ಮಲೆಮಹದೇಶ್ವರ ಸನ್ನಿದಿಯಲ್ಲಿ ಬಿಜೆಪಿ ರಣಕಹಳೆ: ಕಾಂಗ್ರೆಸ್ ಮುಳುಗುವ ಹಡಗು: ಬಿಎಸ್ ವೈ ಗುಡುಗು
ಗಡಿ ಜಿಲ್ಲೆ ಚಾಮರಾಜನಗರದ ಪ್ರಸಿದ್ದ ಯಾತ್ರಾ ಸ್ಥಳ ಪವಾಡ ಪುರುಷ ಮಲೆಮಹದೇಶ್ವರನಬೆಟ್ಟದಲ್ಲಿ ಭಾರತೀಯ ಜನತಾ ಪಾರ್ಟಿ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ರಣಕಹಳೆ ಮೊಳಗಿಸಿತು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆಮಹದೇಶ್ವರಬೆಟ್ಟದಲ್ಲಿಂದ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಹದೇಶ್ವರರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ನಂತರ ಮಹದೇಶ್ವರನ ಸನ್ನಿದಿಯಲ್ಲಿ ನಗಾರಿ ಬಾರಿಸಿ ಬಿಜೆಪಿ ಪಕ್ಷದ ಭಾವುಟ ತೋರಿಸುವ ಮೂಲಕ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ನಡ್ಡ ಚಾಲನೆ ನೀಡಿದರು.
ಕಾಂಗ್ರೆಸ್ ಮುಳುಗುವ ಹಡಗು, ಕರ್ನಾಟಕದಲ್ಲಿ ಬಿಜೆಪಿ ಬರುವುದು ಶತಸಿದ್ಧ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಗುಡುಗಿದರು.ನಾನು ಇನ್ನು ಚುನಾವಣಾ ರಾಜಕೀಯಕ್ಕೆ ಬರುವುದಿಲ್ಲ, ನಾಡಿನಾದ್ಯಂತ ಓಡಾಡಿ 130-140 ಸ್ಥಾನವನ್ನು ಈ ಚುನಾವಣೆಯಲ್ಲಿ ತಂದುಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳೆ, ಯುವಕರು, ಹಿಂದುಳಿದವರ ಪರ ನಾನು ಹಾಗೂ ಬೊಮ್ಮಾಯಿ ಉತ್ತಮ ಆಡಳಿತ ಕೊಟ್ಟಿದ್ದು ಮುಂದೆಯೂ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ, ಇಂದಿನಿಂದ ಪುಣ್ಯಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ಹೊರಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ವಿರುದ್ಧ ನಡ್ಡ ವಾಗ್ದಾಳಿ- ಚಿತ್ರಣ ಬದಲಿಸುವ ಭರವಸೆ:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ. ಸೋಲಿಗರ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೊಮ್ಮಾಯಿ ನೇತೃತ್ವದಲ್ಲಿ ಯಡಿಯೂರಪ್ಪ ಆಶೀರ್ವಾದದೊಂದಿಗೆ ಕರ್ನಾಟಕದಲ್ಲಿ ಈ ಬಾರಿ ವಿಜಯ ಪತಾಕೆಯನ್ನು ಹಾರಿಸುತ್ತೇವೆ, ಮಲೆ ಮಹದೇಶ್ವರನ ಆಶೀರ್ವಾದ ಖಂಡಿತಾ ಇರಲಿದೆ.
