ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರ - Mahanayaka

ರಾಹುಲ್ ಗಾಂಧಿ ಹೇಳಿಕೆ ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಗೃಹ ಸಚಿವ ಪರಮೇಶ್ವರ

Rahul Gandhi 1
02/07/2024

ಬೆಂಗಳೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಬಿಜೆಪಿಯವರಿಗೆ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲವೋ, ಅಲ್ಲಿಯವರೆಗೂ ಅವರು ಗೊಂದಲದಲ್ಲಿರುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಹೇಳಿದರು.


Provided by

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆ ವಿಚಾರ ಕುರಿತು, ನಾನು ಸಿಎಂ ಅವರನ್ನು ಪ್ರತಿದಿನ ಭೇಟಿ ಮಾಡುತ್ತೇನೆ. ಇಲಾಖೆಯ ಅನೇಕ ವಿಚಾರಗಳನ್ನು ಅವರ ಗಮನಕ್ಕೆ ತಂದು ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸರ್ಕಾರದಲ್ಲಿ ಅನೇಕ ತೀರ್ಮಾನಗಳನ್ನು ಮಾಡುವಂತಹ ಸಂದರ್ಭದಲ್ಲಿ ಅವರೊಂದಿಗೆ ಚರ್ಚಿಸಬೇಕಾಗುತ್ತದೆ ಎಂದು ಹೇಳಿದರು.

ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಬಹಿರಂಗ ಹೇಳಿಕೆ ನೀಡುವವರಿಗೆ ಡಿ.ಕೆ.ಶಿವಕುಮಾರ್ ನೋಟಿಸ್ ಜಾರಿ ಮಾಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿತಿಯಿಸಿ, ನೋಟಿಸ್ ನೀಡುವುದು ಅಧ್ಯಕ್ಷರು ಮಾಡುವ ಕೆಲಸ. ಕಾರ್ಯಕರ್ತರು, ಶಾಸಕರು, ಸಚಿವರು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು ಎಂಬುದಾಗಿ ಹೇಳಿದ್ದಾರೆ ಎಂಬರ್ಥದಲ್ಲಿ ಅರ್ಥೈಸಿಕೊಂಡಿದ್ದೇನೆ. ಪಕ್ಷದ ಮತ್ತು ಅಧ್ಯಕ್ಷರ ದೃಷ್ಟಿಯಲ್ಲಿ ಸರಿ ಇಲ್ಲ ಎಂಬುದು ಕಂಡು ಬಂದರೆ ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ಹೈಕಮಾಂಡ್ ಮತ್ತು ಪಕ್ಷದ ಅಧ್ಯಕ್ಷರು ಏನು ಮಾಡುತ್ತಾರೆ ಕೇಳಬೇಕಾಗುತ್ತದೆ. ಯಾವ ಶಿಸ್ತು ಉಲ್ಲಂಘನೆಯಾಗಿದೆ ಎಂಬುದನ್ನು ಸ್ಪಷ್ಟವಾಗಿ ಆ ವ್ಯಕ್ತಿಯನ್ನು ಕರೆದು ಶಿಸ್ತು ಸಮಿತಿ ಹೇಳಬೆಕಾಗುತ್ತದೆ. ಆ ನಂತರದ ಬೆಳವಣಿಗೆ ಪಕ್ಷದ ಅಧ್ಯಕ್ಷರಿಗೆ ಬಿಟ್ಟಿದ್ದು ಎಂದು ಹೇಳಿದರು.

ನಟ ದರ್ಶನ್ ಗೆ ವಿಶೇಷ ಸತ್ಕಾರವಿಲ್ಲ:

ನಟ ದರ್ಶನ್ ಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡುತ್ತಿರುವ ಆರೋಪದ ಕುರಿತು ಮಾತನಾಡಿ, ದರ್ಶನ್‌ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸತ್ಕಾರ ಕೊಡುತ್ತಿಲ್ಲ. ಇದರ ಬಗ್ಗೆ ಅಂದೇ ಸ್ಪಷ್ಟಪಡಿಸಿದ್ದೇನೆ. ಬಿರಿಯಾನಿ ಅವೆಲ್ಲ ಏನೂ ಕೊಡುತ್ತಿಲ್ಲ. ಜೈಲಿನ ಒಳಗೂ ಬಿರಿಯಾನಿ ಕೊಡುತ್ತಿಲ್ಲ. ಬೇಕಾದರೆ ನನ್ನ ಜತೆ ಬನ್ನಿ, ಕರೆದುಕೊಂಡು ಹೋಗಿ ತೋರಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