ಸಂಜೀವ ಮಠಂದೂರು ಮನೆಗೆ ಬಂದ ಬಿಜೆಪಿ ಮುಖಂಡರಿಗೆ ಕಾರ್ಯಕರ್ತರಿಂದ ತರಾಟೆ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದ ಬಿಜೆಪಿ ಪಕ್ಷದ ಟಿಕೆಟ್ ವಂಚಿತರಾಗಿರುವ ಸಂಜೀವ ಮಠಂದೂರು ಅವರ ಮನೆಗಾಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಹಾಗೂ ಗಣೇಶ್ ಕಾರ್ಣಿಕ್ ಅವರನ್ನು ಕಾರ್ಯಕರ್ತರು ತರಾಟೆಗೆತ್ತಿಕೊಂಡ ಘಟನೆ ನಡೆಯಿತು.
ಮನೆಗೆ ಆಗಮಿಸುತ್ತಿದ್ದಂತೆ ದಾರಿಮಧ್ಯವೇ ತಡೆದ ಕಾರ್ಯಕರ್ತರು, ತಮ್ಮ ಆಕ್ರೋಶ ಹೊರಗೆಡವಿದರು. ಸಂಜೀವ ಮಠಂದೂರು ಅವರನ್ನು ಕಡೆಗಣಿಸಲು ಕಾರಣವೇನು ಎಂದು ಪ್ರಶ್ನಿಸಿದ ಕಾರ್ಯಕರ್ತರು, ಹಾಗಾದರೆ ಮಂಡಲ, ಜಿಲ್ಲೆಯ ಪದಾಧಿಕಾರಿಗಳ ನಿರ್ಣಯಕ್ಕೆ ಬೆಲೆ ಇಲ್ಲವೇ? ಬೆಲೆ ಇಲ್ಲ ಎಂದಾದರೆ ನೀವು ಆ ಹುದ್ದೆಯಲ್ಲಿ ಇರುವುದಾದರೂ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಪ್ರಾಮಾಣಿಕವಾಗಿ ದುಡಿದಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಈಗ ಅವರನ್ನು ಕಡೆಗಣಿಸುವುದು ಎಂದಾದರೆ, ಇದರ ಅರ್ಥವೇನು? ಪ್ರಾಮಾಣಿಕರಿಗೆ ಬಿಜೆಪಿಯಲ್ಲಿ ಬೆಲೆಯೇ ಇಲ್ಲ ಎಂದಾಯಿತು. ನಾವು ಬಿಜೆಪಿ ಪರವಾಗಿ ಕೆಲಸವೇ ಮಾಡುವುದಿಲ್ಲ. ನೀವೇ ಪ್ರಚಾರ ಕಾರ್ಯ ನಡೆಸಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಿ ಎಂದು ತಮ್ಮ ಅಸಹನೆ ಹೊರಗೆಡವಿದರು.
ಪುತ್ತೂರು ಬಿಜೆಪಿಯ ಕಾರ್ಯಕರ್ತರೆಂದರೆ ಒಂದು ಕುಟುಂಬದಂತಿದ್ದೇವೆ. ನಾವು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ವರಿಷ್ಠರು ಪ್ರಾಮಾಣಿಕರನ್ನು ಕಡೆಗಣಿಸುವುದಾದರೆ, ನಾವು ಕೆಲಸ ಮಾಡುವುದಾದರೂ ಯಾಕಾಗಿ. ಇದುವರೆಗೆ ಭೇಟಿ ನೀಡದವರು ಈಗ ಯಾಕಾಗಿ ಭೇಟಿ ನೀಡುವುದು ಎಂದು ಪ್ರಶ್ನಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw