ಸಚಿವ ಸುಧಾಕರ್ ರಾಜೀನಾಮೆ ಕೇಳಿದ ರೇಣುಕಾಚಾರ್ಯ | ಬಿಜೆಪಿಯೊಳಗೇ ಒಂದು ವಿರೋಧ ಪಕ್ಷ ಇದೆಯೇ!?
ಹೊನ್ನಾಳಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ತಮ್ಮ ಪಕ್ಷದ ಸಚಿವರದ್ದೇ ರಾಜೀನಾಮೆಯನ್ನು ಕೇಳಿದ್ದು, ಕೊವಿಡ್ ನಿರ್ವಹಣೆ ವಿಫಲ ಹಿನ್ನೆಲೆಯಲ್ಲಿ ಸಚಿವ ಸುಧಾಕರ್ ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗುರುವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊವಿಡ್ ನಿಂದಾಗಿ ಸಾವು ಹೆಚ್ಚಾಗುತ್ತಿದ್ದು, ಆರೋಗ್ಯ ಸಚಿವ ಡಾ.ಸುಧಾಕರ್ ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.
ನನಗೆ ಎರಡು ಖಾತೆ ಬೇಕು ಎಂದು ಸುಧಾಕರ್ ಹಠ ಮಾಡಿ ಖಾತೆ ಗಿಟ್ಟಿಸಿಕೊಂಡರು. ಇದೇನಾ ಅವರು ಎರಡು ಖಾತೆಗಳನ್ನು ನಿಭಾಯಿಸುತ್ತಿರುವ ವೈಖರಿ ಎಂದು ಕಿಡಿಕಾರಿದ ಅವರು, ಸಚಿವರ ದುರ್ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆರೋಪಿಸಿದರು.
ನಿನ್ನೆಯಷ್ಟೇ ಸಂಸದ ತೇಜಸ್ವಿ ಸೂರ್ಯ ತಮ್ಮದೇ ಸರ್ಕಾರದ ಹಗರಣವನ್ನು ಬಯಲಿಗೆಳೆದರು. ಇಂದು ತಮ್ಮದೇ ಸರ್ಕಾರದ ಸಚಿವರ ರಾಜೀನಾಮೆಯನ್ನು ಸಿಎಂ ಅವರ ರಾಜಕೀಯ ಕಾರ್ಯದರ್ಶಿಯೇ ಕೇಳುತ್ತಿದ್ದಾರೆ. ಬಿಜೆಪಿಯೊಳಗೇ ಆಡಳಿತ ಪಕ್ಷ, ವಿರೋಧ ಪಕ್ಷ ಸೃಷ್ಟಿಯಾಗಿದೆಯೇ ಎನ್ನುವ ಗೊಂದಲದಲ್ಲಿ ಜನರಿದ್ದಾರೆ.