಮಗೆ ಕೆಲಸ ಕೊಡದ ಕಾರಣ ನೀವೂ ಬ್ರಿಟಿಷ್ ಕಂಪನಿಯಲ್ಲಿ ಕೆಲಸ ಮಾಡಿದ್ದೀರಿ, ಜ್ಯೋತಿಬಾ ಪುಲೆಯವರ ಬಗ್ಗೆ ಹೇಳುವಾಗ ಅವರೂ ಹೇಳಿದ್ದನ್ನು  ನೆನಪಿಸಿಕೊಳ್ಳಿ “ಉದ್ದೇಶ ಸರಿ ಇದ್ದರೆ ಯಾವ ಕೆಲಸ ಮಾಡಿದರೂ ತಪ್ಪಿಲ್ಲ’,  ಅಂತಾ , ಅಪ್ಪ ನೀವೂ ಚಿಂತಿಸಬೇಡಿ ನೀವೂ ನಿಮ್ಮ ಧರ್ಮ ನಿಬಾಯಿಸಿದ್ದೀರಿ ಅಷ್ಟೇ “. ಎಂದು ಅರ್ಥ ಮಾಡಿಸುತ್ತಾನೆ.

ರಾಮಜೀ ಯವರು ತುಂಬಾ ಖುಷಿಯಾಗುತ್ತಾರೆ. ಮತ್ತೂ ಮಗನಿಗೆ ಹೇಳುತ್ತಾರೆ “ಭೀಮಾ  ನೀನು ನಿಜಕ್ಕೂ ದೊಡ್ಡವನಾಗಿ ಬಿಟ್ಟೆ, ಎಷ್ಟು ಸುಲಭವಾಗಿ ಅರ್ಥ ಮಾಡಿಸಿಬಿಟ್ಟೆ. ಈಗ ಮನಸ್ಸಿಗೆ ಸಮಾಧಾನ ಆಯಿತು. ಆದರೂ ಒಂದು  ಅವಕಾಶ ಸಿಕ್ಕರೆ ನಾನು ಒಂದೇ ಮಾತರಂ ಅಂತಾ ಹೇಳಿ ಈ ದೇಶಕ್ಕಾಗಿ ಮತ್ತೂ ದೇಶದ ಜನರಿಗಾಗಿ  ಹೋರಾಟ ಮಾಡುತ್ತೇನೆ. ನಮ್ಮ ದೇಶ ಬ್ರಿಟಿಷರ ದತ್ತು ಅಲ್ಲ”. ಹೀಗೆ ಹೇಳುವಾಗ ಭೀಮರಾವ “ಅಪ್ಪ ಹಾಗಾದರೆ ಈ ದೇಶ ಯಾರದು ಅಪ್ಪ?  “ಕೇಳುತ್ತಾನೆ.

ರಾಮಜೀ “ಈ ದೇಶ ನಮ್ಮೆಲ್ಲರದು “ತಂದೆಯ ಈ ಮಾತು ಕೇಳಿದ ಭೀಮರಾವ “ಈ ದೇಶ ನಮ್ಮೆಲ್ಲರದು ಅಂದ ಮೇಲೆ ಎಲ್ಲರೂ ಸಮಾನತೆಯಿಂದ ಶಿಕ್ಷಣ ಕಲಿಯಲು ಆಗುತ್ತಿಲ್ಲ ಏಕೆ..? ಎಲ್ಲರೂ ಸಮಾನತೆಯಿಂದ, ಕೆರೆ ಕಟ್ಟೆ ಬಾವಿಗಳಿಂದ ನೀರು ಸೇದಲು ಬಿಡುವುದಿಲ್ಲ ಏಕೆ..?, ಸಾಮೂಹಿಕ ಭೋಜನ ಏಕೆ ಮಾಡಲು ಬಿಡುವುದಿಲ್ಲ..? ಕ್ರಾಂತಿಕಾರಿಗಳು ಈ ಕೆಲಸ ಕೂಡ ಮಾಡಬೇಕು ಅಲ್ವಾ..?  ಈಗ  ತಂದೆ ರಾಮಜೀ ಸಕ್ಪಾಲ್ರು ಹೇಳುತ್ತಾರೆ. ಇಲ್ಲಾ ಭೀಮಾ ಅವರೆಲ್ಲ ಈಗ ದೇಶದ ಸ್ವತಂತ್ರಕ್ಕಾಗಿ ಹೋರಾಡುತ್ತಿದ್ದಾರೆ”.ಎಂದಾಗ ಭೀಮರಾವ “ಇಲ್ಲ ಅಪ್ಪ ನಾನು ದೊಡ್ಡವನಾದ ಮೇಲೆ ದೇಶದ ಸ್ವತಂತ್ರಕ್ಕಾಗಿ ಹೋರಾಡುವುದರ ಜೊತೆ,  ಜೊತೆಗೆ, ಜನರ ಸ್ವತಂತ್ರಕ್ಕಾಗಿಯೂ ಹೋರಾಟ ಮಾಡುತ್ತೇನೆ”.ಹೀಗೆ  ಹೇಳಿ ತನ್ನ ಅಣ್ಣಂದಿರ ಜೊತೆಗೆ ಆಡಲು ಹೋಗುತ್ತಾನೆ.

        ಇದೆ ಸಮಯಕ್ಕೆ  ಶೇಡಜಿ  ಮಗ ದ್ರುವ ಕೂಡ ಆನಂದ್ ಹಾಗೂ ಬಲರಾಮವರೊಂದಿಗೆ ಆಟ ಆಡುತ್ತಿರುತ್ತಾನೆ ಮತ್ತೂ ಆತ ಹೇಳುತ್ತಾನೆ. “ನನ್ನ ಕೈಯಲ್ಲಿ ಕಲ್ಲು ಇದ್ದರೆ ಈ ಊರಿನ ಜನರೆಲ್ಲಾ ಹೆದರುತ್ತಾರೆ” ಹೀಗೆ ಹೇಳಿ ಕಲ್ಲಿನಿಂದ ಗುರಿ ಇಟ್ತು ಮರದೆಡೆ ಒಡೆದು ಗುರಿ ಗೆದ್ದೇ ಎಂದು ಖುಷಿ ಪಡುತ್ತಾನೆ.ಆಗ ಆನಂದ “ಅದಿರಲಿ ಬನ್ನಿ ಎಲ್ಲರೂ ಗಿಲ್ಲಿದಾಂಡ(ಚಿನಪಣಿ) ಆಟ ಆಡೋಣ”ಎಂದೂ  ಆಡಲು ಆನಂದ ಕರೆಯುತ್ತಾನೆ “ಕಲ್ಲು ಬಿಟ್ಟು ಗಿಲ್ಲಿ ಹಿಡಿ” ಎನ್ನುತ್ತಾನೆ. ಇದೇ ಸಮಯಕ್ಕೆ ಗೆಳೆಯ ದ್ರುವನಿಗೆ ಎಕಾಏಕಿ ತಲೆ ಸುತ್ತು ಬಂದು ಬೀಳುತ್ತಾನೆ. ಆಗ ತಕ್ಷಣ ಆನಂದ್ ಹಾಗೂ ಬಲರಾಮ್ ನಾವು ಇವನನ್ನು ಮುಟ್ಟುವ ಹಾಗಿಲ್ಲ, ಹಾಗೂ ಇಲ್ಲಿ ಬೇರೆ ಯಾವ ಜನಗಳು ಕೂಡ ಇಲ್ಲ..?  ವೈದ್ಯರನ್ನು ಕರೆದುಕೊಂಡು ಬರುವುದು ತಡವಾಗುತ್ತದೆ. ಏನೂ ಮಾಡಬೇಕು..?  ಎಂದು ಯೋಚಿಸುತ್ತಿರುವಾಗ ಭೀಮರಾವ “ಆಮೇಲೆ ಬೇಕಾದ್ರೆ ಅವರೂ ಶುದ್ದಿ ಮಾಡಿಕೊಂಡ್ರೆ ಮಾಡಕೊಳ್ಳಲಿ, ಈಗ ತಡ ಮಾಡದೇ ಗೆಳೆಯ  ದ್ರುವನನ್ನು ಪಂಡಿತರ ಹತ್ತಿರ ಕರೆದುಕೊಂಡು ಹೋಗೋಣ ಬನ್ನಿ” ಎನ್ನುತ್ತಾನೆ. ಮತ್ತೂ  ಹತ್ತಿರದಲ್ಲಿದ್ದ ಎತ್ತಿನ  ಬಂಡಿಯೊಂದರ ಸಹಾಯದಿಂದ ಆತನನ್ನು ಎಲ್ಲರೂ ಸೇರಿ ಪಂಡಿತನ ಮನೆಗೆ ಕರೆದೊಯ್ದಾಗ ಎಂದಿನಂತೆ ಆತನ ಹೆಂಡತಿ ಅವರು ಇಲ್ಲ ಹೋಗಿ ಎನ್ನುತ್ತಾಳೆ. ಮತ್ತೂ ಬೇರೆ ವೈದ್ಯರು ಇದ್ದರೆ ಹೇಳಿ ಎಂದು ಭೀಮ  ಕೇಳಿದಾಗ,ಆ ಪಂಡಿತನ ಹೆಂಡತಿ “ಇಲ್ಲಿಯೇ ಸ್ವಲ್ಪ ದೂರದಲ್ಲಿ ಗೋದೂಳಿ ರಸ್ತೆ ಇದೇ ಅದರ ಪಕ್ಕದಲ್ಲಿ ಒಂದು ಕಾಲುವೆ ಇದೇ ಅಲ್ಲಿ  ಒಬ್ಬ ವೈದ್ಯರು ಇದ್ದಾರೆ ಅಲ್ಲಿಗೆ  ಹೋಗಿ “ಎಂದು ಹೇಳುತ್ತಾಳೆ. ಸಹೋದರರು ದ್ರುವನನ್ನು ಅಲ್ಲಿಗೆ ಕರೆದುಕೊಂಡು ಅವಸರವಾಗಿ ಹೋಗುತ್ತಾರೆ.

      ರಾಮಜೀ ಸಕ್ಪಾಲ್ ರು ಮನೆಗೆ ಬರುತ್ತಾರೆ. ಮತ್ತೂ ಬಡತನ ಪರಿಸ್ಥಿತಿ ಅವರನ್ನು ಈಗ ಕಿತ್ತು ತಿನ್ನುತ್ತಿದೆ. ಆದುದರಿಂದ ಈ ಸಲ ಅವರು ಚಹಾ ಕುಡಿಯುವದನ್ನು ಬಿಟ್ಟರೆ ಇದೂ ಒಂದು ತಿಂಗಳು ಹೇಗೋ ಸಂಬಾಳಿಸಿಕೊಂಡು ಹೋಗಬಹುದು ಎಂದು ತಮ್ಮ ಹತ್ತಿರ ಇದ್ದ ಕೆಲವೇ ಪೈಸಾಗಳನ್ನು ಮುಟ್ಟಿಕೊಂಡು ಹೇಳಿಕೊಳ್ಳುತ್ತಾರೆ. ಮತ್ತೂ ರಾಮಜೀಯವರ ಈ ಪರಿಸ್ಥಿತಿಯನ್ನೂ ಗಮನಿಸಿರಬಹುದು ಭೀಮಾಬಾಯಿಯವರು ಕೂಡ ತನ್ನ ಕಾಯಿಲೆ ಬಗ್ಗೆ ಹೇಳಬಾರದು ಅಂದುಕೊಳ್ಳುತ್ತಾರೆ.

     ಇತ್ತ ಭೀಮರಾವ್, ಆನಂದ ಹಾಗೂ ಬಲರಾಮ್ ಎಲ್ಲರೂ ಆ ಪಂಡಿತನ ಹೆಂಡತಿ ಹೇಳಿದ ವಿಳಾಸಗೆ ಹೋಗಿ ಭೀಮರಾವ್ “ವೈದ್ಯರೇ, ವೈದ್ಯೆರೆ ಎಂದು ಕೂಗುತ್ತಾನೆ. ಈಗಾಗಲೇ ಒಬ್ಬರ ತಪಾಸಣೆಯಲ್ಲಿ ತೊಡಗಿದ್ದ ಆ ಮಹಿಳಾ ವೈದ್ಯರು ಬಂದಾಗ ಪ್ರೇಕ್ಷಕರು ‘ಹೋ ಭೀಮಾಬಾಯಿಯವರನ್ನು ನೋಡಿದ ವೈದ್ಯರು ಇವರೇ’,  ಎಂದುಕೊಳ್ಳುತ್ತಿರುವಾಗಲೇ, ಆ ವೈದ್ಯೆ “ಆಯಿತು ಬನ್ನಿ ಎಂದು ಹೇಳಿ ದ್ರುವನನ್ನು ಪರೀಕ್ಷೆ ಮಾಡಿ ” ಇವನಿಗೆ  ಸ್ವಲ್ಪ ಹೊತ್ತಾದ ಮೇಲೆ  ಪ್ರಜ್ಞೆ ಬರುತ್ತದೆ ” ಎಂದು ಹೇಳುತ್ತಾರೆ. ಆಗ “ಭೀಮ ಇವನಿಗೆ ಏನಾಗಿದೆ ಎಂದು ಕೇಳುತ್ತಾನೆ “ಬಹುಷಃ ಎರಡು ಮೂರು ದಿನಗಳಿಂದ ಊಟ ಮಾಡಿಲ್ಲ ಅನ್ನಿಸುತ್ತದೆ. ಅದಕ್ಕೆ ಹೀಗಾಗಿದೆ. ಎಚ್ಚರ ಆದ್ಮೇಲೆ ಎನಾದರೂ ತಿನ್ನೋಕೆ ಕೊಡಿ ಎಂದು ಹೇಳುತ್ತಾರೆ. ಇದೇ ಸಮಯಕ್ಕೆ ಒಬ್ಬಾತ ಅಲ್ಲಿಗೆ ಬರುತ್ತಾನೆ.ಆತ ಭೀಮರಾವ ಹಾಗೂ ಸಹೋದರರನ್ನ ನೋಡಿ ಮುಖ ಗಂಟಿಕ್ಕಿ ದೂರ ಸರಿದು ನಿಲ್ಲುತ್ತಾ,  ಆತ ತಂದಿದ್ದ ಲಾಡು ತೋರಿಸಿ,ಅಲ್ಲಿನ ಬುದ್ದಿವಂತ ಮಹಿಳಾ  ವೈದ್ಯೆರಿಗೆ “ನಿಮ್ಮ ಕೈಗುಣ ತುಂಬಾ ಚನ್ನಾಗಿದೆ, ನನ್ನ ಹೊಸ ರೋಗದ ಜೊತೆಗೆ ಹಳೆ ರೋಗವೂ ವಾಸಿಯಾಯಿತು. ಹಾಗಾಗಿ ಖುಷಿಯಿಂದ  ಈ ಲಾಡು ತಂದಿದೀನಿ  ತಗೊಳ್ಳಿ ತಿನ್ನಿ “ಎನ್ನುತ್ತಾನೆ.  ಆಗ ಆ ಮಹಿಳಾ ವೈದ್ಯರು ಹಾಗಾದ್ರೆ ಖುಷಿನ  ಎಲ್ಲರ ಜೊತೆಗೂ ಹಂಚಿಕೊಳ್ಳಿ. ಲಾಡುನ  ಮೊದಲು ಆ ಮಕ್ಕಳಿಗೆ ಕೊಡಿ ಆಮೇಲೆ ನನಗೆ ಕೊಡಿ “.ಎನ್ನುತ್ತಾರೆ.ಆಗ ಆತ “ಅದೇಗೆ ಸಾಧ್ಯ, ಇವರು  ಸಕ್ಪಾಲ್ ನ ಮಕ್ಕಳು, ಇವರ ಜಾತಿ ನನಗೆ ಗೊತ್ತು. ಇವರಿಗೆಗೆ ಕೊಡಲಿ “ಎನ್ನುತ್ತಾನೆ. ಆಗ ವೈದ್ಯರು ಮಾತು ಮುಂದುವರೆಸಿ “ನೀವೂ ಹೋದ ಮೇಲೆ ನಾನು ಮಕ್ಕಳಿಗೆ ಆ ಲಾಡುನ ಕೊಡಬಹುದಿತ್ತು. ಆದ್ರೆ ನಾನು ವೈದ್ಯೆ ಹಾಗಾಗಿ ನಿಮ್ಮನ್ನು ಪರೀಕ್ಷೆ ಮಾಡಿದೆನು. ಈಗ ನೀವೂ ಇನ್ನೊಂದು ಭಯಂಕರ ರೋಗದಿಂದ ನರಳುತ್ತಿದ್ದಿರಿ” ಎನ್ನುತ್ತಾರೆ. ಆಗಾತ “ನನಗೆ ಇನ್ನೊಂದು ರೋಗ ಎಂದು ಗಾಬರಿಯಾಗುತ್ತಾನೆ. ಆಗ ವೈದ್ಯೆರು “ಅದೂ ಅಸ್ಪೃಶ್ಯತೆಯ ರೋಗ,  ಇದೂ ಭಯಾನಕ ಅಸ್ಪೃಶ್ಯತೆಯ ರೋಗ ಮತ್ತೂ ಇದಕ್ಕೆ ಚಿಕಿತ್ಸೆ ಜಗತ್ತಿನಲ್ಲಿ ಎಲ್ಲೂ ಸಿಗೋದಿಲ್ಲ.ತಗೊಳ್ಳಿ ನಿಮ್ಮ ಲಾಡು ಹೋಗ್ತಾ ಇರ್ರಿ, ಹೊರಡಿ ಹೊರಡಿ “ಎಂದು ಬಯ್ದು ಕಳಿಸುತ್ತಾರೆ.

        ನೋಡಿ ಈ ವೈದ್ಯೆ  ಎಂತಾ ವಿಚಾರವಂತೆ.ಇಂತಹ ವೈದ್ಯೆರನ್ನು ನಾವು ಅದೆಲ್ಲಿ ಕಾಣಲು ಸಾಧ್ಯ ನೀವೇ ಹೇಳಿ?. ವೈದ್ಯರು ಕೂಡ ಸಾಮಾಜಿಕ ಸಮಾನತೆಯ ಪಾಠ ಹೇಳಿ ಕೊಡಬಲ್ಲರು ಎಂಬುದನ್ನು ನಮ್ಮ ಪ್ರೇಕ್ಷಕರು ಇವತ್ತಿನ ಈ ಎಪಿಸೋಡ್ ನಲ್ಲಿ ತಿಳಿದು ಕೊಂಡರು. ಅದಿರಲಿ ವೈದ್ಯೆರ ಈ ಮಾತುಗಳಿಂದ ತೆಪ್ಪಗಾದ ಆ ಮನುವಾದಿ,ಮತ್ತೂ ಜಾತಿವಾದಿ ಮನುಷ್ಯ ಲಾಡು ತೆಗೆದುಕೊಂಡು ಅಲ್ಲಿಂದ ಹೊರಡುತ್ತಾನೆ. ಏಕೆಂದರೆ ಆತನೊಬ್ಬ ಅಸ್ಪೃಶ್ಯತಾ ರೋಗಿ, ತನ್ನಲ್ಲಿರುವ ಈ ಭಯಂಕರ ಕಾಯಿಲೆಗೆ ಚಿಕಿತ್ಸೆ ಇಲ್ಲ ಎಂಬುದು ಅವನಿಗೂ ಗೊತ್ತಾಗಿರಬೇಕು.

 ಇಲ್ಲಿ ಒಂದು ವಿಚಾರ ನೆನಪಿಗೆ ಬರುತ್ತದೆ. ಮಾನಸಿಕ ರೋಗಿಗೆ ಹೇಗೆ ಧಾರವಾಡ ಹಾಗೂ ಬೆಂಗಳೂರಿನ ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆಯೋ ಹಾಗೆನೆ ಈ ಅಸ್ಪೃಶ್ಯತಾ ರೋಗಿಗಳಿಗೆ ಕೂಡ ಒಂದು ಆಸ್ಪತ್ರೆ ತಯಾರು ಮಾಡಿ ಅಲ್ಲಿ ಹಾಕುವ ಕಾನೂನು ಜಾರಿಗೆ ತಂದ್ರೆ ನಮ್ಮ ದೇಶದಲ್ಲಿ ಹೆಚ್ಚಿನ ಜನರು ಆ ಆಸ್ಪತ್ರೆಗಳಲ್ಲಿಯೇ ಕೊಳೆಯಬೇಕಾಗುತ್ತದೆ. ಅಲ್ವಾ..?  ಏನಂತೀರಿ..?

       ಆ ಒಳ್ಳೆಯ ವೈದ್ಯೆರು ಮಕ್ಕಳೇ ನೀವೂ ಬೇಸರ ಮಾಡಿಕೊಳ್ಳಬೇಡಿ ಎನ್ನುತ್ತಾರೆ.ಆಗ ಬಲರಾಮ್ “ಇಲ್ಲ ವೈದ್ಯೆರೆ ನಮಗೆ ಇದೆಲ್ಲ ರೂಡಿ ಆಗಿದೆ “ಎಂದು ಹೇಳುತ್ತಾನೆ. ನಿಜಕ್ಕೂ ಇದಕ್ಕಿಂತ ದುಃಖ ಇನ್ನೊಂದಿಲ್ಲ ಅಲ್ವಾ..?   ಇದೇ ಸಮಯಕ್ಕೆ ನಾವಿನ್ನು ಬರುತ್ತೇವೆ ಎಂದು ಹೊರಡುವ ಸಮಯಕ್ಕೆ, ಭೀಮರಾವ್ “ವೈದ್ಯರೇ ನಮ್ಮ ಅಮ್ಮನಿಗೂ ಯಾವಾಗಲೂ ತಲೆ ನೀವೂ ಬರುತ್ತದೆ, ಅವರಿಗೂ ಏನಾದ್ರೂ ಔಷದಿ ಕೊಡಿ ” ಎನ್ನುತ್ತಾನೆ.

ಆಗ ಬಲರಾಮ್ “ಭೀಮ ರೋಗಿಯನ್ನೂ ನೋಡದೆ, ವೈದ್ಯರು ಅದೇಗೆ ಔಷದಿ ಕೊಡುತ್ತಾರೆ.ಎನ್ನುತ್ತಾನೆ. ಅವಾಗ ಆ ವೈದ್ಯೆರಿಗೆ ಇವರು ಭೀಮಾಬಾಯಿಯ ಮಕ್ಕಳೇ ಇರಬೇಕು. ಆಕೆ ಇವರ ಮುಂದೆ ತನ್ನ ರೋಗದ ವಿಷಯ ಹೇಳಿಲ್ಲ. ಹಾಗಾಗಿ ನಾನು ಇವರ ಮುಂದೆ ಹೇಳಬೇಕು.ಇಲ್ಲದಿದ್ದರೆ ಪಾಪ ಆಕೆ ಸತ್ತೇ ಹೋಗುತ್ತಾಳೆ ಎಂದು ಮನದಲ್ಲಿ ಯೋಚಿಸುತ್ತಾರೆ.

     ಇತ್ತ ಮನೆಯಲ್ಲಿ ರಾಮಜೀಯವರನ್ನು ಭೀಮಾಬಾಯಿ ಹಾಗೆ ದಿಟ್ಟಿಸಿ ನೋಡುತ್ತಾ, ತಮ್ಮ ಮನದಲ್ಲಿರುವ ದುಃಖವನ್ನು ಹಾಗೆ ನುಂಗಿಕೊಳ್ಳುತ್ತಾ, ನನ್ನ ಈ ಕಾಯಿಲೆ ಮನೆಯಲ್ಲಿ ಯಾರಿಗೂ ಹೇಳುವುದೇ ಬೇಡ ಎಂದುಕೊಳ್ಳುತ್ತಾರೆ. ರಾಮಜೀ ಸಕ್ಪಾಲ್ ರು ಈಗ ಹೆಂಡತಿ ಬಳಿ ಬಂದು “ಏಕೆ ನನ್ನನ್ನು ಹಾಗೆ ದಿಟ್ಟಿಸಿ ನೋಡುತ್ತಿಯಾ ಭೀಮಾಬಾಯಿ..? ಎಂದು ಪ್ರಶ್ನೆ ಮಾಡುತ್ತಾರೆ.ಆಗ ಭೀಮಾಬಾಯಿಯವರು ಮಾತು ಮರೆಸುತ್ತ, ಇಲ್ಲಾರಿ ನೀವೂ ಎಷ್ಟು ಚನ್ನಾಗಿ ಸಂಸಾರ ನಿಭಾಯಿಸುತ್ತೀರಿ, ಚಹ ಕುಡಿಯುವುದನ್ನು ಬಿಡುತ್ತೀರಿ ನೀವು? ಎಂದು ತುಂಬಿದ ಕಣ್ಣುಗಳಿಂದ, ನಗುನಗುತ್ತಲೇ ಕೇಳುತ್ತಾರೆ. ಆಗ ರಾಮಜೀಯವರು “ನನ್ನ ಸಂಸಾರಕ್ಕಾಗಿ ನಾನು ಜೀವ ಕೊಡಲೂ ಸಹ ಸಿದ್ದ, ನಾನು ನಿನಗೆ ಗಂಡನಾಗಿ, ಮಕ್ಕಳಿಗೆ ತಂದೆಯಾಗಿ, ಮೀರಾಳಿಗೆ ಅಣ್ಣನಾಗಿ ಎಲ್ಲರನ್ನು ಚನ್ನಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ.ಈಗ ನನಗೆ ತುಂಬಾ ಹೊಟ್ಟೆ ಹಸಿಯುತ್ತಿದೆ ಊಟ ಕೊಡು  “ಎನ್ನುತ್ತಾ,  ಕೈ ತೊಳೆದುಕೊಂಡು ಬರಲು ಹೋಗುತ್ತಾರೆ. ಈಗ ಒತ್ತರಿಸಿ ಬರುತ್ತಿರುವ  ದುಃಖ್ಖವನ್ನು ತಡೆದುಕೊಳ್ಳುತ್ತಾ ಭೀಮಾಬಾಯಿಯವರು “ನಾನು ಕೂಡ ನಿಮಗೆ ಹೆಂಡತಿಯಾಗಿ, ಮಕ್ಕಳಿಗೆಲ್ಲ ತಾಯಿಯಾಗಿ, ನಿಮ್ಮ ಸಂತೋಷಕ್ಕಾಗಿ  ಸ್ವಲ್ಪ ದಿನಾ ನನ್ನ ಕಾಯಿಲೆ ಮುಚ್ಚಿ ಇಡುವುದರಲ್ಲಿ ತಪ್ಪಿಲ್ಲ ಎಂದು ತಮ್ಮಷ್ಟಕ್ಕೆ ತಾವೇ ಅಂದುಕೊಳ್ಳುತ್ತಾರೆ.

