ಬಿಜೆಪಿಯಲ್ಲಿ ದಲಿತ ಸಿಎಂ ಬಗ್ಗೆ ಧ್ವನಿಯೆತ್ತಿ ಎನ್.ಮಹೇಶ್ ತಾಕತ್ತು ಪ್ರದರ್ಶಿಸಲಿ | ಮಾಜಿ ಶಾಸಕ ಬಾಲರಾಜ್ ಕಿಡಿ

ಕೊಳ್ಳೇಗಾಲ: ಬಿಜೆಪಿ ಪರ ನಿಂತು ಪಾಲುದಾರಿಕೆ ಪಡೆದು ಸರ್ಕಾರ ರಚನೆಯಲ್ಲಿ ಪಾಲ್ಗೊಂಡ ಶಾಸಕ ಎನ್.ಮಹೇಶ್, ಬಿಜೆಪಿ ಸರ್ಕಾರದಲ್ಲಿ ದಲಿತ ಸಿಎಂ ಮಾಡುವಂತೆ ಧ್ವನಿ ಎತ್ತಿ, ಅವರ ತಾಕತ್ತು ಪ್ರದರ್ಶಿಸಲಿ ಎಂದು ಮಾಜಿ ಶಾಸಕ ಬಾಲರಾಜ್ ಸವಾಲು ಹಾಕಿದ್ದಾರೆ.
ಕೊಳ್ಳೇಗಾಲ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎಂದು ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರವಾಗಿ ಶಾಸಕ ಎನ್.ಮಹೇಶ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಅದರದ್ದೇ ಕಾನೂನು ಇದೆ. ರಾಷ್ಟ್ರ ಹಾಗೂ ರಾಜ್ಯ ವಿಶೇಷ ಸಮಿತಿಗಳಿವೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ಎನ್.ಮಹೇಶ್ ಗೆ ಕಾಂಗ್ರೆಸ್ ಸಿಎಂ ಆಯ್ಕೆಯ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ ಎಂದು ಪ್ರಶ್ನಿಸಿದರು.
ಬಿಎಸ್ ಪಿಯಲ್ಲಿ ಸತತ 20 ವರ್ಷ ಮಾಯಾವತಿ ಅವರನ್ನು ಪ್ರಧಾನಿ ಮಾಡುವ ಪ್ರಯತ್ನ ಮಾಡುತ್ತಾ ರಾಜ್ಯದಲ್ಲಿ ಬಿಎಸ್ ಪಿ ಅಗ್ರ ನಾಯಕರಾಗಿದ್ದ ಎನ್.ಮಹೇಶ್ ಆ ಕಾಲದಲ್ಲಿ ದಲಿತ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಎಲ್ಲೂ ಮಾತನಾಡಲಿಲ್ಲ ಎಂದು ಅವರು ಕಿಡಿಕಾರಿದರು.
ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಬಗ್ಗೆ ಮಾತನಾಡುವ ಎನ್.ಮಹೇಶ್ ಅವರ ವಿರುದ್ಧ ಯಾಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೌರವರ ಪಾಳಯದಲ್ಲಿ ನಿಂತುಕೊಂಡಿರುವ ಎನ್.ಮಹೇಶ್ ಕುಂತಿ ಮಕ್ಕಳಿಗೆ ರಾಜ್ಯ ಕೊಡಿಸುತ್ತಾರಾ? ಸುಮ್ಮನೆ ಏನೇನೋ ಮಾತನಾಡಬಾರದು ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ:
ದಲಿತರನ್ನು ಅಧಿಕಾರದಿಂದ ವಂಚಿಸುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಿದೆ | ಎನ್.ಮಹೇಶ್ ಆಕ್ರೋಶ