‘ಧಮ್ ಇದ್ರೆ’ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ ಬಿಜೆಪಿ ನಾಯಕರ ವಿರುದ್ದ ಪ್ರಕರಣ ದಾಖಲಿಸಿ: ವೆರೋನಿಕಾ ಕರ್ನೆಲಿಯೋ ಸವಾಲು - Mahanayaka
10:15 PM Thursday 12 - December 2024

‘ಧಮ್ ಇದ್ರೆ’ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡಿದ ಬಿಜೆಪಿ ನಾಯಕರ ವಿರುದ್ದ ಪ್ರಕರಣ ದಾಖಲಿಸಿ: ವೆರೋನಿಕಾ ಕರ್ನೆಲಿಯೋ ಸವಾಲು

paresh mesta
06/10/2022

ಉಡುಪಿ: ಪರೇಶ್ ಮೇಸ್ತನ ಹೆಣವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿ ಕೊಟ್ಯಾಂತರ ಆಸ್ತಿಪಾಸ್ತಿಗಳ ನಷ್ಟಕ್ಕೆ ಕಾರಣವಾದ ಬಿಜೆಪಿ ನಾಯಕರ ವಿರುದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಿಜವಾದ ಧಮ್ಮಿದ್ದರೆ ಪ್ರಕರಣ ದಾಖಲಿಸಿ ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸಲಿ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.

2017 ರ ಡಿಸೆಂಬರ್ 6 ರಂದು ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತಾನ ಸಾವಿಗೆ ಬಿಜೆಪಿಯವರು ಬಣ್ಣ ಹಚ್ಚಿದರು. ಕಾಂಗ್ರೆಸ್ ನವರು ಮಾಡಿಸಿದ್ದು ಎಂದು ಅಪಪ್ರಚಾರ ಮಾಡಿದರು. ಇದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿದ್ದಲ್ಲದೆ ಇಡೀ ಹೊನ್ನಾವರ, ಕಾರವಾರ ಹೊತ್ತಿ ಉರಿಯಲು ಬಿಜೆಪಿಗರು ಕಾರಣರಾದರು. ಬಿಜೆಪಿಗರು ಹೆಣದ ಮೇಲೆ ರಾಜಕೀಯ ಮಾಡಲು ಹೋಗಿದ್ದರಿಂದ ಈ ಪರಿಸ್ಥಿತಿ ಉಂಟಾಯಿತು. ಇದಕ್ಕೆ ಕಾರಣರಾದ ಬಿಜೆಪಿ ನಾಯಕರುಗಳನ್ನು ಆರೋಪಿಗಳನ್ನಾಗಿ ಮಾಡಬೇಕು. ಈ ಮೂಲಕ ಮೃತ ಪರೇಶ್ ಮೇಸ್ತನ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು.

ಈ ಸಾವಿಗೆ ಬಿಜೆಪಿ ನಾಯಕರು ಹಿಂದುತ್ವದ ಬಣ್ಣ ಕಟ್ಟಿ‌ ಕರಾವಳಿ ಭಾಗದಲ್ಲಿ ಕೋಮು ಸಂಘರ್ಷ, ಗಲಭೆ ಸೃಷ್ಟಿಸಿದ್ದರು. ಅಂದಿನ ಗಲಭೆಯಲ್ಲಿ ಐಜಿಪಿ ಕಾರಿಗೆ ಕಲ್ಲು ತೂರಿ ಲಾಟಿಚಾರ್ಜ್ ಕೂಡ ನಡೆದಿತ್ತು. ಅಂದಿನ ದೊಂಬಿ ಮತ್ತು ಗಲಾಟೆಗೆ ಯಾರು ಹೊಣೆ?

ಪರೇಶ್ ಮೇಸ್ತಾ ಸಾವನ್ನು ಧಾರ್ಮಿಕ ಹತ್ಯೆ ಎಂದು ಬಿಂಬಿಸಿದ್ದ ಬಿಜೆಪಿ ಯವರು ಇಡೀ ಕರಾವಳಿಯನ್ನೇ ಕೋಮುದಳ್ಳುರಿಗೆ ತಳ್ಳಿದ್ದರು. ಅಂದಿನ ನಮ್ಮ ಸರ್ಕಾರ ಯಾವ ಹಿಂಜರಿಕೆಯೂ ಇಲ್ಲದೇ ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ ಮೇಸ್ತಾ ಸಾವು ಸ್ವಾಭಾವಿಕ ಎಂದು ನ್ಯಾಯಾಲಯಕ್ಕೆ ವರದಿ ನೀಡಿದೆ.

ಪರೇಶ್ ಮೇಸ್ತಾ ಪ್ರಕರಣ ಕೇವಲ ಹೊನ್ನಾವರಕ್ಕೆ ಸೀಮಿತಗೊಳಿಸದ ಬಿಜೆಪಿಗರು ಉಡುಪಿ ಜಿಲ್ಲೆಗೂ ಚುನಾವಣಾ ವಿಚಾರವನ್ನಾಗಿಸಿ ಲಾಭ ಪಡೆಯಲು ಯತ್ನಿಸಿದ್ದರು. ತಮ್ಮ ಮಗನ ಸಾವಿನ ನೋವಿನಲ್ಲಿದ್ದರೂ ಕೂಡ ಬಿಜೆಪಿಗರು ಆತನ ಹೆತ್ತವರನ್ನು ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡು ಕೀಳು ರಾಜಕೀಯ ಮಾಡಿದ್ದು ಜಿಲ್ಲೆಯ ಜನ ಮರೆತಿಲ್ಲ.

ಅಂದು ಚೀರಾಡುತ್ತಿದ್ದ ಸೋ ಕಾಲ್ಡ್ ಬಿಜೆಪಿ ನಾಯಕರು ಈಗ ಯಾಕೆ ಮೌನಕ್ಕೆ ಶರಣಾಗಿದ್ದಾರೆ?  ಪರೇಶ್ ಮೇಸ್ತಾ ಸಾವು ಸ್ವಾಭಾವಿಕ ಎಂದು ಸಿಬಿಐ ತನಿಖೆಯಿಂದ ಗೊತ್ತಾಗಿದೆ. ಆದರೆ, ಈ ಸಾವನ್ನು ರಾಜಕೀಯಗೊಳಿಸಿ ದೊಂಬಿ ಎಬ್ಬಿಸಿದ್ದ ಬಿಜೆಪಿಯವರು ನಿಜವಾದ ಸಮಾಜ ಘಾತಕರಲ್ಲವೇ? ಸುಳ್ಳು ಅಪಾದನೆ ಮಾಡಿ ಶಾಂತಿ ಭಂಗ ಮಾಡಿದ್ದು ಅಪರಾಧವಲ್ಲವೇ?

ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ. ಡಿ.ಕೆ ರವಿ ಪ್ರಕರಣ – ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ, ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ – ಸರ್ಕಾರಕ್ಕೆ ಸಂಬಂಧವಿಲ್ಲ, ಪರೇಶ್ ಮೇಸ್ತಾ ಪ್ರಕರಣ – ಕೊಲೆ ಎಂದು  ಸುಳ್ಳು ಹೇಳಿದ್ದ   ಬಿಜೆಪಿಯವರಿಗೆ ಆತ್ಮಸಾಕ್ಷಿಯಿದ್ದರೆ ಬಹಿರಂಗ ಕ್ಷಮೆ ಕೇಳಲಿ ಅಲ್ಲದೆ ಸುಳ್ಳು ಹೇಳಿ ಮತ ರಾಜಕೀಯ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲಿ  ಎಂದು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