ಭೀಮ್ ಆರ್ಮಿ ಮುಖ್ಯಸ್ಥರ ಮೇಲಿನ ಗುಂಡಿನ ದಾಳಿ: ನಾಲ್ವರು ಆರೋಪಿಗಳು ಅಂದರ್
ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರ ಸಹಕಾರದೊಂದಿಗೆ ಹರಿಯಾಣ ವಿಶೇಷ ಕಾರ್ಯಪಡೆಯ ಅಂಬಾಲಾ ಘಟಕವು ಬಂಧಿಸಿದೆ.
ಅಂಬಾಲಾದ ಶಹಜಾದ್ಪುರ ಪ್ರದೇಶದ ಡಾಬಾ ಬಳಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಂಬಾಲಾ ಎಸ್ಟಿಎಫ್ ಘಟಕದ ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಅಮನ್ ಕುಮಾರ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಕಾಸ್, ಪ್ರಶಾಂತ್ ಮತ್ತು ಲೋವಿಶ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಯುಪಿಯ ಸಹರಾನ್ಪುರದವರು. ನಾಲ್ಕನೇ ಆರೋಪಿ ವಿಕಾಸ್ ಹರಿಯಾಣದ ಕರ್ನಾಲ್ ಮೂಲದವ ಎಂದು ತಿಳಿದುಬಂದಿದೆ.
ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಯುಪಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಂಧನದ ವೇಳೆ ಅವರ ಬಳಿ ಯಾವುದೇ ಆಯುಧ ಪತ್ತೆಯಾಗಿಲ್ಲ ಎಂದು ಡಿಎಸ್ಪಿ ಅಮನ್ ಕುಮಾರ್ ತಿಳಿಸಿದ್ದಾರೆ.
ಇನ್ನು ಈ ಪ್ರಕರಣ ಸಂಬಂಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ದೇವ್ಬಂದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತಮ್ಮ ಫಾರ್ಚುನರ್ ಕಾರಲ್ಲಿ ಚಂದ್ರಶೇಖರ್ ಅವರು ದೇವಬಂದ್ಗೆ ಹೋಗಿದ್ದರು. ಚಂದ್ರಶೇಖರ್ ತಲುಪಿದ ತಕ್ಷಣ, ಹರಿಯಾಣ ನೋಂದಣಿ ಸಂಖ್ಯೆಯ ಕಾರಲ್ಲಿ ಬಂದ ದುಷ್ಕರ್ಮಿಗಳು ಹಲವಾರು ಸುತ್ತು ಗುಂಡು ಹಾರಿಸಿದ್ದರು. ಆದರೆ ಅವುಗಳ ಪೈಕಿ ಒಂದು ಗುಂಡು ಮಾತ್ರ ಆಜಾದ್ ಹೊಟ್ಟೆ ಭಾಗಕ್ಕೆ ತಗುಲಿತ್ತು. ಕೃತ್ಯ ಎಸಗಿದ ಬಳಿಕ ವೇಗವಾಗಿ ವಾಹನ ಚಲಾಯಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಇತ್ತ ಗುಂಡಿನ ದಾಳಿಯಿಂದ ಗಾಯಗೊಂಡಿದ್ದ ಆಜಾದ್ ಅವರನ್ನು ಎಸ್ಬಿಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆಜಾದ್, ‘ನಾನು ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೇನೆ. ಆದರೆ ಆರೋಪಿಗಳು ಇನ್ನೂ ಮುಕ್ತವಾಗಿ ತಿರುಗುತ್ತಿದ್ದಾರೆ. ಅಧಿಕಾರದಲ್ಲಿರುವವರ ರಕ್ಷಣೆ ಇಲ್ಲದೆ ಇದು ಸಾಧ್ಯವಿಲ್ಲ. ಇದು ಸರ್ಕಾರದ ತೀವ್ರ ನಿರ್ಲಕ್ಷ್ಯ ಎಂದು ನಾನು ಭಾವಿಸುತ್ತೇನೆ. ಮುಖ್ಯಮಂತ್ರಿ ಅವರು ಒಂದು ಮಾತನ್ನೂ ಹೇಳಿಲ್ಲ, ಅವರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ’ ಎಂದು ಕಿಡಿಕಾರಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw