ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ, ಬಿಜೆಪಿಗೆ ದೇವರ ಆಶೀರ್ವಾದ: ನಳಿನ್ ಕುಮಾರ್ ಕಟೀಲ್
ಬೆಂಗಳೂರು: ರಾಜ್ಯದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. ಇಲ್ಲಿ ದೇವರು ಬಿಜೆಪಿ ಗೆಲುವಿಗೆ ಆಶೀರ್ವಾದ ಮಾಡಿದ್ದಾರೆ. ಯಲಬುರ್ಗಾದಲ್ಲಿ ಮಾತ್ರವಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಕುಕನೂರಿನಲ್ಲಿ “ವಿಜಯ ಸಂಕಲ್ಪ ಯಾತ್ರೆ” ಪೇಜ್ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು. ಕಮಲ ಅರಳಿಸಲು ರಾಮನ ಬಂಟರು ಸಂಕಲ್ಪ ಮಾಡಿದ್ದಾರೆ ಎಂದ ಅವರು, ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಅನುದಾನ ತರುವ ಪ್ರಯತ್ನವನ್ನು ಅವರು ಶ್ಲಾಘಿಸಿದರು. 2024ರಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದೆ. ರಾಮ ಪಟ್ಟಾಭಿಷೇಕ ಆಗಲಿದೆ ಎಂದು ವಿವರಿಸಿದರು.
ಆಂಜನೇಯನ ಮಾಲೆ ಧರಿಸುವುದು, ದತ್ತಮಾಲೆ ಧಾರಣೆಯನ್ನು ಕಾಂಗ್ರೆಸ್ ಹಾಸ್ಯ ಮಾಡಿದೆ. ಕಾಂಗ್ರೆಸ್‍ಗೆ ಟಿಪ್ಪು ಮಾಲೆ ಮೇಲೆ ನಂಬಿಕೆ ಇದೆ ಎಂದು ತಿಳಿಸಿದರು. ಆಂಜನೇಯನ ಪೂಜೆ ಮಾಡುವಿರಾ ಅಥವಾ ಟಿಪ್ಪು ಭಜನೆ ಮಾಡುವಿರಾ ಎಂದು ಪ್ರಶ್ನಿಸಿದರು. ಟಿಪ್ಪು ಸಂತಾನ ಬೇಕಾ? ಶ್ರೀರಾಮ, ಆಂಜನೇಯನ ಭಕ್ತರು ಬೇಕೇ ಎಂದು ಸಂಕಲ್ಪ ಮಾಡುವಂತೆ ಮನವಿ ಮಾಡಿದರು.
ಸಿದ್ರಾಮಣ್ಣನಿಗೆ ಸ್ಪರ್ಧೆಗೆ ಕ್ಷೇತ್ರದ ಕೊರತೆ:
ಮಾಜಿ ಸಿಎಂ ಸಿದ್ರಾಮಣ್ಣ ಕ್ಷೇತ್ರವೇ ಇಲ್ಲದ ಮಾಸ್ ಲೀಡರ್. ಕ್ಷೇತ್ರ ಹುಡುಕಾಟದ ನಾಯಕ. ಕ್ಷೇತ್ರವೇ ಕಾಣದೆ ಕತ್ತಲಲ್ಲಿ ಇರುವವ ಮುಖ್ಯಮಂತ್ರಿ ಆಗಲು ಶರ್ಟ್ ಹೊಲಿಸಿಟ್ಟಿದ್ದಾರೆ. ಅವರು ಹಿಂದೆ ನರೇಂದ್ರ ಮೋದಿ ಪ್ರಧಾನಿ ಆಗುವುದಿಲ್ಲ; ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಅಪ್ಪನಾಣೆ ಹಾಕಿ ಹೇಳಿದ್ದರು. ಆದರೆ, ಅವರ ಮಾತು ಹುಸಿಯಾಗಿದೆ. ನಾನು ಸಿದ್ರಾಮಣ್ಣ ಮತ್ತೆ ಸಿಎಂ ಆಗುವುದಿಲ್ಲ ಎಂದು ಆಣೆ ಹಾಕಿ ಹೇಳುತ್ತೇನೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ಸವಾಲೆಸೆದರು.
ಅವರÀನ್ನು ಬಾದಾಮಿಯಲ್ಲಿ ಓಡಿಸಿದ್ದಾರೆ. ವರುಣಾದಲ್ಲಿ ಬಂದರೆ ಜಾಗ್ರತೆ ಎಂದಿದ್ದಾರೆ. ಕೋಲಾರದಲ್ಲಿ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಸಿದ್ರಾಮಣ್ಣನಿಗೆ ಜಾಗ ಇಲ್ಲವಾಗಿದೆ ಎಂದು ವಿಶ್ಲೇಷಿಸಿದರು. ಮೋದಿಯವರನ್ನು ಜಗತ್ತು ಅಪ್ಪಿಕೊಂಡಿದೆ; ಒಪ್ಪಿಕೊಂಡಿದೆ. ಅವರು ಹೋದಲ್ಲೆಲ್ಲ ಬಿಜೆಪಿಗೆ ಗೆಲುವಾಗುತ್ತಿದೆ. ರಾಹುಲ್ ಗಾಂಧಿ, ಸಿದ್ರಾಮಣ್ಣ ಹೋದಲ್ಲೆಲ್ಲ ಕಾಂಗ್ರೆಸ್ ಮುಕ್ತ ಪ್ರದೇಶವಾಗುತ್ತದೆ ಎಂದು ನುಡಿದರು. ಸಿದ್ರಾಮಣ್ಣ ತಾಕತ್ತಿದ್ದರೆ ಬಾದಾಮಿಯಲ್ಲಿ ಸ್ಪರ್ಧಿಸಲಿ. ಜನ ಏನು ಮಾಡುತ್ತಾರೆಂದು ನೋಡಿ ಎಂದು ಸವಾಲೆಸೆದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬೂತ್ ಅಧ್ಯಕ್ಷರ ಮನೆಗೆ ಬರುವುದು; ಚಹಾ ಸೇವಿಸುವುದು ಕೇವಲ ಬಿಜೆಯಲ್ಲಿ ಮಾತ್ರ ಸಾಧ್ಯ ಎಂದ ಅವರು, ಇದನ್ನು ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷದವರೂ ಮೆಚ್ಚಿಕೊಂಡಿದ್ದರು ಎಂದರಲ್ಲದೆ, ಪ್ರಧಾನಿ ನರೇಂದ್ರ ಮೋದಿಜಿ ಅವರ ತಾಯಿ ಮೃತಪಟ್ಟಾಗ ಸರಳವಾಗಿ ಸಂಸ್ಕಾರ ಮುಗಿಸಿ ತಮ್ಮ ಕರ್ತವ್ಯಕ್ಕೆ ಮರಳಿದ್ದನ್ನು ನೆನಪಿಸಿದರು. ಇದು ನಮ್ಮ ಆದರ್ಶ ಎಂದರು.
ಸೋನಿಯಾ ಕಾಲು ಹಿಡಿದು ಹುದ್ದೆ ಪಡೆದರು:
ಜನತೆ ಆಯ್ಕೆ ಮಾಡಿದ ಜನಪ್ರಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಏಕವಚನದಲ್ಲಿ ಸಿದ್ರಾಮಣ್ಣ ಬೈಯುವುದನ್ನು ನಳಿನ್ ಕುಮಾರ್ ಕಟೀಲ್ ಆಕ್ಷೇಪಿಸಿದರು. ಸಿದ್ರಾಮಣ್ಣನವರು ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಹುದ್ದೆ ಪಡೆದವರು. ದೇವೇಗೌಡರ ಶಿಷ್ಯನಾಗಿ ಎತ್ತರಕ್ಕೆ ಏರಿದ ನೀವು ಅದೇ ದೇವೇಗೌಡರಿಗೆ ತುಳಿದಿರಲ್ಲವೇ ಎಂದು ಪ್ರಶ್ನಿಸಿದರು.
ಹತ್ತಿದ ಏಣಿಯನ್ನೇ ತುಳಿದಿರಲ್ಲವೇ ಸಿದ್ರಾಮಣ್ಣಾ ಎಂದು ಕೇಳಿದರು. ನೀವು ಸೋನಿಯಾ ಭಿಕ್ಷೆಯಿಂದ ಮುಖ್ಯಮಂತ್ರಿ ಆಗಿದ್ದರೆ, ಯಡಿಯೂರಪ್ಪ- ಬೊಮ್ಮಾಯಿ ಜನರ ಬೆಂಬಲದಿಂದ ಸಿಎಂ ಆದವರು ಎಂದು ನುಡಿದರು. ನನ್ನನ್ನು ಜೋಕರ್ ಎನ್ನುವ ಸಿದ್ರಾಮಣ್ಣ ಒಬ್ಬ ಬ್ರೋಕರ್ ಎಂದು ಟೀಕಿಸಿದರು. ಕಪ್ಪಕಾಣಿಕೆ ಕೊಟ್ಟೇ ಅವರು ಸಿಎಂ ಆಗಿದ್ದಾರೆ. ಕರ್ನಾಟಕವನ್ನು ಎಟಿಎಂ ಮಾಡಲು ಕಾಂಗ್ರೆಸ್ ಬಯಸುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಭಯೋತ್ಪಾದಕರಿಗೆ ಬೆಂಬಲ ನೀಡುತ್ತದೆ ಎಂದು ಟೀಕಿಸಿದ ಅವರು, ಡಿಕೆಶಿಗೆ ಬೆಳಗಾವಿ ಕುಕ್ಕರ್ ಮತ್ತು ತೀರ್ಥಹಳ್ಳಿ ಕುಕ್ಕರ್ ಮೇಲೆ ಪ್ರೀತಿ. ಅವರು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ಅಮಾಯಕ ಎನ್ನುತ್ತಾರೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ವ್ಯಂಗ್ಯವಾಡಿದರು.
ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಜೊತೆ ಉಡುಪಿಯ ಕಾಂಗ್ರೆಸ್ ಪದಾಧಿಕಾರಿಯನ್ನು ಕೇಂದ್ರ ತನಿಖಾ ಸಂಸ್ಥೆಯು ಬಂಧಿಸಿತ್ತು. ಆದರೆ, ಡಿಕೆಶಿ ಆತನನ್ನು ಪಕ್ಷದಿಂದ ಅಮಾನತು ಮಾಡಿಲ್ಲ. ಯಾಕೆ ಮಾಡಿಲ್ಲ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಆಡಳಿತ ಬಂದರೆ ಹಿಂದೂಗಳು ಮಾರ್ಗಮಾರ್ಗದಲ್ಲಿ ಸಾಯುವ ದಿನಗಳು ಬರುತ್ತವೆ ಎಂದು ಎಚ್ಚರಿಸಿದರು. ಮತ್ತೆ ಭಯೋತ್ಪಾದಕರ ಅಟ್ಟಹಾಸ ಮುಂದುವರಿಯುತ್ತದೆ ಎಂದು ತಿಳಿಸಿದರು.
ರಾಷ್ಟ್ರಭಕ್ತರು ಬೇಕೇ? ಭಯೋತ್ಪಾದಕರ ಪರ ಇರುವವರು ಬೇಕೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಪಿಎಫ್‍ಐ ನಿಷೇಧಿಸಿದ ಮೋದಿಜಿ, ಅಮಿತ್ ಶಾ ಅವರನ್ನು ಅಭಿನಂದಿಸಿದರು. ಕಾಂಗ್ರೆಸ್ ಪಕ್ಷದವರು ಭಾರತ್ ಮಾತಾಕಿ ಜೈ ಎನ್ನುವುದಿಲ್ಲ. ಸೋನಿಯಾ ಗಾಂಧಿಕಿ, ರಾಹುಲ್ ಗಾಂಧಿಕಿ, ಪ್ರಿಯಾಂಕಾ ಗಾಂಧಿಕಿ ಜೈ ಎನ್ನುತ್ತಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಜೈಲಿನ ಸಂಸ್ಕಾರ ಉಳ್ಳ ಕಳ್ಳರ ಪಕ್ಷ. 9 ವರ್ಷಗಳ ಕಾಲ ಮೋದಿಜಿ ಸರಕಾರದಲ್ಲಿ ಒಂದೇ ಒಂದು ಭ್ರಷ್ಟಾಚಾರದ ಆರೋಪ ಇಲ್ಲ. ಕರ್ನಾಟಕದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಸಿದ್ರಾಮಣ್ಣ ಬಂದರೆ ಟಿಪ್ಪು ಜಯಂತಿ ಮಾತ್ರ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿಗೆ ಮತ ಹಾಕಲು ಕೋರಿದ ಸಿದ್ರಾಮಣ್ಣನನ್ನು ಅಭಿನಂದಿಸುವುದಾಗಿ ತಿಳಿಸಿದರು.
ಸಚಿವರಾದ ಹಾಲಪ್ಪ ಆಚಾರ್ ಮತ್ತು ಆನಂದ ಸಿಂಗ್, ಸಂಸದ ಕರಡಿ ಸಂಗಣ್ಣ, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ಎಂಎಲ್ಸಿ ಹೇಮಲತಾ ನಾಯಕ, ರಾಜ್ಯ ಪಧಾದಿಕಾರಿಗಳು, ಜಿಲ್ಲಾ ಪಧಾದಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ಬೂತ್ ಅಧ್ಯಕ್ಷರು ಮತ್ತು ಪೇಜ್ ಪ್ರಮುಖರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw