ಬಿಜೆಪಿಗೆ ಮತ ನೀಡಬೇಡಿ; ಮದುವೆಯಲ್ಲಿ ಜಾಗೃತಿ ಮೂಡಿಸಿದ ಯುವ ಜೋಡಿ
ಕೋಲ್ಕತ್ತಾ: ಹಿಂದಿನ ಚುನಾವಣೆಗಳಲ್ಲಿ, ಮದುವೆ ಮೊದಲಾದ ಸಮಾರಂಭದಲ್ಲಿ ಬಿಜೆಪಿಗೆ ಮತ ಹಾಕಿ ಎಂಬ ಅಭಿಯಾನಗಳನ್ನು ನೀವು ಗಮನಿಸಿರಬಹುದು. ಆದರೆ ಇದೀಗ ಕಾಲ ಬದಲಾಗಿದ್ದು, ಮದುವೆ ಕಾರ್ಯಕ್ರಮವೊಂದರಲ್ಲಿ ಬಿಜೆಪಿಗೆ ಮತ ಚಲಾಯಿಸಬೇಡಿ ಅಭಿಯಾನ ನಡೆದಿದೆ.
ರಾಷ್ಟ್ರ ರಾಜಧಾನಿ ದೆಹಲಿಯಿಂದ ಸಾವಿರಾರು ಕಿ.ಮೀ. ದೂರದ ಪಶ್ಚಿಮ ಬಂಗಾಳದ ಯುವ ಜೋಡಿಯೊಂದು ಬಿಜೆಪಿಗೆ ಮತ ಹಾಕಬೇಡಿ ಎಂದು ತಮ್ಮ ಮದುವೆಗೆ ಬಂದ ಸುಮಾರು 400 ಬಂಧುಗಳಿಗೆ ಜಾಗೃತಿ ಮೂಡಿಸಿದರು.
32 ವರ್ಷ ವಯಸ್ಸಿನ ಕಾಲೇಜೊಂದರ ಸಹಾಯಕ ಪ್ರಾಧ್ಯಾಪಕ ಶೇಖ್ ಮೊಹಮ್ಮದ್ ಹಫಿಜುರ್ ಮತ್ತು 23 ವರ್ಷ ವಯಸ್ಸಿನ ಅಝಿಜಾ ಖತುನ್ ಎಂಬವರು ಮಾರ್ಚ್ 10ರಂದು ಮದುವೆಯಾಗಿದ್ದಾರೆ. ತಮ್ಮ ಮದುವೆಗೆ ಆಗಮಿಸಿದ ಬಂಧುಗಳಿಗೆ, ಸ್ನೇಹಿತರಿಗೆ ಸಂವಿಧಾನದ ಪೀಠಿಕೆಯ ಪ್ರತಿಯನ್ನು ನೀಡಿ ಬಿಜೆಪಿಗೆ ಮತ ಹಾಕಬೇಡಿ ಎಂದು ಹೇಳಿದ್ದಾರೆ.
ದೆಹಲಿ ಚಲೋ ಚಳವಳಿ ಹಾಗೂ ಮೂರು ವಿವಾದಿತ ಕೃಷಿ ಕಾನೂನು ಮೊದಲಾದ ವಿಚಾರಗಳಲ್ಲಿ ಬಿಜೆಪಿ ನಡೆದುಕೊಂಡ ರೀತಿಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮತ್ತು ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಬೇಡಿ ಎಂದು ನೂತನ ಜೋಡಿ ಮನವಿ ಮಾಡಿದೆ.
ಇನ್ನೂ ಬಿಜೆಪಿಗೆ ಮತ ನೀಡಬೇಡಿ ಎಂದಷ್ಟೇ ಯುವ ಜೋಡಿ ಜಾಗೃತಿ ಮೂಡಿಸಿದೆ. ಇಂತಹ ಪಕ್ಷಕ್ಕೆ ಮತ ನೀಡಿ ಎಂದು ಹೇಳಿಲ್ಲ. ಪಶ್ಚಿಮ ಬಂಗಾಳದಲ್ಲಿ ಭಾರೀ ಪೈಪೋಟಿಯ ಪ್ರಚಾರದ ನಡುವೆಯೇ ಇಂತಹದ್ದೊಂದು ಜಾಗೃತಿ ಕಾರ್ಯಕ್ರಮಗಳು ಸದ್ದಿಲ್ಲದೇ ಆರಂಭವಾಗಿವೆ.