ಕಾಂಗ್ರೆಸ್ ಆಡಳಿತವು ಒಡೆದು ಆಳುವ ನೀತಿ ಅನುಸರಿಸಿತ್ತು. ಆದರೆ, ಬಿಜೆಪಿಯು ಸರ್ವರ ಹಿತ ಕಾಯುವ, ಸರ್ವರ ಪ್ರಗತಿಯ ಮೋದಿ ಸರ್ಕಾರ ಈಗಿದ್ದು ಭಾರತ ವಿಶ್ವದಲ್ಲಿ ಅಗ್ರಮಾನ್ಯ ರಾಷ್ಟ್ರವಾಗಿದ್ದು 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ, ಬುಡಕಟ್ಟು ಮಹಿಳೆಯೊಬ್ಬರನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಅಲಂಕರಿಸಿದ್ದು ಮೋದಿ ಸರ್ಕಾರ ಎಂದು ಕೈ ಪಡೆ ವಿರುದ್ಧ ವಾಗ್ದಾಳಿ ನಡೆಸಿದರು.
ನಾನು ಬರಿ ಇಲ್ಲಿ ನಿಮ್ಮ ಸಮಸ್ಯೆ ಕೇಳಿಕೊಂಡು ಹೋಗುವುದಿಲ್ಲ, ನನ್ನ ಮೇಲೆ ವಿಶ್ವಾಸವಿಡಿ ಮಲೆಮಹದೇಶ್ವರ ಬೆಟ್ಟದ ಚಿತ್ರಣವನ್ನೇ ಬದಲಿಸುತ್ತೇನೆ, ಕರುನಾಡಿನ ಅಭಿವೃದ್ಧಿ ವೇಗವೂ ಬದಲಾಗಲಿದೆ ಎಂದು ಆಶ್ವಾಸನೆ ನೀಡಿದರು.
ಜನಮನ ಗೆಲ್ಲುತ್ತೇವೆಂದ ಸಿಎಂ:
ಇನ್ನು, ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಈ ಬಾರಿಯೂ ಬಿಜೆಪಿ ಸರ್ಕಾರ ಜನಮನ ಗೆಲ್ಲಲಿದೆ, ಶ್ರೀಕ್ಷೇತ್ರದಿಂದ ಆರಂಭವಾಗಿರುವ ವಿಜಯ ಸಂಕಲ್ಪ ಯಾತ್ರೆ ರಾಜ್ಯದಲ್ಲಿ ದಿಗ್ವಿಜಯ ಸಾಧಿಸಲಿದೆ ಎಂದು ಆತ್ಮವಿಶ್ವಾಸದ ಮಾತುಗಳನ್ನಾಡಿದರು.
ಸಚಿವ ಸೋಮಣ್ಣ ಗೈರು: ಅಸಮಾಧಾನದ ಹೊಗೆ
.ರಥಯಾತ್ರೆಯ ಈಶ್ವರಪ್ಪ ತಂಡದಲ್ಲಿರುವ ಸಚಿವ ಸೋಮಣ್ಣ ರಾಷ್ಟ್ರೀಯ ಅದ್ಯಕ್ಷರ ಕಾರ್ಯಕ್ರಮ ಕ್ಕೆ ಗೈರಾಗಿದ್ದು ಗುಸುಗುಸು ಚರ್ಚೆಗೆ ಕಾರಣವಾಯಿತು. ವೇದಿಕೆಯಲ್ಲಿ ಸಚಿವರ ಅನುಪಸ್ಥಿತಿ ಅಥವಾ ಅದಕ್ಕೆ ಕಾರಣ ನೀಡುವುದಕ್ಕೂ ಗಣ್ಯರು ಮುಂದಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು.ಮಲೆಮಹದೇಶ್ವರ ಬೆಟ್ಟದಲ್ಲಿ ಆರಂಭವಾದ ರಥಯಾತ್ರೆಯು ಹನೂರಿಗೆ ತೆರಳಿ ಬಹಿರಂಗ ಸಮಾವೇಶ ನಡೆಸಿ ಬಳಿಕ, ಕೊಳ್ಳೇಗಾಲದಲ್ಲಿ ರೋಡ್ ಶೋ, ಸಮಾವೇಶ ಕಾರ್ಯಕ್ರಮ ನಡೆಸಲಾಯಿತು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw