ಚುನಾವಣೆ ಮುನ್ನವೇ ಇಡಿ ದಾಳಿ: ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಮುಖ್ಯಸ್ಥರಿಂದ ಛತ್ತೀಸ್ ಗಢ ಸಿಎಂಗೆ 508 ಕೋಟಿ ಪಾವತಿ ಆಗಿದೆ ಎಂದ ಇಡಿ..!
ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಯುಎಇ ಮೂಲದ ಮಹಾದೇವ್ ಬೆಟ್ಟಿಂಗ್ ಅಪ್ಲಿಕೇಶನ್ ಪ್ರವರ್ತಕರಿಂದ 508 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದ ‘ಕ್ಯಾಶ್ ಕೊರಿಯರ್’ ಮಾಡಿದ ವ್ಯಕ್ತಿಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೇಳಿದೆ. ಅದರೆ ಛತ್ತೀಸ್ ಗಢ ಸರ್ಕಾರವು ಈ ಹೇಳಿಕೆಗಳನ್ನು ತಿರಸ್ಕರಿಸಿದ್ದು, ರಾಜ್ಯ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಏಜೆನ್ಸಿಯನ್ನು “ಅಸ್ತ್ರ” ವಾಗಿ ಬಳಸಲಾಗುತ್ತಿದೆ ಎಂದು ಆರೋಪಿಸಿದೆ.
ಛತ್ತೀಸ್ ಗಢದಲ್ಲಿ ನವೆಂಬರ್ 7 ಮತ್ತು 17 ರಂದು ನಡೆಯುವ ಚುನಾವಣೆಗೆ ಕೆಲವೇ ದಿನಗಳ ಮೊದಲು ಜಾರಿ ನಿರ್ದೇಶನಾಲಯದ ಹೇಳಿಕೆ ಬಂದಿದೆ.
ಛತ್ತೀಸ್ ಗಢದಲ್ಲಿ ಆಡಳಿತಾರೂಢ ಕಾಂಗ್ರೆಸ್ ನ ಚುನಾವಣಾ ವೆಚ್ಚಗಳಿಗಾಗಿ ದೊಡ್ಡ ಪ್ರಮಾಣದ ಹಣವನ್ನು ತಲುಪಿಸಲು ಯುಎಇಯಿಂದ ಕಳುಹಿಸಲಾದ ‘ಕ್ಯಾಶ್ ಕೊರಿಯರ್’ ಅಸಿಮ್ ದಾಸ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಇಡಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಅಸೀಮ್ ಅವರಿಂದ ಕಾರು ಮತ್ತು ನಿವಾಸದಿಂದ 5.39 ಕೋಟಿ ರೂ.ಗಳ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಅಸಿಮ್ ದಾಸ್ ಅವರ ವಿಚಾರಣೆಯಿಂದ ಮತ್ತು ಆತನಿಂದ ವಶಪಡಿಸಿಕೊಳ್ಳಲಾದ ಫೋನ್ ನ ವಿಧಿವಿಜ್ಞಾನ ಪರೀಕ್ಷೆಯಿಂದ ಮತ್ತು ಶುಭಂ ಸೋನಿ (ಮಹಾದೇವ್ ನೆಟ್ವರ್ಕ್‌ನ ಉನ್ನತ ಆರೋಪಿಗಳಲ್ಲಿ ಒಬ್ಬರು) ಕಳುಹಿಸಿದ ಇಮೇಲ್ ನ ಪರಿಶೀಲನೆಯಿಂದ ಅನೇಕ ಆಘಾತಕಾರಿ ಆರೋಪಗಳು ಹೊರಬಂದಿವೆ. ಈ ಹಿಂದೆ ನಿಯಮಿತವಾಗಿ ಹಣ ಪಾವತಿ ಮಾಡಲಾಗಿತ್ತು. ಇಲ್ಲಿಯವರೆಗೆ ಮಹಾದೇವ್ ಅಪ್ಲಿಕೇಶನ್ ಪ್ರವರ್ತಕರು ಭೂಪೇಶ್ ಬಘೇಲ್ ಅವರಿಗೆ ಸುಮಾರು 508 ಕೋಟಿ ರೂ ಪಾವತಿಸಿದ್ದಾರೆ ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.
ವಶಪಡಿಸಿಕೊಂಡ ಹಣವನ್ನು ಛತ್ತೀಸ್ ಗಢ ರಾಜ್ಯದಲ್ಲಿ ಮುಂಬರುವ ಚುನಾವಣಾ ವೆಚ್ಚಗಳಿಗಾಗಿ ಮಹಾದೇವ್ ಅಪ್ಲಿಕೇಶನ್ ಪ್ರವರ್ತಕರು, ಓರ್ವ ರಾಜಕಾರಣಿ ಮೂಲಕ ‘ಬಘೇಲ್’ ಗೆ ತಲುಪಿಸಲು ವ್ಯವಸ್ಥೆ ಮಾಡಿದ್ದರು ಎಂದು ಅಸಿಮ್ ದಾಸ್ ಒಪ್ಪಿಕೊಂಡಿದ್ದಾರೆ” ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಆದಾಗ್ಯೂ ಈ ಆರೋಪಗಳು “ತನಿಖೆಯ ವಿಷಯ” ಎಂದು ಇಡಿ ಹೇಳಿದೆ.ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಭೀಮ್ ಯಾದವ್ ಅವರನ್ನು ಸಹ ಬಂಧಿಸಲಾಗಿದೆ ಎಂದು ಇಡಿ ಹೇಳಿದೆ.