ಬಿಹಾರದಲ್ಲಿ ಹಳಿ ತಪ್ಪಿದ ಬೋಗಿಗಳು: ಓರ್ವ ಬಲಿ; ರಕ್ಷಣಾ ಕಾರ್ಯಾಚರಣೆ ಚುರುಕು

ದೆಹಲಿಯ ಆನಂದ್ ವಿಹಾರ್ ಟರ್ಮಿನಸ್ ನಿಂದ ಹೊರಡುವ ಈಶಾನ್ಯ ಎಕ್ಸ್ ಪ್ರೆಸ್ ನ ಕನಿಷ್ಠ ಆರು ಬೋಗಿಗಳು ಬಿಹಾರದ ಬಕ್ಸಾರ್ ನಲ್ಲಿ ಬುಧವಾರ ರಾತ್ರಿ ಹಳಿ ತಪ್ಪಿದ ಪರಿಣಾಮ ರೈಲು ಅಪಘಾತದಲ್ಲಿ ಪ್ರಯಾಣಿಕರೊಬ್ಬರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ. ರೈಲು ಅಸ್ಸಾಂನ ಗುವಾಹಟಿ ಬಳಿಯ ಕಾಮಾಕ್ಯಕ್ಕೆ ತೆರಳುತ್ತಿದ್ದಾಗ ರಾತ್ರಿ ಬಕ್ಸಾರ್ ಬಳಿಯ ರಘುನಾಥ್ಪುರ ನಿಲ್ದಾಣದ ಬಳಿ ಈ ಘಟನೆ ನಡೆದಿದೆ.
ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಮತ್ತು ಬಕ್ಸಾರ್ ಸಂಸದ ಅಶ್ವಿನಿ ಕೆ.ಆರ್.ಚೌಬೆ ಮಾತನಾಡಿ, “3 ಬೋಗಿಗಳು ಹಳಿ ತಪ್ಪಿವೆ ಎಂದು ನನಗೆ ತಿಳಿದಿದೆ. ನಾನು ಡಿಜಿ ಎನ್ಡಿಆರ್ ಎಫ್, ಮುಖ್ಯ ಕಾರ್ಯದರ್ಶಿ, ಡಿಎಂ, ಡಿಜಿ ಮತ್ತು ರೈಲ್ವೆ ಜಿಎಂ ಅವರೊಂದಿಗೆ ಮಾತನಾಡಿದ್ದೇನೆ. ನಾನು ನಮ್ಮ ಕಾರ್ಯಕರ್ತರಿಗೆ ಮನವಿ ಮಾಡಿದ್ದೇನೆ ಮತ್ತು ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದೆ” ಎಂದಿದ್ದಾರೆ.
ಒಡಿಶಾದ ಬಾಲಸೋರ್ ನಲ್ಲಿ 296 ಜನರ ಸಾವಿಗೆ ಕಾರಣವಾದ ತ್ರಿವಳಿ ರೈಲು ಅಪಘಾತದ ನಾಲ್ಕು ತಿಂಗಳ ನಂತರ ಈ ಘಟನೆ ನಡೆದಿದೆ. ಬಾಲಸೋರ್ ಜಿಲ್ಲೆಯ ಬಹನಗ ಬಜಾರ್ ರೈಲ್ವೆ ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದ್ದು, ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ನಿಂತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ ಮತ್ತು ಹೌರಾಗೆ ತೆರಳುತ್ತಿದ್ದ ಯಶವಂತಪುರ ಎಕ್ಸ್ಪ್ರೆಸ್ ಹಳಿ ತಪ್ಪಿದ ಕೆಲವು ಬೋಗಿಗಳಿಗೆ ಡಿಕ್ಕಿ ಹೊಡೆದಿತ್ತು.