ಬಿಗಿಯಾದ ಕ್ರಮ ಜನರ ಉಸಿರುಗಟ್ಟಿಸದಿರಲಿ | ಸಾರ್ವಜನಿಕರ ಮನವಿ - Mahanayaka
3:21 PM Thursday 12 - December 2024

ಬಿಗಿಯಾದ ಕ್ರಮ ಜನರ ಉಸಿರುಗಟ್ಟಿಸದಿರಲಿ | ಸಾರ್ವಜನಿಕರ ಮನವಿ

karnataka lockdown
09/05/2021

ಬೆಂಗಳೂರು:  ಸರ್ಕಾರದ ಗೊಂದಲಕಾರಿ ನಿರ್ಧಾರಗಳಿಂದ ಭಯಭೀತರಾಗಿರುವ ಸಾರ್ವಜನಿಕರು ಇಂದು ಬೆಂಗಳೂರು ಬಿಟ್ಟು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿರುವ ದೃಶ್ಯ ವ್ಯಾಪವಾಗಿ ಕಂಡು ಬಂತು.

ಕೊರೊನಾಕ್ಕಿಂತಲೂ ಸರ್ಕಾರದ ಮಾರ್ಗಸೂಚಿಗಳು ಜನರಿಗೆ ಟಫ್ ಎಂದನಿಸಿದೆ. ಜನರಿಗೆ ಅನುಕೂಲಕರವಾದ ಯಾವುದೇ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಮಾಡಿಕೊಡದೇ ಲಾಕ್ ಡೌನ್ ಘೋಷಿಸಿದೆ. ಪ್ರತಿ ನಿಮಿಷಕ್ಕೊಂದು ನಿಯಮಗಳನ್ನು ಸರ್ಕಾರಗಳು ಅಧಿಕಾರಿಗಳು ಜಾರಿ ಮಾಡುತ್ತಿದ್ದಾರೆ. ಇದರಿಂದ ರಾಜ್ಯಾದ್ಯಂತ ಜನರಿಗೆ ಕಿರಿಕಿರಿ ಉಂಟಾಗಿದೆ.

ಅಗತ್ಯ ಸಾಮಗ್ರಿ ತರಲು ವಾಹನದಲ್ಲಿ ತೆರಳುವಂತಿಲ್ಲ, ನಡೆದುಕೊಂಡು ಹೋಗಬೇಕು ಎಂದು ಕೆಲವೆಡೆ ನಿಯಮಗಳನ್ನು ಹಾಕಲಾಗಿದೆ. ರಸ್ತೆಗೆ ವಾಹನ ಇಳಿದರೆ, ವಾಹನ ಸೀಝ್ ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಜನರು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳಲು ವಾಹನಗಳಿಲ್ಲದೇ ಹೇಗೆ ನಗರಕ್ಕೆ ಬರುವುದು? ಸಮೀಪದ ಅಂಗಡಿಗಳಲ್ಲಿರುವ ಸಾಮಗ್ರಿಗಳೆಲ್ಲ ಈಗಾಗಲೇ ಖಾಲಿಯಾಗಿ ಏನು ಕೇಳಿದರೂ ಇಲ್ಲ ಎಂದು ಹೇಳುತ್ತಿದ್ದಾರೆ ನಗರಕ್ಕೆ ಬಾರದೇ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದು ಹೇಗೆ? ಕಿ.ಮೀ.ಗಟ್ಟಲೆ ಜನರು ನಡೆಯಬೇಕೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ.

ಅಷ್ಟಕ್ಕೂ ಇಂತಹದ್ದೊಂದು ಸಲಹೆಯನ್ನು ಸರ್ಕಾರದ ಮುಂದೆ ಯಾರಿಟ್ಟಿದ್ದಾರೋ ಗೊತ್ತಿಲ್ಲ. ವಾಹನದಲ್ಲಿ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಬಂದರೆ, ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಿ ಬಹಳ ಬೇಗನೇ ಮನೆಗೆ ಸೇರಿಕೊಳ್ಳಬಹುದು. ಇದೀಗ ಸರ್ಕಾರದ ನಿರ್ಧಾರದಿಂದಾಗಿ ಜನರು ಸಾಮಗ್ರಿ ಖರೀದಿಸಿ ಗಂಟೆಗಟ್ಟಲೆ ಮನೆಗೆ ನಡೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಬಹುದು. ಮುಖ್ಯವಾಗಿ ಅಂಗಡಿಗಳಲ್ಲಿ ವಸ್ತುಗಳ ಕೊರೆತೆ ಉಂಟಾದರೆ, ಜನರು ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಅಲೆದಾಡಬೇಕಾದ ಪರಿಸ್ಥಿತಿಗಳು ಕೂಡ ಇದೆ. 10 ಗಂಟೆಯೊಳಗೆ ಜನರು ಮನೆ ಸೇರಬೇಕು ಎಂಬ ನಿಯಮ ಸಾಕಿತ್ತು. ಆದರೆ ಸರ್ಕಾರಕ್ಕೆ ಇಂತಹದ್ದೊಂದು ಸಲಹೆ ನೀಡಿದವರು ಯಾರು? ನಡೆದುಕೊಂಡು ಬಂದರೆ, ಕೊರೊನಾ ವೈರಸ್ ಹರಡಲು ಇನ್ನೊಂದು ಕಾರಣ ಕೂಡ ಆಗಬಹುದು. ಕೇವಲ ವೃದ್ಧರೂ ಮಾತ್ರವೇ ಇರುವ ಮನೆಗಳಲ್ಲಿ, ಅಥವಾ ಮಹಿಳೆಯರು ಮಾತ್ರವೇ ಇರುವ ಮನೆಗಳಲ್ಲಿ ಅಶಕ್ತರು ಹೇಗೆ ಮನೆಯಿಂದ ಕಿಲೋ ಮೀಟರ್ ಗಟ್ಟಲೆ ದೂರದಲ್ಲಿರುವ ಅಂಗಡಿಗಳಿಂದ ವಸ್ತುಗಳನ್ನು ಖರೀದಿಸಲು ತೆರಳಬೇಕು? ಎನ್ನು ಪ್ರಶ್ನೆಗಳು ಕೇಳಿ ಬಂದಿದೆ. ಇದರ ಜೊತೆಗೆ ಬೆಳಗ್ಗೆ 6ರಿಂದ 10ರವರೆಗೆ ಆಟೋಗಳ ಪ್ರಯಾಣಕ್ಕೆ ಕೂಡ ಸರ್ಕಾರ ಅವಕಾಶ ನೀಡಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳು ಜನರ ಸುರಕ್ಷತೆಗಾಗಿ ಎನ್ನುವುದು ನಿಜ. ಆದರೆ, ನಿಯಮಗಳಿಂದ ಸಾರ್ವಜನಿಕರು ತೊಂದರೆಗೀಡಾಗಬಾರದು ಎನ್ನುವುದು ಕೂಡ ಅಷ್ಟೇ ಮುಖ್ಯವಾದದ್ದು, ಸರ್ಕಾರ ಅಗತ್ಯ ವಸ್ತುಗಳನ್ನು ಖರೀದಿಸಲು ನೀಡಿರುವ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ಅನಾನುಕೂಲವನ್ನು ಸೃಷ್ಟಿಸಬಾರದು. ಉಳಿದ ಸಂದರ್ಭದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಸರ್ಕಾರ ಕೈಗೊಳ್ಳಲಿ ಎನ್ನುವ ಅಭಿಪ್ರಾಯಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ಇತ್ತೀಚಿನ ಸುದ್ದಿ