“ಮಾಸ್ಕ್ ಎಲ್ಲಿಟ್ಟಿದ್ದೇನೆ ಅಂತ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದ ಬಿಜೆಪಿ ಶಾಸಕ ಕೊರೊನಾಕ್ಕೆ ಬಲಿ
ಲಕ್ನೋ: ಕೊರೊನಾ ಮಹಾಮಾರಿಯನ್ನು ನಿರ್ಲಕ್ಷ್ಯಿಸಿದ ಬಿಜೆಪಿ ಹಾಲಿ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಕೊರೊನಾಕ್ಕೆ ಬಲಿಯಾಗಿದ್ದು, ಇತ್ತೀಚೆಗೆ ಅವರು ಕೊವಿಡ್ ವಿಚಾರವಾಗಿ ನೀಡಿದ್ದ ನಿರ್ಲಕ್ಷ್ಯದ ಹೇಳಿಕೆ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಅವರು ಕೊರೊನಾದಿಂದ ಮೃತಪಟ್ಟಿದ್ದಾರೆ.
ಉತ್ತರೊ್ರದೇಶದ ನವಾಬ್ ಗಂಜ್ ಕ್ಷೇತ್ರದ 64 ವರ್ಷ ವಯಸ್ಸಿನ ಶಾಸಕ ಕೇಸರ್ ಸಿಂಗ್ ಗಂಗ್ವಾರ್ ಇತ್ತೀಚೆಗೆ ಮಾಸ್ಕ್ ಧರಿಸದೇ ವಿಧಾನಸಭಾ ಅಧಿವೇಶನಕ್ಕೆ ಬಂದಿದ್ದರು. ಮಾಸ್ಕ್ ಧರಿಸದ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯೊಬ್ಬರು ಅವರನ್ನು ಇದೇ ವೇಳೆ ಪ್ರಶ್ನಿಸಿದ್ದು, ಈ ವೇಳೆ ಅವರು, ಕೊರೊನಾ ನಿರ್ನಾಮವಾಗಿದೆ. ನಾನೇಕೆ ಮಾಸ್ಕ್ ಧರಿಸಬೇಕು? ನನ್ನ ಮಾಸ್ಕ್ ಎಲ್ಲಿಟ್ಟಿದ್ದೇನೆ ಎನ್ನುವುದು ನನಗೇ ಗೊತ್ತಿಲ್ಲ ಎಂದು ವ್ಯಂಗ್ಯ ಮಾಡಿದ್ದರು.
ಏಪ್ರಿಲ್ 18ರಂದು ಕೇಸರ್ ಸಿಂಗ್ ಅವರಿಗೆ ಕೊರೊನಾ ತಗಲಿದ್ದು, ಅವರು ಬರೇಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ಇನ್ನೂ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡುವುದು ಸಾರ್ವಜನಿಕರ ಕರ್ತವ್ಯವಾಗಿದ್ದು, ಕೊರೊನಾ ನಿಯಂತ್ರಣಕ್ಕೆ ಈ ಕ್ರಮ ಬಹಳ ಮುಖ್ಯವಾಗಿದೆ. ಈ ವಿಚಾರದಲ್ಲಿ ಯಾರೂ ಕೂಡ ನಿರ್ಲಕ್ಷ್ಯ ವಹಿಸಬಾರದರು ಎಂದು ಈ ಘಟನೆಯ ಬೆನ್ನಲ್ಲೇ ತಜ್ಞರು ಸಲಹೆ ನೀಡಿದ್ದಾರೆ.