ಕಾಂಗ್ರೆಸ್ ನಲ್ಲಿ ಅರ್ಹರು ಬಹಳಷ್ಟಿದ್ದಾರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ರೆ ಯಾರೂ ಇಲ್ಲ | ಪ್ರಿಯಾಂಕ್ ಖರ್ಗೆ ತಿರುಗೇಟು
ಕಲಬುರಗಿ: ಕಾಂಗ್ರೆಸ್ ನ ಸಿಎಂ ಬಗ್ಗೆ ನಿರ್ಧಾರ ಮಾಡಲು ಬಿಜೆಪಿಯವರು ಯಾರು? ಅದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮಲ್ಲಿ ಸಿಎಂ ಅರ್ಹತೆ ಇರುವವವರು ಬಹಳಷ್ಟು ಜನರಿದ್ದಾರೆ. ಹಾಗಾಗಿ ಚರ್ಚೆಯಾಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಬಿಟ್ಟರೆ ಯಾರೂ ಇಲ್ಲ. ಮೊದಲು ಅವರ ಮನೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲಿ ಎಂದು ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದರು.
ಖರ್ಗೆ, ಪರಮೇಶ್ವರ್ ಸಿಎಂ ಎಂಬ ಮಾತು ಕೇಳಿ ಬಂದಾಗ “ದಲಿತ ಸಿಎಂ” ಎಂಬ ಮಾತು ಬರುತ್ತದೆ. ಬೇರೆಯವರು ಸಿಎಂ ಆದಾಗ ಈ ರೀತಿಯ ಚರ್ಚೆ ನಡೆಯುವುದಿಲ್ಲ. ಇದು ಯಾಕೆಂದು ಗೊತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಜಮೀರ್ ಹೇಳಿಕೆಯ ಸಂಬಂಧ ಮಾತನಾಡಿದ ಅವರು, ಅದು ಜಮೀರ್ ಅವರ ವೈಯಕ್ತಿಕ ವಿಚಾರ. ಪಕ್ಷ ಕಟ್ಟುವ ಸಾಮರ್ಥ್ಯ, ಜವಾಬ್ದಾರಿ ಇರುವ ನಾಯಕರು ಈ ರೀತಿಯಾಗಿ ಮಾತನಾಡುವುದಿಲ್ಲ. ನಮ್ಮ ಮಾತುಗಳು ಬೇರೆ ಶಾಸಕರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಆಲೋಚಿಸಿ ಮಾತನಾಡಬೇಕು ಎಂದು ಅವರು ಹೇಳಿದರು.