ಬೀದರ್–ಔರಾದ್ ರಾಷ್ಟ್ರೀಯ ಹೆದ್ದಾರಿ ಅಪೂರ್ಣ: ಜಿಲ್ಲಾಧಿಕಾರಿಗೆ ದೂರು
ಔರಾದ್: ಬೀದರ್ –ಔರಾದ್ ರಾಷ್ಟ್ರೀಯ ಹೆದ್ದಾರಿ ರಸ್ತೆ ಅಪೂರ್ಣ ಕಾಮಗಾರಿಯಿದ್ದು, ಅವೈಜ್ಞಾನಿಕವಾಗಿ ಮಾಡಲಾಗಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಕೌಠಾ ಗ್ರಾಮಸ್ಥರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರನ್ನು ಒತ್ತಾಯಿಸಿದರು. ಔರಾದ್ ತಾಲೂಕಿನ ನಾನಾ ಇಲಾಖೆಗಳ ಪರಿಶೀಲನೆಗೆ ಆಗಮಿಸಿದ ಡಿಸಿ ಅವರಿಗೆ ಕೌಠಾ ಗ್ರಾಮಸ್ಥರು ಮನವಿ ಮಾಡಿದರು.
ಮಾಜಿ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಬಸವ ಬಿರಾದಾರ್ ಮಾತನಾಡಿ, ಕೌಠಾ ಗ್ರಾಮದಲ್ಲಿ ನಿತ್ಯ ಅಪಘಾತಗಳಾಗುತ್ತಿವೆ ಎಂದರು. ಅಲ್ಲದೇ ಗ್ರಾಮಗಳ ಬಳಿಯಲ್ಲಿ ಇನ್ನೂ ಕಾಮಗಾರಿ ಅಪೂರ್ಣವಿದೆ ಎಂದರು. ಇದಕ್ಕೆ ಗ್ರಾಮದ ವೈಜಿನಾಥ ಬಿರಾದಾರ್, ಗುಂಡಪ್ಪ ಮೇಳೆ, ಮಹೇಶ ಪಾಟೀಲ್, ವಿಜಯಕುಮಾರ ಮೈನಾಳೆ ಧ್ವನಿ ಜೋಡಿಸಿದರು. ಅಲ್ಲದೇ ನಿಯಮ ಬಾಹಿರವಾಗಿ ರಸ್ತೆಯ ಮೇಲೆ ಕೇಬಲ್ ಹಾಕಲಾಗುತ್ತಿದೆ. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ಕಂಪನಿಯವರು ಜನರಿಗೆ ಹೆದರಿಸುತ್ತಿದ್ದಾರೆ ಎಂದರು.
ಕೌಡಗಾಂವ ಗ್ರಾಮದ ಶಾಲೆ ಮತ್ತು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಅವರು ಮಕ್ಕಳ ಕಲಿಕೆ ಪರಿಶೀಲಿಸಿದರು. ಅಂಗನವಾಡಿ ಶಿಕ್ಷಕರು ಮಕ್ಕಳಿಗೆ ಬೋಧನೆ ಮಾಡಬೇಕು ಎಂದು ಸೂಚಿಸಿದರು. ಶಾಲೆಯ ಮಕ್ಕಳಿಗೆ ಪಾಠ ಓದಿಸಿಕೊಂಡರು. ಬಳಿಕ ಸಂತಪೂರ ನಾಡಕಚೇರಿಗೆ ಭೇಟಿ ನೀಡಿದ ವೇಳೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ಆನರ ಕೆಲಸ ಯಾವುದೇ ಕಾರಣಕ್ಕೂ ವಿಳಂಬ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು.
ಕೌಠಾ ಗ್ರಾಮಸ್ಥರು ಬೆಳಗ್ಗೆ ಹಾಗೂ ಸಂಜೆಯ ವೇಳೆ ಸಾರಿಗೆ ಇಲಾಖೆಯ ಬಸ್ ಗಳು ತಡೆ ರಹಿತ ಓಡುತ್ತಿವೆ. ಇದರಿಂದ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಇದಕ್ಕೆ ಬಗೆಹರಿಸುವಂತೆ ಮನವಿ ಮಾಡಿಕೊಂಡರು. ಸ್ಪಂದಿಸಿದ ಡಿಸಿ ಶರ್ಮಾ ಅವರು ಇಲಾಖೆಗೆ ಸೂಚಿಸಲಾಗುತ್ತದೆ ಎಂದರು. ಪಟ್ಟಣದ ರಸ್ತೆ ತೆರವು ಮಾಡಲಾಗಿದೆ. ಆದರೆ ಕೆಲವರ ಅಂಗಡಿಗಳನ್ನು ಕೈಬಿಡಲಾಗಿದೆ ಎಂದು ಮುಖಂಡ ಶರಣಪ್ಪ ಪಾಟೀಲ್ ನಿಯೋಗದಿಂದ ದೂರು ನೀಡಿದರು.
ಈ ವೇಳೆ ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ಎಇಇ ಸುಭಾಷ, ವೆಂಕಟ್ ಶಿಂಧೆ, ಸಿಡಿಪಿಒ ಇಮಲಪ್ಪ, ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ ಸೇರಿದಂತೆ ಅನೇಕರಿದ್ದರು.
ಪರೀಕ್ಷಾ ಕೇಂದ್ರಕ್ಕೆ ಭೇಟಿ:
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಕೇಂದ್ರಕ್ಕೆ ಆಗಮಿಸಿದ ಡಿಸಿ ಶಿಲ್ಪಾ ಶರ್ಮಾ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಶಾಂತಿಯುತವಾಗಿ ಪರೀಕ್ಷೆ ನಡೆಯುತ್ತಿದೆ. ಎಲ್ಲ ಕಡೆಯಲ್ಲಿಯೂ ಹೀಗೆ ಪರೀಕ್ಷೆ ನಡೆಯುವಂತೆ ನೋಡಿಕೊಳ್ಳುವಂತೆ ಪ್ರಭಾರಿ ಬಿಇಒ ಧೂಳಪ್ಪ ಮಳೆನೂರ ಅವರಿಗೆ ಸೂಚಿಸಿದರು.
ವರದಿ: ರವಿಕುಮಾರ ಶಿಂಧೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: