ದೇವರ ಗ್ರಾಮದಲ್ಲಿ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನ: ಬುಲ್ಡೋಜರ್ ತಂದು ಕಾಂಪೌಂಡನ್ನು ಧ್ವಂಸ ಮಾಡಿಸಿದ ಬಿಜೆಪಿ ಶಾಸಕ
ಮಧ್ಯಪ್ರದೇಶದ ದೇವರ ಗ್ರಾಮದಲ್ಲಿರುವ ಮುಸ್ಲಿಮರನ್ನು ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿನ ಬಿಜೆಪಿ ಶಾಸಕ ಪ್ರದೀಪ ಪಟೇಲ್ ಅವರು ತನ್ನ ಬೆಂಬಲಿಗರೊಂದಿಗೆ ಬುಲ್ಡೋಜರ್ ತಂದು ಮುಸ್ಲಿಮರು ವಾಸಿಸುತ್ತಿರುವ ಪ್ರದೇಶದ ಕಾಂಪೌಂಡ್ ಹಾಲನ್ನು ಧ್ವಂಸಗೊಳಿಸಿದ್ದಾರೆ.
ಇಲ್ಲಿನ ಮಹಾದೇವನ್ ಮಂದಿರದ ಆಸುಪಾಸಿನಲ್ಲಿ ಮುಸ್ಲಿಮರು ವಾಸಿಸುತ್ತಿದ್ದಾರೆ. ಆದರೆ ಅವರನ್ನು ತೆರವುಗೊಳಿಸಬೇಕು ಎಂದು ಈ ಶಾಸಕರು ಮತ್ತು ಅವರ ಬೆಂಬಲಿಗರು ಆಗ್ರಹಿಸಿದ್ದಾರೆ.
ಮುಸ್ಲಿಮರು ಜಾಗ ಕಬಳಿಸಿಕೊಂಡಿದ್ದಾರೆ ಎಂದು ಶಾಸಕ ಪ್ರದೀಪ ಪಟೇಲ್ ಮತ್ತವರ ತಂಡ ಆರೋಪಿಸಿದೆ. ಬುಲ್ಡೋಜರ್ ತಂದು ಕಾಂಪೌಂಡ್ ಹಾಲನ್ನು ಒಡೆದು ಹಾಕಿದ ಸಂದರ್ಭದಲ್ಲಿ ಘರ್ಷಣೆಯ ವಾತಾವರಣ ಉಂಟಾಗಿದ್ದು ಕಲ್ಲೆಸೆತಗಳು ನಡೆದಿವೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಇದೇ ವೇಳೆ ಈ ವಿಷಯ ಕೋರ್ಟಿನ ಮೆಟ್ಟಿಲು ಹತ್ತಿದ್ದು ವಿವಾದಿತ ಸ್ಥಳದ ಬಗ್ಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ. ಭೂ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿರುವವರನ್ನು ಯಾವ ಕಾರಣಕ್ಕೂ ಮುಂದಿನ ಆದೇಶದ ವರೆಗೆ ಎಬ್ಬಿಸಬಾರದು ಎಂದು ಕೋರ್ಟ್ ಆದೇಶಿಸಿದೆ. ಈ ಆದೇಶದ ಹೊರತಾಗಿಯೂ ನಿರ್ದಿಷ್ಟ ಗುಂಪು ಪ್ರತಿಭಟನೆಯಲ್ಲಿ ತೊಡಗಿದೆ ಎಂದು ಗೊತ್ತಾಗಿದೆ.
ಮಂದಿರದ ಆಸುಪಾಸಿನ 9 ಎಕ್ರೆ ಭೂಮಿಯನ್ನು ಕಬಳಿಸಲಾಗಿದ್ದು ಇಲ್ಲಿಯ ಮುಸ್ಲಿಮರನ್ನು ತೆರೆವುಗೊಳಿಸಬೇಕು ಎಂದು ಸ್ಥಳೀಯ ನಾಯಕ ಸಂತೋಷ್ ತಿವಾರಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಈ ಪ್ರದೇಶದ 90 ಶೇಕಡಾ ಜಾಗವನ್ನು ಮುಸ್ಲಿಮರು ಆಕ್ರಮಿಸಿದ್ದು ಉಳಿದ ಹತ್ತು ಶೇಕಡವನ್ನು ದಲಿತರು ಆಕ್ರಮಿಸಿದ್ದಾರೆ ಎಂದು ಆತ ದೂರಿದ್ದಾನೆ.
ಇದೇ ವೇಳೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಬಿಜೆಪಿ ಶಾಸಕ ಪ್ರದೀಪ್ ಪಟೇಲ್ ನನ್ನು ಬಂಧಿಸಲು ನ್ಯಾಯಾಲಯ ಆದೇಶಿಸಿದೆ. ಹಾಗೆಯೇ ಪ್ರದೀಪ್ ಪಟೇಲರನ್ನು ಪೊಲೀಸರು ಬಂಧಿಸಿರುವುದಾಗಿಯೂ ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj