ಬಿಜೆಪಿ ಶಾಸಕರ ಹೇಳಿಕೆಯಿಂದ ಜನರು ಭಯಭೀತರಾಗಿದ್ದಾರೆ | ಮಾಜಿ ಸಚಿವ ಆಂಜನೇಯ ಹೇಳಿಕೆ
ಚಿತ್ರದುರ್ಗ: ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರ ನಿರ್ಲಕ್ಷ್ಯದ ಹೇಳಿಕೆಯಿಂದ ಜನರಲ್ಲಿ ಭೀತಿ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಆರೋಪಿಸಿದ್ದು, ಅವರು ಕರ್ತವ್ಯ ಪ್ರಜ್ಷೆ ಮರೆತು ಮಾತನಾಡಿದ್ದಾರೆ ಎಂದು ಆಂಜನೇಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಆರೋಗ್ಯಾಧಿಕಾರಿ ತಪ್ಪು ಮಾಡಿದರೆ, ಚಂದ್ರಪ್ಪ ಅವರು ತಮ್ಮ ಅಧಿಕಾರವನ್ನು ಚಲಾಯಿಸಬಹುದಿತ್ತು. ಅದನ್ನು ಬಿಟ್ಟು, ಆಸ್ಪತ್ರೆ ತೆರೆಯಲು ಅವಕಾಶ ನೀಡುವುದಿಲ್ಲ, ಎಂದು ಹೇಳುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಎಂ.ಚಂದ್ರಪ್ಪ ಅವರು ಕ್ಷೇತ್ರ ಸುತ್ತಿದರೂ ಜನರ ಆರೋಗ್ಯ ವಿಚಾರಿಸಿಲ್ಲ. ಗ್ರಾಮೀಣ ಪ್ರದೇಶದ ಕೋವಿಡ್ ಆರೈಕೆ ಕೇಂದ್ರ ಹಾಗೂ ಆರೋಗ್ಯ ಕೇಂದ್ರಗಳನ್ನು ಪರಿಶೀಲಿಸಿಲ್ಲ. ಕ್ಷೇತ್ರದಲ್ಲಿ ಆರೋಗ್ಯ ಸೇವೆ ಸಂಪೂರ್ಣ ಹದಗೆಟ್ಟಿದೆ ಎಂದು ಆಂಜನೇಯ ಆರೋಪಿಸಿದರು.
ನಾನು ಸಚಿವನಾಗಿದ್ದ ಸಂದರ್ಭದಲ್ಲಿ ಎಚ್.ಡಿ.ಪುರದಲ್ಲಿ 2.5 ಕೋಟಿ ರೂ. ಹಾಗೂ ರಾಮಗಿರಿಯಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಿಸಿದ್ದೆ. ಚುನಾವಣೆ ಎದುರಾಗಿದ್ದರಿಂದ ಉದ್ಘಾಟನೆ ಸಾಧ್ಯವಾಗಲಿಲ್ಲ. ಮೂರು ವರ್ಷವಾದರೂ ಈ ಕಟ್ಟಡ ಉದ್ಘಾಟಿಸದೇ ಶಾಸಕ ಚಂದ್ರಪ್ಪ ನಿರ್ಲಕ್ಷ್ಯ ತೋರಿದ್ದಾರೆ ಎಂದು ಆಂಜನೇಯ ಗಂಭೀರ ಆರೋಪ ಮಾಡಿದ್ದಾರೆ.