ನೋಡಿ ರಾಮಜೀ ಸಕ್ಪಾಲರು ಹಾಗೂ ಭೀಮಾಬಾಯಿಯವರದು ಅಂತಹ  ಬಡತನದಲ್ಲೂ ಎಂಥ ಹೊಂದಾಣಿಕೆ  ಜೀವನ.ಎಂದು ಪ್ರೇಕ್ಷಕರು ಈ ಸಂದರ್ಭದಲ್ಲಿ  ಅಂದುಕೊಳ್ಳುತ್ತಾರೆ. ಆದ್ರೆ ಕಾಯಿಲೆ ವಿಷಯ ಮುಚ್ಚಿ ಇಡಬಾರದಿತ್ತು.ಎಂದು ಮಾತಾಡಿಕೊಳ್ಳುತ್ತಾರೆ.

    ಈಗ ಆಸ್ಪತ್ರಯಲ್ಲಿರುವ ದ್ರುವ ಎದ್ದು ನಾನು ಈಗ  ಎಲ್ಲಿದಿನಿ. ಅದೇಗೆ ಇಲ್ಲಿ ಬಂದಿದ್ದೀನಿ ಎಂದು ದ್ರುವ ಕೇಳುತ್ತಿರುವಾಗ “ಭೀಮ ನಡೆದುದ್ದನ್ನು ಹೇಳಿ, ವೈದ್ಯರು ಹೇಳಿದರು ನೀನು ಏಕೆ ಎರಡು ದಿನಗಳಿಂದ ಊಟ ಮಾಡಿಲ್ಲ..? ಎಂದು ಭೀಮ ಕೇಳುತ್ತಾನೆ. ನಮ್ಮ ಸ್ನೇಹಿತನಾಗಿ ನಿಜ ಹೇಳು ಎನ್ನುತ್ತಾನೆ.

