ಬಿಲ್ಕಿಸ್ ಬಾನು ಅತ್ಯಾಚಾರ ಕೇಸ್: ಕ್ಷಮಾದಾನ ರದ್ದು ಮಾಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ - Mahanayaka
7:44 AM Wednesday 18 - September 2024

ಬಿಲ್ಕಿಸ್ ಬಾನು ಅತ್ಯಾಚಾರ ಕೇಸ್: ಕ್ಷಮಾದಾನ ರದ್ದು ಮಾಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ

19/07/2024

ಬಿಲ್ಕಿಸ್ ಬಾನು ಅತ್ಯಾಚಾರ ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ್ದ ಕ್ಷಮಾದಾನ ರದ್ದಾಗಿ ಮತ್ತೆ ಜೈಲು ಸೇರಿದ್ದರೂ ಅವರು ಮತ್ತೆ ಹೊರ ಬರಲು ಪ್ರಯತ್ನಿಸುತ್ತಲೇ ಇದ್ದಾರೆ. ಕ್ಷಮಾದಾನ ರದ್ದು ಮಾಡಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

ಅಪರಾಧಿಗಳ ಅರ್ಜಿಯು ಸಂಪೂರ್ಣ ದುರುದ್ದೇಶದಿಂದ ಕೂಡಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ರ ಪೀಠವು ಹೇಳಿದೆ.
2002ರಲ್ಲಿ ಗೋಧ್ರಾ ರೈಲು ದುರಂತದ ಬಳಿಕ ಗುಜರಾತ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಸುರಕ್ಷಿತ ಜಾಗಕ್ಕೆ ತೆರಳುತ್ತಿದ್ದ ಬಿಲ್ಕಿಸ್ ಬಾನು ರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಅವರ ಮೂರು ವರ್ಷದ ಮಗಳೂ ಸೇರಿದಂತೆ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಆರೋಪ ಸಾಭೀತಾದ ಹಿನ್ನೆಲೆ 2008ರಲ್ಲಿ ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಆದರೆ, ಗುಜರಾತ್ ಸರ್ಕಾರದ ಆದೇಶದ ಮೇರೆಗೆ ಎಲ್ಲಾ ಅಪರಾಧಿಗಳು 2022ರ ಆಗಸ್ಟ್ 15ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಬಿಲ್ಕಿಸ್ ಬಾನು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪರಾಧಿಗಳನ್ನು ಬಿಡುಗಡೆ ಮಾಡುವ ಅಧಿಕಾರ ಇರುವುದು ಪ್ರಕರಣದ ವಿಚಾರಣೆ ನಡೆಸಿದ ಮಹಾರಾಷ್ಟ್ರ ಸರ್ಕಾರಕ್ಕೆ, ಗುಜರಾತ್ ಸರ್ಕಾರಕ್ಕೆ ಆ ಅಧಿಕಾರ ಇಲ್ಲ ಎಂದಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶ ಪ್ರಶ್ನಿಸಿ ಅಪರಾಧಿಗಳಾದ ರಾಧೇಶ್ಯಾಮ್ ಭಗವಾನ್‌ದಾಸ್ ಶಾ ಮತ್ತು ರಾಜುಭಾಯ್ ಸೋನಿ ಮೇಲ್ಮನವಿ ಸಲ್ಲಿಸಿದ್ದರು. ಅದನ್ನು ಇಂದು ನ್ಯಾಯಾಲಯ ವಜಾಗೊಳಿಸಿದೆ.


Provided by

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