ಯುವಕನ ಲಾಕಪ್ ಡೆತ್ ವಿರೋಧಿಸಿ ಪೊಲೀಸ್ ಠಾಣೆಗೆ ನುಗ್ಗಿದ ಗ್ರಾಮಸ್ಥರು | ಮಹಿಳಾ ಪೇದೆ ಸ್ಥಳದಲ್ಲಿಯೇ ಸಾವು
ಬಿಹಾರ: ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಬಂಧಿತ ಯುವಕನೋರ್ವ ಲಾಕಪ್ ಡೆತ್ ಆಗಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು, ಇದರಿಂದಾಗಿ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ನಡೆದು ಘರ್ಷಣೆಯ ವೇಳೆ ಮಹಿಳಾ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ.
ಜೆಹಾನಾಬಾದ್ ಜಿಲ್ಲೆಯ ಪರಸ್ಬಿಘಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬಿಹಾರ ರಾಜ್ಯದಲ್ಲಿ ಮದ್ಯ ನಿಷೇಧವಿದ್ದರೂ ಗೋವಿಂದ ಮಾಂಝಿ ಎಂಬಾತ ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿತ್ತು. ಈ ವೇಳೆ ಪೊಲೀಸರು ಆರೋಪಿಯನ್ನು ಔರಂಗಾಬಾದ್ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಿದ್ದರು. ಅಲ್ಲಿ ಆರೋಪಿ ಲಾಕಪ್ ಡೆತ್ ಆಗಿದ್ದಾನೆ.
ಗೋವಿಂದ ಮಾಂಝಿ, ತೀವ್ರ ಚಿತ್ರಹಿಂಸೆಯಿಂದ ಲಾಕಪ್ ಡೆತ್ ಆಗಿದ್ದಾನೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ರೊಚ್ಚಿಗೆದ್ದಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ತಡೆದಾಗ ಆಕ್ರೋಶಿತ ಗುಂಪು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ನಿಯಂತ್ರಿಸುತ್ತಿದ್ದ ಮಹಿಳಾ ಪೇದೆ ಕಾಂತಿ ದೇವಿ ಅವರಿಗೆ ಏಕಾಏಕಿ ವಾಹನವೊಂದು ಡಿಕ್ಕಿ ಹೊಡೆದಿದ್ದು, ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಜೆಹಾನಾಬಾದ್ ಜಿಲ್ಲೆಯ ಪರಸ್ಬಿಘಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದರಿಂದ ಜೆಹಾನಾಬಾದ್-ಅರ್ವಾಲ್ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತಿಭಟನಾಕಾರರು ಭಾರೀ ಕಲ್ಲು ತೂರಾಟ ನಡೆಸಿದ್ದರಿಂದ ಅವರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇನ್ನು ಕಲ್ಲು ತೂರಾಟದಲ್ಲಿ ಅನೇಕ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಜೆಹಾನಾಬಾದ್ನ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ಬೆಚ್ಚಿ ಬೀಳಿಸಿದ ಘಟನೆ: ಬಹಿರ್ದೆಸೆಗೆ ತೆರಳಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ!
ನನ್ನ ಗಂಡ ಅಮಾಯಕ, ಅವರು ಮಾಡಿದ್ದು ಸೆಕ್ಸ್ ವಿಡಿಯೋ ಅಲ್ಲ ಕಾಮ ಪ್ರಚೋದಕ ವಿಡಿಯೋ | ಶಿಲ್ಪಾ ಶೆಟ್ಟಿ
121 ಅಶ್ಲೀಲ ವಿಡಿಯೋಗಳನ್ನು 12 ಲಕ್ಷ ರೂ. ಮಾರಾಟ ಮಾಡಲು ಮುಂದಾಗಿದ್ದ ರಾಜ್ ಕುಂದ್ರಾ!
ರೆಡ್ ಅಲಾರ್ಟ್: ಮುಂದಿನ 24 ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಧಾರಾಕಾರ ಮಳೆ
“BSP ಗೆದ್ದು ಬಂದ ನೆಲದಲ್ಲಿ ರಾಮಮಂದಿರ ನಿರ್ಮಾಣವಾಗುತ್ತದೆ” | ಬಿಎಸ್ ಪಿಯಿಂದ ಅಚ್ಚರಿಯ ಹೇಳಿಕೆ