ಆಗ ಧ್ರುವ “ನಮ್ಮ ತಾಯಿ ತೀರಿ ಹೋದ ಮೇಲೆ ನಮ್ಮ ಅಪ್ಪ ಒಬ್ಬ ಹೆಂಗಸನ್ನು ಅಡುಗೆ ಮಾಡಲು ತಂದಿಟ್ಟುಕೊಂಡಿದ್ದ. ಅಪ್ಪಾ ಜೈಲಿಗೆ ಹೋದ ಮೇಲೆ ಅವಳು ಬಿಟ್ಟು ಹೋದಳು. ಸ್ವಲ್ಪ ದಿನ ಅಕ್ಕಪಕ್ಕದವರು ಊಟ ತಂದುಕೊಡುತ್ತಿದ್ದರು. ನಾನು ನಿಮ್ಮ ಜೊತೆ ಸೇರುತ್ತಿದ್ದೇನೆ ಎಂದು ಅವರು ಕೂಡ ಊಟ ಕೊಡುವುದನ್ನು ನಿಲ್ಲಿಸಿಬಿಟ್ಟರು. ತಿನ್ನೋಕೆ ಏನೂ ಇರಲಿಲ್ಲ ನನಗೆ ಅಡುಗೆ ಮಾಡೋಕೆ ಕೂಡ ಬರೋದಿಲ್ಲ ಹೀಗಾಗಿ ಉಪವಾಸ ಇರಬೇಕಾಯಿತು”. ಹೀಗೆ ದ್ರುವ ಹೇಳುತ್ತಾನೆ. ಆಗ ಭೀಮರಾವ್” ಧ್ರುವ ವಿಷಯವನ್ನು ಮುಚ್ಚಿಡಬಾರದು ಮುಚ್ಚಿಟ್ಟಷ್ಟು ಅದೂ ಗಂಭೀರವಾಗುತ್ತದೆ ಎಂದು ಆಗಾಗ ಅಪ್ಪ ಹೇಳುತ್ತಿರುತ್ತಾರೆ “ಎನ್ನುತ್ತಾನೆ. ಆಗ ಬಲರಾಮ್ ” ಧ್ರುವ ಯಾವುದೇ ಒಂದು ವಿಷಯವನ್ನು ನಮ್ಮನ್ನು ಪ್ರೀತಿಸುವವರ ಹತ್ತಿರ ಮುಚ್ಚಿಡಬಾರದು. ನೀನು ಈಗ ನಮ್ಮನ್ನು ಪ್ರೀತಿಸುತ್ತಿಯಲ್ಲ, ಹಾಗಾಗಿ ಇನ್ನು ಮುಂದೆ ಏನು ವಿಷಯವನ್ನು ಮುಚ್ಚಿಡಬೇಡ ಎನ್ನುತ್ತಾನೆ. ಆಗ ಧ್ರುವ ಆಯ್ತು ಬಾಲಣ್ಣ ನನ್ನ ಕ್ಷಮಿಸು ಎನ್ನುತ್ತಾನೆ. ಆಯ್ತು ಈಗ ಎಲ್ಲರೂ ಒಟ್ಟಿಗೆ ಏನಾದರು ತಿಂದುಕೊಂಡು ಹೋಗೋಣ ಎಂದು ಮಾತನಾಡಿಕೊಳ್ಳುತ್ತಾರೆ ಮತ್ತು ಅಲ್ಲಿಂದ ಹೊರಡಲು ಎದ್ದೇಳುತ್ತಾರೆ. ಅದೇ ಸಮಯಕ್ಕೆ ಆ ಮಹಿಳಾ ವೈದ್ಯರು” ಒಂದ್ನಿಮಿಷ ನೀವೆಲ್ಲರೂ ಆ ಭೀಮಬಾಯಿಯ ಮಕ್ಕಳಲ್ಲವೇ..? ಎಂದು ಪ್ರಶ್ನಿಸುತ್ತಾರೆ ಆಗ ಭೀಮ ಆನಂದ್,  ಬಲರಾಮ್ ಎಲ್ಲರೂ ವೈದ್ಯರ ಕಡೆ  ತಿರುಗಿ ನೋಡುತ್ತಾರೆ. ಅಲ್ಲಿಗೆ ಇವತ್ತಿನ ಧಾರವಾಹಿ ಮುಗಿಯುತ್ತದೆ.

        ಭೀಮಾಬಾಯಿ ಅವರಿಗೆ ಇಂತಹ ಗಂಭೀರ ಕಾಯಿಲೆ ಇರುವುದನ್ನು ವೈದ್ಯರು ಹೇಳುತ್ತಾರಾ..? ಹೇಗೆ..?  ಎಂಬುದನ್ನು ನಾವು ತಿಳಿಯೋಣ. 

…ಅಲ್ಲಿವರೆಗೂ

     … ಜೈಭೀಮ್.

        …ಮುಂದುವರೆಯುವುದು

-ಗಣಪತಿ ಚಲವಾದಿ(ಗಗೋಚ), ಬಿಎಂಟಿಸಿ ನಿರ್ವಾಹಕರು, ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತರು

ಇತ್ತೀಚಿನ ಸುದ್ದಿ