ವಿಲನ್ ಗಳಾದರು ಹೈಕಮಾಂಡ್! | ಲಿಂಗಾಯತ ನಾಯಕನನ್ನು ಅವಮಾನಿಸಿ ಕೆಳಗಿಳಿಸಿದ್ಯಾಕೆ?
ಬೆಂಗಳೂರು: ಕಷ್ಟಪಟ್ಟು ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿದ ಯಡಿಯೂರಪ್ಪ, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ, ಪೂರ್ಣಾವಧಿಯನ್ನು ಪೂರೈಸಲು ಹೈಕಮಾಂಡ್ ಬಿಡಲಿಲ್ಲ. ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕಾಯಿತು ಆದರೆ, ಆ ಅಧಿಕಾರವನ್ನು ಬೆವರೇ ಸುರಿಸದವರಿಗೆ ಅನುಭವಿಸಲು ಬಿಡಲು ಹೈಕಮಾಂಡ್ ಮುಂದಾಗಿರುವುದು ಇದೀಗ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಯಡಿಯೂರಪ್ಪ ರಾಜ್ಯ ಬಿಜೆಪಿಯಲ್ಲಿ ಇರಲಿಲ್ಲವಾದರೆ, ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವೇ ಈಗ ರಾಜ್ಯದಲ್ಲಿರುತ್ತಿತ್ತು. ಸಮ್ಮಿಶ್ರ ಸರ್ಕಾರದಲ್ಲಿದ್ದ ಘಟನಾನುಘಟಿ ನಾಯಕರ ಕಣ್ಣು ತಪ್ಪಿಸಿ ಶಾಸಕರನ್ನು ದೋಚಿದ ಯಡಿಯೂರಪ್ಪ ಅವರ ರಾಜಕೀಯ ಪ್ರವೀಣತೆ ಯಾವ ಬಿಜೆಪಿ ನಾಯಕರಲ್ಲಿಯೂ ಇಲ್ಲ. ಯಡಿಯೂರಪ್ಪ ವಿಪಕ್ಷಗಳ ವಿರುದ್ಧ ಹೋರಾಡಿದರೆ, ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ವಿರುದ್ಧ ಹೋರಾಡಿ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಕಣ್ಣೀರು ಹಾಕಿಸಿ, ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಲಾಗಿದೆ. ಇದರಿಂದಾಗಿ ಬಿಜೆಪಿ ವಲಯದಲ್ಲಿ ಇದೀಗ ಹೈಕಮಾಂಡ್ ಗಳನ್ನು ವಿಲನ್ ಗಳಂತೆ ನೋಡುವಂತಾಗಿದೆ.
ತ್ಯಜಿಸಿರುವುದು ಅಧಿಕಾರ ಮಾತ್ರ. ಆದರೆ, ಜನಸೇವೆಗಾಗಿ ಬದುಕುತ್ತೇನೆ ಎಂದು ಕಣ್ಣೀರು ಹಾಕಿದ ಹಿರಿಯ ಜೀವ ಯಡಿಯೂರಪ್ಪನವರ ಕಣ್ಣೀರು ಬಿಜೆಪಿಗೆ ಒಳ್ಳೆಯದಲ್ಲ, ಈ ಕಣ್ಣೀರು ಬಿಜೆಪಿಗೆ ತಟ್ಟದಿರುತ್ತದೆಯೇ? ಹಿರಿಯರನ್ನು ಪಕ್ಷದಿಂದ ತುಳಿದು ಹೊರಗಟ್ಟಲಾಗುತ್ತಿದೆ. ಬಹಿರಂಗ ಸಭೆಯಲ್ಲಿ ಎಲ್.ಕೆ.ಅಡ್ವಾನಿ ಅವರನ್ನು ಅವಮಾನಿಸಿದ ಬಿಜೆಪಿ ಹೈಕಮಾಂಡ್ ಗೆ ಯಡಿಯೂರಪ್ಪನವರು ಯಾವ ಲೆಕ್ಕ? ಎನ್ನುವ ಮಾತುಗಳು ಕೇಳಿ ಬಂದಿವೆ.
ಯಡಿಯೂರಪ್ಪನವರನ್ನು ಅಧಿಕಾರ ಪೂರ್ಣಗೊಳಿಸಲು ಹೈಕಮಾಂಡ್ ಅವಕಾಶ ನೀಡಬೇಕಿತ್ತು. ಪಕ್ಷಕ್ಕೆ ಅವರು ನೀಡಿರುವ ಕೊಡುಗೆಗೆ ಈ ಮೂಲಕ ಅವರ ರಾಜಕೀಯ ಇತಿಹಾಸವನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಹೈಕಮಾಂಡ್ ಮಾಡಬಹುದಿತ್ತು. ಅಥವಾ ದೆಹಲಿಯಿಂದ ಪಕ್ಷದ ಹಿರಿಯ ನಾಯಕರನ್ನು ಕರೆತಂದು ಯಡಿಯೂರಪ್ಪನವರನ್ನು ಗೌರವಯುತವಾಗಿ ಅಧಿಕಾರ ತ್ಯಾಗ ಮಾಡಿಸಬಹುದಿತ್ತು. ಆದರೆ ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲಿ, ತಮ್ಮ ರಾಜೀನಾಮೆಯನ್ನು ಘೋಷಿಸಿ, ಕಣ್ಣೀರು ಹಾಕುತ್ತಾ, ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವಂತಹ ಸ್ಥಿತಿಯನ್ನು ಬಿಜೆಪಿ ಹೈಕಮಾಂಡ್ ಸೃಷ್ಟಿಸಿದೆ ಎಂದಾದರೆ, ಇದು ಕೇವಲ ವಯಸ್ಸಿನ ಆಧಾರದಲ್ಲಿ ಅಧಿಕಾರದಿಂದ ಇಳಿಸಿರುವುದಲ್ಲ, ಒಬ್ಬ ಲಿಂಗಾಯತ ಸಮುದಾಯದ ನಾಯಕನನ್ನು ಅವಮಾನಿಸಿ ಅಧಿಕಾರದಿಂದ ಇಳಿಸುವ ಮನುವಾದಿ ಧೋರಣೆಯಾಗಿದೆ ಎನ್ನುವ ಅಭಿಪ್ರಾಯಗಳು ಸದ್ಯ ಕೇಳಿ ಬಂದಿದೆ.
ಇನ್ನಷ್ಟು ಸುದ್ದಿಗಳು…
ಬಸವಣ್ಣಗೆ ಮಾಡಿದ ಅನ್ಯಾಯ ಯಡಿಯೂರಪ್ಪಗೂ ಆಯಿತು | ಕಣ್ಣೀರು ಹಾಕಿಸಿ ಅಧಿಕಾರದಿಂದ ಕೆಳಗಿಳಿಸಲಾಗಿದೆ | ಸತೀಶ್ ಜಾರಕಿಹೊಳಿ
ಹೊಳೆದಾಟಿದ ಮೇಲೆ ಅಂಬಿಗನ ಹಂಗೇಕೆ? | ಸಿಎಂಗೆ ಕನಿಷ್ಠ ಗೌರವವನ್ನೂ ಕೊಡದೆ ಹೊರಗೆ ತಳ್ಳಲಾಗಿದೆ | ಜಿ.ಪರಮೇಶ್ವರ್
ಷಡ್ಯಂತ್ರಗಳ ಬಾಣಗಳ ಹಾಸಿಗೆಯಲ್ಲಿ ಯಶಸ್ವಿಯಾಗಿ ಭೀಷ್ಮನನ್ನು ಮಲಗಿಸಿಬಿಟ್ಟಿರಿ!
ಏರೆಗ್ಲಾ ಪನೋಡ್ಚಿ…! | “ನಳಿನ್ ಕುಮಾರ್ ಆಡಿಯೋ ಮಿಮಿಕ್ರಿ ಆರ್ಟಿಸ್ಟ್ ಯಾರೆಂದು ತಿಳಿಯಿತು”