ತಮ್ಮದೇ ಪಕ್ಷದ ಆಡಳಿತದಲ್ಲಿ ನಡೆದ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂಸದ ತೇಜಸ್ವಿ ಸೂರ್ಯ!

ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮದೇ ಪಕ್ಷದವರ ಹಗರಣವನ್ನು ಹೊರಗೆಳೆದಿದ್ದು, ಬಿಜೆಪಿ ಆಡಳಿತ ವಿರುವ ಬಿಬಿಎಂಪಿಯಲ್ಲಿ ಬಿಜೆಪಿ ಸಚಿವರು ಬೆಡ್ ಹಗರಣದಲ್ಲಿ ತೊಡಗಿರುವುದನ್ನು ಬಯಲು ಮಾಡಿದ್ದಾರೆ.
ವಾರ್ ರೂಮ್ ಕಾರ್ಯ ನಿರ್ವಹಣೆಯ ಬಗ್ಗೆ ಅಪಸ್ವರ ಕೇಳಿ ಬಂದ ಹಿನ್ನೆಲೆಯಲ್ಲಿ ಸಂಸದ ತೇಜಸ್ವಿ ಸೂರ್ಯ, ಶಾಸಕ ಸತೀಶ್ ರೆಡ್ಡಿ, ರವಿ ಸುಬ್ರಹ್ಮಣ್ಯ, ಉದಯ್ ಗರುಡಾಚಾರ್ ಭೇಟಿ ನೀಡಿದ್ದು, ಈ ವೇಳೆ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಆಡಳಿತ ಇರುವ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಹಗರಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಬಿಬಿಎಂಪಿ ಕೊವಿಡ್ ವಾರ್ ರೂಮ್ ನಲ್ಲಿ ಏಜೆನ್ಸಿಯವರು ಹೋಮ್ ಐಸೋಲೇಶನ್ ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ. ಬೆಡ್ ನ ಕೃತಕ ಅಭಾವ ಸೃಷ್ಟಿಸಿ 4 ಸಾವಿರಕ್ಕೂ ಹೆಚ್ಚು ಬೆಡ್ ಗಳ ಅವ್ಯವಹಾರ ಬೆಂಗಳೂರಿನಾದ್ಯಂತ ನಡೆಯುತ್ತಿದೆ. ಓರ್ವ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ಕಿಂಗ್ ಆಗಿದೆ. ರಾತ್ರೋ ರಾತ್ರಿ ಈ ಅವ್ಯವಹಾರ ನಡೆಯುತ್ತಿದೆ ಇದು ಭ್ರಷ್ಟಾಚಾರ ಅಲ್ಲ ಕೊಲೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎನ್ನುವುದು ಖಚಿತವಾದ ತಕ್ಷಣ ಬಿಯು ನಂಬರ್ ವಾರ್ ರೂಮ್ ಗೆ ಬರುತ್ತದೆ. ಉದಾಹರಣೆಗೆ ಬಸವನಗುಡಿ ನಿವಾಸಿಗೆ ಸೋಂಕು ಖಚಿತವಾದ ತಕ್ಷಣ ಬೆಂಗಳೂರು ಸೌತ್ ವಾರ್ ರೂಮ್ ಗೆ ವಿವರ ಹೋಗುತ್ತದೆ. ತಕ್ಷಣ ವಾರ್ ರೂಮ್ ನಿಂದ ಸೋಂಕಿತನಿಗೆ ಕರೆ ಮಾಡಿ ಕೊರೊನಾ ಲಕ್ಷಣಗಳಿವೆಯೇ ಎಂದು ವಿಚಾರಿಸಲಾಗುತ್ತದೆ. ಹೋಮ್ ಐಸೋಲೇಷನ್ ನಲ್ಲಿರುವವರ ಹೆಸರಿನಲ್ಲಿ ಬಿಬಿಎಂಪಿ ವಾರ್ ರೂಮ್ ನಲ್ಲಿ ಕುಳಿತ ಅಧಿಕಾರಿಗಳು ಆಸ್ಪತ್ರೆಗಳ ಬೆಡ್ ಗಳನ್ನು ಬ್ಲಾಕ್ ಮಾಡುತ್ತಾರೆ. ಅವರ್ಯಾರೂ ಸರ್ಕಾರಿ ಅಧಿಕಾರಿಗಳಲ್ಲ. ಯಾವುದೋ ಏಜೆನ್ಸಿಯವರು. ಹೋಮ್ ಐಸೋಲೇಷನ್ ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡಿದ ತಕ್ಷಣ ಸಾರ್ವಜನಿಕರಿಗೆ ಬೆಡ್ ಇಲ್ಲ ಎಂದು ವೆಬ್ ಸೈಟ್ ನಲ್ಲಿ ತೋರಿಸುತ್ತದೆ. ಆದರೆ ಬೆಡ್ ಖಾಲಿ ಇರುತ್ತದೆ. ಹೀಗೆ ಕೃತಕ ಬೆಡ್ ನ ಅಭಾವ ಸೃಷ್ಟಿಸಲಾಗಿದೆ ಎಂದು ಅವರು ದೂರಿದ್ದಾರೆ.
ಕೊರೊನಾ ಲಕ್ಷಣ ಕಂಡು ಬಂದ ವ್ಯಕ್ತಿಯ ಹೆಸರಿನಲ್ಲಿ ಬೆಡ್ ಬುಕ್ ಮಾಡಲಾಗುತ್ತದೆ. 12 ಗಂಟೆಗಳ ನಡುವೆ ಯಾರ ಹೆಸರಿನಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ, ಆ ಬೆಡ್ ಅವರ ಹೆಸರಿನಿಂದ ಅನ್ ಬ್ಲಾಕ್ ಆಗುತ್ತದೆ. ಆದರೆ 12 ಗಂಟೆಯ ಒಳಗೆ ವಾರ್ ರೂಮ್ ನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜೊತೆಗೆ ಮಾತನಾಡಿ ವ್ಯವಹಾರ ಕುದುರಿಸುತ್ತಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕೊರೊನಾ ಸಂಕಷ್ಟದ ನಡುವೆ ಬಿಜೆಪಿ ನೇತೃತ್ವದ ಬಿಬಿಎಂಪಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳನ್ನು ತೇಜಸ್ವಿ ಸೂರ್ಯ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನೂ ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ತನಿಖೆಗೆ ಆದೇಶ ನೀಡಿದ್ದಾರೆ. ತಮ್ಮದೇ ಸರ್ಕಾರದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ಬಿಚ್ಚಿಟ್ಟ ತೇಜಸ್ವಿ ಸೂರ್ಯಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ.