ಬೀದಿ ಬೀದಿಯಲ್ಲಿ ಬಿಜೆಪಿಯ ಮಾನ ಮರ್ಯಾದೆ ತೆಗೆಯುತ್ತೇನೆ: ಪ್ರಮೋದ್ ಮುತಾಲಿಕ್
ಉಡುಪಿ: ಬಿಜೆಪಿ ಸರಕಾರದ ಮಾನ ಮರ್ಯಾದೆಯನ್ನು ಬೀದಿ ಬೀದಿಯಲ್ಲಿ ಮನೆ ಮನೆಗೆ ಹೋಗಿ ತೆಗೆಯುತ್ತೇನೆ. ಹಿಂದುತ್ವದ ಪರ ಧ್ವನಿ ಎತ್ತುವ ನನಗೆ ಪದೇ ಪದೇ ನಿರ್ಬಂಧ ಹೇರಿ ನಾಟಕ ಮಾಡ್ತಾ ಇದ್ದೀರಾ? ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಮಂಗಳವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಲಬುರ್ಗಿ ಗಣೇಶೋತ್ಸವಕ್ಕೆ ಪ್ರವೇಶ ನಿಷೇಧ ಹಾಕಿದ್ದು, ಇದು ಜಿಲ್ಲಾಧಿಕಾರಿಗಳ ಆಜ್ಞೆ ಅಲ್ಲ, ಇದು ಬಿಜೆಪಿ ಸರಕಾರದ ಆಜ್ಞೆ. ಪದೇ ಪದೇ ನನಗೆ ನಿರ್ಬಂಧ ಹೇರುವುದು ಬಿಜೆಪಿಗೆ ಶೋಭೆ ತರುವುದಿಲ್ಲ. ನೀವು ತಡೆಯುತ್ತಿರುವುದು ಮುತಾಲಿಕ್‌ನನ್ನು ಅಲ್ಲ ಹಿಂದುತ್ವವನ್ನು ಎಂದರು.
ಹಿಂದುತ್ವದ ಶಕ್ತಿ ಸೇರುವ ಜಾಗಕ್ಕೆ ನಾಯಕನನ್ನು ತಡೆದು ದ್ರೋಹ ಮಾಡುತ್ತಿದ್ದೀರಿ. ಇದು ಸಂವಿಧಾನ ವಿರೋಧಿ ನಡೆ ಮತ್ತು ಸ್ವಾತಂತ್ರ್ಯ ಹರಣವಾಗಿದೆ. ಕಾಂಗ್ರೆಸ್ ಕಾಲದಲ್ಲಿ ಬ್ಯಾನ್ ಮಾಡಿದಾಗ ನೀವು ವಿರೋಧ ಮಾಡಿದ್ದೀರಿ. ಪ್ರವೀಣ್ ನೆಟ್ಟಾರು ಮನೆಗೆ ಸಾಂತ್ವನ ಹೇಳುವಾಗಲೂ ನಿರ್ಬಂಧ, ಗಂಗೊಳ್ಳಿಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲೂ ಭಾಗವಹಿಸಲು ಬಿಟ್ಟಿಲ್ಲ ಎಂದು ಆರೋಪಿಸಿದರು.
ಹಿಂದುಗಳಿಂದ ಯಾವತ್ತೂ ಗಲಭೆಯಾಗಿಲ್ಲ. ಮುಸ್ಲಿಮರನ್ನು, ಶತ್ರುಗಳನ್ನು ದಂಗೆ ಕೋರರನ್ನು ನನ್ನ ಮೇಲೆ ಎತ್ತಿ ಕಟ್ಟುತ್ತೀರಾ? ಹಿಂದುಗಳ ಕೊಲೆಯಾಗುವಾಗ ಸಂಘಟನೆಗಳಿಗೆ ನೀವು ಬಲ ತುಂಬಬೇಕು. ನ್ಯಾಯಾಲಯದಿಂದ ಸರಕಾರಕ್ಕೆ ಜಿಲ್ಲಾಧಿಕಾರಿಗಳಿಗೆ ಎಚ್ಚರಿಕೆ ಕೊಡುವ ಕೆಲಸ ಮಾಡುತ್ತೇನೆ ಎಂದರು.
ಶಿವಮೊಗ್ಗ ಶಂಕಿತ ಭಯೋತ್ಪಾದಕರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಿವಮೊಗ್ಗ ಅಂದರೆ ಹಿಂದುತ್ವದ ಭದ್ರಕೋಟೆ. ಮಲೆನಾಡಿನಲ್ಲಿ ಹಿಂದೂಗಳ ಜಾಗೃತ ಸಮಾಜವಿದೆ. ಮಲೆನಾಡಿನಲ್ಲಿ ಭಯೋತ್ಪಾದಕರ ಅಡಗು ತಾಣಗಳಾಗುತ್ತಿದೆ. ಸರಕಾರ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಹಿಂದೂ ಭದ್ರಕೋಟೆ ಶಿಥಿಲವಾಗುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಸರಕಾರ ಕಠಿಣ ಕ್ರಮ ಕೈಗೊಳ್ಳದಿದ್ದರೆ ಭಯಾನಕ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಇರಾನ್ ಇಸ್ಲಾಮಿಕ್ ರಾಷ್ಟ್ರ. ಇಸ್ಲಾಮಿಕ್ ರಾಷ್ಟ್ರದಲ್ಲಿ ಹಿಜಾಬ್‌ಯನ್ನು ಬ್ಯಾನ್ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಕಟ್ಟರ್ ಮುಸ್ಲಿಂ ರಾಷ್ಟ್ರಗಳಲ್ಲಿ ಮಹಿಳೆಯರನ್ನು ಶೋಷಣೆ ಮಾಡಲಾಗುತ್ತಿದೆ. ಶಿಕ್ಷಣದಿಂದ ವಂಚಿಸಲು ಮನೆಯಿಂದ ಹೊರಗೆ ಬಿಡುತ್ತಿಲ್ಲ. ಪ್ರಾಣಿಗಳಂತೆ ಮಹಿಳೆಯರ ಜತೆ ವರ್ತಿಸಲಾಗುತ್ತಿದೆ. ಹಿಜಾಬ್ ಧರಿಸಿಲ್ಲ ಎಂಬ ಕಾರಣಕ್ಕೆ ಮಹಿಳೆಯನ್ನು ಕೊಲ್ಲುವ ಮೂಲಕ ಇದು ಬಯಲಾಗಿದೆ. ಇರಾನಿನ ಮುಸ್ಲಿಂ ಮಹಿಳೆಯರು ಸಿಡಿದೆದ್ದಿದ್ದಾರೆ. ಹಿಜಾಬ್‌ನ ಪರ ನಿಂತಿರುವ ಕರ್ನಾಟಕದ ವಿದ್ಯಾರ್ಥಿನಿಯರು ಇರಾನ್‌ನಿಂದ ಪಾಠ ಕಲಿಯಬೇಕು. ಕರ್ನಾಟಕದಲ್ಲಿ ನಿಮಗೆ ಹಿಜಾಬ್ ಬ್ಯಾನ್ ಮಾಡಿಲ್ಲ. ನಿಮಗೆ ಎಲ್ಲಿ ಬೇಕಾದರೂ ಹಿಜಾಬ್ ಧರಿಸಿ ಹೋಗಬಹುದು. ಆದರೆ ಕ್ಲಾಸ್ ರೂಮ್ ಒಳಗಡೆ ಹಿಜಾಬ್ ಬೇಡ ಎಂದಷ್ಟೇ ನಿಯಮವಿದೆ. ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿನಿಯರು ಸಿಎಫ್ಐ, ಪಿಎಸ್ಐ ಬಂಬಡಿ ಬಡಿಯುತ್ತಿದೆ. ಇರಾನ್‌ನಲ್ಲಿ ಏನಾಗುತ್ತಿದೆ ಹೋಗಿ ನೋಡಿ. ನಮ್ಮಲ್ಲಿ ಶೋಷಣೆ ಇಲ್ಲ ಸ್ವಾತಂತ್ರ ಕೊಟ್ಟಿದ್ದೇವೆ. ನಿಮ್ಮನ್ನು ಶೋಷಣೆ ಮಾಡುತ್ತಿರುವ ಮುಸ್ಲಿಂ ಪುರುಷ ಸಮಾಜದ ಬಗ್ಗೆ ಎಚ್ಚರವಿರಲಿ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka