ಭಗತ್ ಸಿಂಗ್, ಅಂಬೇಡ್ಕರ್ ರನ್ನು ಬಿಜೆಪಿ ಕಡೆಗಣಿಸಿದೆ: ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ

ಸ್ವಾತಂತ್ರ‍್ಯ ಹೋರಾಟಗಾರ ಭಗತ್ ಸಿಂಗ್ ಮತ್ತು ಸಮಾಜ ಸುಧಾರಕ ಭೀಮರಾವ್ ಅಂಬೇಡ್ಕರ್ ರ ಪರಂಪರೆಯನ್ನು ಬಿಜೆಪಿ ಕಡೆಗಣಿಸಿದೆ. ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ , ಭಗತ್ ಸಿಂಗ್ ಮತ್ತು ಅಂಬೇಡ್ಕರ್ ರ ಕನಸುಗಳನ್ನು ನನಸಾಗಿಸಲು ತಮ್ಮ ಪಕ್ಷ ರಾಜಕೀಯ ಪ್ರವೇಶಿಸಿದೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ನಮ್ಮ ಆದರ್ಶ ವ್ಯಕ್ತಿಗಳಾಗಿದ್ದಾರೆ. ಬ್ರಿಟಿಷರನ್ನು ದೇಶದಿಂದ ತೊಲಗಿಸಿದರೆ ಸಾಲದು, ಸಮಾಜದ ರಚನೆಯೇ ಬದಲಾಗಬೇಕು. ಇಲ್ಲದಿದ್ದರೆ, ಬ್ರೌನ್ ರೂಲರ್ಸ್ ಬ್ರಿಟಿಷರ ಸ್ಥಾನದಲ್ಲಿ ಇರುತ್ತಾರೆ ಎಂದು ಭಗತ್ ಸಿಂಗ್ ಹೇಳಿದ್ದರು. ಇಂದು ಅದು ನಿಜವಾಗಿದೆ. ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಅಧಿಕಾರ ವಹಿಸಿಕೊಂಡ 48 ಗಂಟೆಗಳಲ್ಲಿಯೇ ಬಿಜೆಪಿ ಸರ್ಕಾರಿ ಕಚೇರಿಗಳಿಂದ ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತೆಗೆದುಹಾಕಲಾಯಿತು. ಭಗತ್ ಸಿಂಗ್ ಅವರಿಗಿಂತ ದೇಶಕ್ಕಾಗಿ ಹೆಚ್ಚು ತ್ಯಾಗ ಮಾಡಿದ ಯಾರಾದರೂ ಇದ್ದಾರೆಯೇ ಎಂದು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj