ಕಾರ್ಯಕರ್ತರನ್ನು ಉಳಿಸಿಕೊಳ್ಳಲಾಗದ ಬಿಜೆಪಿ ಜನರನ್ನು ಹೇಗೆ ರಕ್ಷಿಸುತ್ತದೆ: ಜೆಡಿಎಸ್ ಮುಖಂಡ ಪ್ರವೀಣ್ ಕುಮಾರ್ ಪ್ರಶ್ನೆ
ಹಾಸನ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಹತ್ಯೆಯನ್ನು ಜೆಡಿಎಸ್ ಯುವ ಮುಖಂಡ ಪ್ರವೀಣ್ ಕುಮಾರ್ ಖಂಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆಯು ಖಂಡಿನೀಯವಾದದ್ದು, ಪ್ರವೀಣ್ ಹತ್ಯೆಯ ಆರೋಪಿಗಳನ್ನು ಶೀಘ್ರವೇ ಬಂಧಿಸಿ, ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಆಡಳಿತದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬಿಜೆಪಿ ಆಡಳಿತದಿಂದ ಬೇಸತ್ತು ಕಾರ್ಯಕರ್ತರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ಪ್ರವೀಣ್ ಕುಮಾರ್ ಹೇಳಿದರು.
ಹರ್ಷ ಹತ್ಯೆಯಾದಾಗಲೇ ಬಿಜೆಪಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ, ಮೇಲ್ನೋಟಕ್ಕೆ ಕಾರ್ಯಕರ್ತರ ಕಣ್ಣಿಗೆ ಮಣ್ಣೆರಚಿದ ಬಿಜೆಪಿ ನಾಯಕರು, ಬಳಿಕ ನಿರ್ಲಕ್ಷ್ಯ ವಹಿಸಿದ್ದರು. ಹರ್ಷ ಆರೋಪಿಗಳು ಜೈಲಿನಲ್ಲಿ ವಿಡಿಯೋ ಕಾಲ್ ಮಾಡಿಕೊಂಡು ಮಜಾ ಮಾಡುತ್ತಿರುವ ವಿಡಿಯೋಗಳು ಹೊರ ಬಂದಿದ್ದವು. ಇದರ ಬಗ್ಗೆ ವಿಚಾರಿಸಲು ಹೋದ ಹರ್ಷ ಅವರ ಸಹೋದರಿಗೆ ಗೃಹ ಸಚಿವರು ಬೈದು ಕಳಿಸಿದ್ದರು. ಇದು ಬಿಜೆಪಿಯ ದುರಾಡಳಿತದ ಕೈಗನ್ನಡಿಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಂಗಳವಾರ ರಾತ್ರಿ ನಡೆದಿದ್ದರೂ, ಆಸ್ಪತ್ರೆಯಿಂದ ಮೃತದೇಹ ಮನೆಗೆ ಸಾಗಿಸುವವರೆಗೂ ಒಬ್ಬರೇ ಒಬ್ಬ ನಾಯಕರು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಪಕ್ಷಕ್ಕಾಗಿ ಪ್ರಾಣ ಬಲಿಕೊಟ್ಟ ಕಾರ್ಯಕರ್ತನಿಗೆ ಬಿಜೆಪಿ ಕೊಟ್ಟ ಗೌರವ ಇದೇನಾ? ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕ ಪ್ರಾಣ ಬಿಟ್ಟಿದ್ದಾನೆ. ಆತನ ಕುಟುಂಬದ ಸ್ಥಿತಿ ಏನು? ಎಂದು ಪ್ರವೀಣ್ ಕುಮಾರ್ ಪ್ರಶ್ನಿಸಿದರು.
ಪ್ರತಿ ಬಾರಿಯು ಕೊಲೆ ನಡೆದಾಗ, ಸೂಕ್ತ ಕ್ರಮ, ಕಠಿಣ ಕ್ರಮ ಎಂಬ ಹೇಳಿಕೆ ನೀಡಿ ಸಚಿವರು, ಸಿಎಂ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ, ಇದರಿಂದ ಜನರು ಎಷ್ಟು ರೋಸಿ ಹೋಗಿದ್ದಾರೆ ಎನ್ನುವುದಕ್ಕೆ ಬೆಳ್ಳಾರೆಯಲ್ಲಿ ಬಿಜೆಪಿ ಮುಖಂಡರಿಗೆ ಕಾರ್ಯಕರ್ತರು ಮುತ್ತಿಗೆ ಹಾಕಿರುವುದೇ ಸಾಕ್ಷಿಯಾಗಿದೆ. ಸರ್ಕಾರ ನಡೆಸಲು ವಿಫಲವಾಗಿರುವ ಸಿಎಂ ಬಸವರಾಜ್ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ಅವರು ಒತ್ತಾಯಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka