ರಸ್ತೆ ದಾಟುತ್ತಿದ್ದ ಜಿಂಕೆಗೆ ಬೈಕ್ ಡಿಕ್ಕಿ | ಜಿಂಕೆ ಸ್ಥಳದಲ್ಲಿಯೇ ಸಾವು | ಬೈಕ್ ಸವಾರ ಗಂಭೀರ
24/10/2020
ಹುಣಸೂರು: ಬೈಕ್ ವೊಂದು ರಸ್ತೆ ದಾಟುತ್ತಿದ್ದ ಜಿಂಕೆಗೆ ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಜಿಂಕೆ ಮೃತಪಟ್ಟಿದೆ. ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಣಸೂರು- ನಾಗರಹೊಳೆ ರಸ್ತೆಯ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಬಳಿ ನಡೆದಿದೆ.
ಗಾಯಗೊಂಡಿರುವ ಬೈಕ್ ಸವಾರನನ್ನು ಹುಣಸೂರು ನಗರದ ಕಲ್ಕುಣಿಕೆ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ. ಈತ ತಾಲೂಕಿನ ವಿವಿಧ ಪಡಿತರ ಕೇಂದ್ರಗಳಲ್ಲಿ ಕಂಪ್ಯೂಟರ್ ಕೆಲಸ ನಿರ್ವಹಿಸುತ್ತಿದ್ದ ಎಂದು ವರದಿಯಾಗಿದೆ.
ನಾಗಾಪುರ ಬಳಿಯ ಉಡ್ ಲಾಟ್ ಕಡೆಯಿಂದ ಜಿಂಕೆ ಬಂದಿದ್ದು, ಈ ವೇಳೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ಸಂತೋಷ್ ನ ತಲೆಗೆ ತೀವ್ರವಾಗಿ ಏಟಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.