ಬಿಹಾರದಲ್ಲಿ ದಲಿತ ಡಿಸಿಎಂ ನೇಮಕಕ್ಕೆ ಮುಂದಾದ ಬಿಜೆಪಿ
14/11/2020
ಪಾಟ್ನಾ: ಬಿಹಾರ ಚುನಾವಣೆಯ ಫಲಿತಾಂಶ ಬಂದ ಬಳಿಕ ಇದೀಗ ಬಿಹಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಿಂತಲೂ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಆರಂಭವಾಗಿದ್ದು, ದಲಿತ ಉಪ ಮುಖ್ಯಮಂತ್ರಿಯನ್ನು ನೇಮಕ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ಹಾಲಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ಅವರ ಬದಲು ಬಿಜೆಪಿ ದಲಿತ ನಾಯಕ ಕಾಮೇಶ್ವರ್ ಚೌಪಾಲ್ ಅವರನ್ನು ಡಿಸಿಎಂ ಮಾಡಲು ಬಿಜೆಪಿಯು ನಿರ್ಧರಿಸಿದೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿದೆ.
ಚೌಪಾಲ್ ಅವರು ಪಾಟ್ನಾ ಏರ್ ಪೋರ್ಟ್ ಗೆ ಆಗಮಿಸುತ್ತಿದ್ದಂತೆಯೇ ಅವರ ಬೆಂಬಲಿಗರು ತಮ್ಮ ನಾಯಕನಿಗೆ ಪ್ರಮುಖ ಸ್ಥಾನಮಾನ ನೀಡಬೇಕು ಎಂದು ಘೋಷಣೆ ಕೂಗಿದ್ದು, ಇದರಿಂದಾಗಿ ದಲಿತ ಡಿಸಿಎಂ ಚರ್ಚೆ ಇನ್ನಷ್ಟು ಬಲಗೊಂಡಿದೆ.
ಅಂದಹಾಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಟ್ರಸ್ಟ್ ನ 15 ಸದಸ್ಯರಲ್ಲಿ ಚೌಪಾಲ್ ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಚೌಪಾಲ್ ಅವರಿಗೆ ಡಿಸಿಎಂ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ ಎಂದು ಹೇಳಲಾಗಿದೆ.